ADVERTISEMENT

ಉದ್ದೇಶಪೂರ್ವಕ ಜಾತಿನಿಂದನೆ ಮಾತ್ರ ಅಪರಾಧ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 18:31 IST
Last Updated 30 ಜನವರಿ 2023, 18:31 IST
   

ಬೆಂಗಳೂರು: ‘ಕೇವಲ ಜಾತಿ ಹಿಡಿದು ಬೈಯ್ದಾಕ್ಷಣ ಅದನ್ನು ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್ಟಿ) ದೌರ್ಜನ್ಯ ತಡೆ ಕಾಯ್ದೆಯಡಿಯ ಅಪರಾಧ ಎಂದು ಪರಿಗಣಿಸಲು ಆಗದು. ಉದ್ದೇಶಪೂರ್ವಕ ಮತ್ತು ಅಪಮಾನ ಮಾಡುವುದಕ್ಕಾಗಿಯೇ ಜಾತಿ ನಿಂದನೆ ಮಾಡಿದರಷ್ಟೇ ಅಪರಾಧ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

‘ನನ್ನ ವಿರುದ್ಧ ಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ದಾಖಲಿಸಿರುವ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಆನೇಕಲ್‌ನ ಸೂರ್ಯನಗರದ ವಿ.ಶಶಿಕುಮಾರ್ ‌ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಭಾಗಶಃ ಮಾನ್ಯ ಮಾಡಿದೆ.

‘ಈ ಪ್ರಕರಣದಲ್ಲಿ ಜಗಳ ನಡೆದಾಗ ಎರಡೂ ಕಡೆಯವರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಆರೋಪಿಯು ಉದ್ದೇಶಪೂರ್ವಕವಾಗಿ ಅಥವಾ ಅಪಮಾನ ಮಾಡಲೆಂದೇ ಜಾತಿ ನಿಂದನೆ ಮಾಡಿದ್ದಾನೆ ಎನ್ನುವುದಕ್ಕೆ ಯಾವುದೇ ವಿವರಗಳಿಲ್ಲ. ಆರೋಪ
ಪಟ್ಟಿ ಮತ್ತು ಸಾಕ್ಷಿಗಳ ಹೇಳಿಕೆಯಲ್ಲೂ ಕೂಡಾ ಯಾಕಾಗಿ ಜಾತಿ ನಿಂದನೆ ಮಾಡಲಾಯಿತು, ಹೇಗೆ ಮಾಡಲಾಯಿತು ಎಂಬುದರ ವಿವರಗಳಿಲ್ಲ. ಹೀಗಾಗಿ, ಈ ಪ್ರಕರಣ ಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ವಿಚಾರಣೆಗೆ ಊರ್ಜಿತವಲ್ಲ’ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

ಅರ್ಜಿದಾರರ ವಿರುದ್ಧದ ಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಕಲಂ 3(1)(ಆರ್) ಮತ್ತು (ಎಸ್)ರ ಅಡಿಯ ಆರೋಪ
ಗಳನ್ನು ರದ್ದುಗೊಳಿಸಿರುವ ನ್ಯಾಯಪೀಠ, ಭಾರತೀಯ ದಂಡ ಸಂಹಿತೆ ಕಲಂಗಳಡಿ ದಾಖಲಾಗಿರುವ ಪ್ರಕರಣದ ಮುಂದುವರಿಕೆಗೆ ಅನುಮತಿ ನೀಡಿದೆ.

ಪ್ರಕರಣವೇನು?: ‘ನನ್ನ ಮಗ ಮತ್ತು ಆತನ ಸ್ನೇಹಿತರು ಕ್ರಿಕೆಟ್ ಆಡುತ್ತಿದ್ದ ವೇಳೆ ಎರಡು ತಂಡಗಳ ನಡುವೆ ಜಗಳ ನಡೆದಿದೆ. ಆಗ ನನ್ನ ಮಗನನ್ನು ಥಳಿಸಲಾಗಿದೆ’ ಎಂದು ಆರೋಪಿಸಿ ಜಯಮ್ಮ ಎಂಬುವವರು 2020ರ ಜೂನ್ 14ರಂದು ಪೊಲೀಸರಿಗೆ ದೂರು ನೀಡಿದ್ದರು. ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ತನಿಖೆಯ ವೇಳೆ, ‘ಫಿರ್ಯಾದಿದಾರರ ಮಗನನ್ನು ಕೇವಲ ಥಳಿಸಿಲ್ಲ,ಅವಾಚ್ಯ ಶಬ್ದಗಳಿಂದಲೂ ನಿಂದಿಸಲಾಗಿದೆ’ ಎಂದು ಆರೋಪಿಸಿದ್ದ ಕಾರಣ ತನಿಖೆ ಮುಂದುವರಿಸಿದ ಪೊಲೀಸರು, ಅರ್ಜಿದಾರರು ಹಾಗೂ ಇತರ ಆರೋಪಿಗಳ ವಿರುದ್ಧ ಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಕಲಂ 3(1)(ಆರ್) ಮತ್ತು (ಎಸ್) ಅಡಿಯಲ್ಲಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.