ADVERTISEMENT

ಮಂಕಿಪಾಕ್ಸ್‌: ಒಂದು ಶಂಕಿತ ಪ್ರಕರಣ -ಸಚಿವ ಡಾ.ಕೆ. ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 15:56 IST
Last Updated 2 ಆಗಸ್ಟ್ 2022, 15:56 IST
ಡಾ.ಕೆ.ಸುಧಾಕರ್‌ 
ಡಾ.ಕೆ.ಸುಧಾಕರ್‌    

ಬೆಂಗಳೂರು: ‘ರಾಜ್ಯದಲ್ಲಿ ಮಂಕಿಪಾಕ್ಸ್‌ ಸೋಂಕಿನ ಮೂರು ಶಂಕಿತ ಪ್ರಕರಣಗಳ ಮಾದರಿಗಳನ್ನು ಪರೀಕ್ಷೆಗೆ ರವಾನಿಸಿದ್ದು, ಎರಡರಲ್ಲಿ ‘ನೆಗೆಟಿವ್‌’ ವರದಿ ಬಂದಿದೆ. ಒಂದು ಶಂಕಿತ ಪ್ರಕರಣದ ವರದಿಯಷ್ಟೇ ಬರಬೇಕಿದೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಮಂಕಿಪಾಕ್ಸ್‌ ಸೋಂಕು ನಿಯಂತ್ರಣ ಮತ್ತು ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಂಗಳವಾರ ನಡೆದ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮೂರು ಶಂಕಿತ ಪ್ರಕರಣಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಬೆಂಗಳೂರಿನ ಇಬ್ಬರ ವರದಿ ನೆಗೆಟಿವ್‌ ಬಂದಿದೆ. ಬೆಲ್ಜಿಯಂನಿಂದ ಬಂದಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿರುವ ವ್ಯಕ್ತಿಯೊಬ್ಬರ ಮಾದರಿಯ ಪರೀಕ್ಷಾ ವರದಿ ಬರಬೇಕಿದೆ’ ಎಂದರು.

ಸದ್ಯ ದೇಶದಲ್ಲಿ ಆರು ಪ್ರಕರಣಗಳಿವೆ. ಕೇರಳದಲ್ಲಿ ನಾಲ್ಕು ಮತ್ತು ದೆಹಲಿಯಲ್ಲಿ ಇಬ್ಬರು ಮಂಕಿಪಾಕ್ಸ್‌ ರೋಗಿಗಳಿದ್ದಾರೆ. ಜಗತ್ತಿನ 80 ದೇಶಗಳಲ್ಲಿ ಈ ಸೋಂಕು ಹರಡಿದ್ದು, 20,000 ಮಂದಿಯಲ್ಲಿ ದೃಢಪಟ್ಟಿದೆ. ಕರ್ನಾಟಕದಲ್ಲಿ ಜನರು ಆತಂಕಪಡಬೇಕಾದ ಪರಿಸ್ಥಿತಿ ಇಲ್ಲ ಎಂದು ಹೇಳಿದರು.

ADVERTISEMENT

ಕೇರಳಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರಕ್ಕೆ ಆ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಬೆಂಗಳೂರಿನ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಮತ್ತು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗಳನ್ನು ಮಂಕಿಪಾಕ್ಸ್‌ ಸೋಂಕಿತರ ಚಿಕಿತ್ಸೆಗೆ ನಿಗದಿಪಡಿಸಿದ್ದು, ಅಲ್ಲಿ ಪ್ರತ್ಯೇಕ ಹಾಸಿಗೆಗಳನ್ನು ಮೀಸಲಿಡಲಾಗಿದೆ ಎಂದು ಸುಧಾಕರ್‌ ತಿಳಿಸಿದರು.

ಮಂಕಿಪಾಕ್ಸ್‌ ಸೋಂಕಿತರಲ್ಲಿ ಜ್ವರ, ರಕ್ತ ಕಣಗಳ ಗುಂಪು ದೊಡ್ಡದಾಗುವುದು, ಚರ್ಮದಲ್ಲಿ ಗುಳ್ಳೆಗಳು ಮೂಡುತ್ತವೆ. ಸೋಂಕು ದೃಢಪಟ್ಟರೆ 21 ದಿನಗಳ ಕಾಲ ಆಸ್ಪತ್ರೆಯಲ್ಲೇ ಇರಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ಹೆಚ್ಚು ಕಾಲ ನಿಕಟವಾಗಿ ಸಂಪರ್ಕದಲ್ಲಿರುವವರಿಗೆ ಮಾತ್ರ ಈ ಸೋಂಕು ಹರಡುತ್ತದೆ. ಹೀಗಾಗಿ ಜನರು ಆತಂಕಪಡುವ ಅಗತ್ಯವಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.