ADVERTISEMENT

ಅವನು...ಜಾತಿ ಅಂತೇ ಸುಡುಗಾಡು!: ‘ಆಪರೇಷನ್ ಆಡಿಯೊ’ದಲ್ಲಿ ಆಕ್ಷೇಪಾರ್ಹ ಪದ ಬಳಕೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2019, 3:25 IST
Last Updated 14 ಫೆಬ್ರುವರಿ 2019, 3:25 IST
   

ಬೆಂಗಳೂರು: ‘ಆಪರೇಷನ್‌ ಕಮಲ’ದ ಪೂರ್ಣ ಸಂಭಾಷಣೆ ಇದೆ ಎಂದು ಆರೋಪಿಸಲಾಗುತ್ತಿರುವ 80 ನಿಮಿಷಗಳ ಆಡಿಯೊ ಬುಧವಾರ ಬಹಿರಂಗವಾಗಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಶಾಸಕರಾದ ಶಿವನಗೌಡ ನಾಯಕ್‌, ಪ್ರೀತಂ ಗೌಡ, ಗುರುಮಠಕಲ್‌ ಶಾಸಕ ನಾಗನಗೌಡ ಕುಂದಕೂರ ಅವರ ಪುತ್ರ ಶರಣಗೌಡ ಮತ್ತು ಅನಾಮಿಕ(ಎಂ.ಬಿ. ಮರಂಕಲ್‌) ವ್ಯಕ್ತಿಯೊಬ್ಬರ ಮಧ್ಯೆ ನಡೆದ ಸಂಭಾಷಣೆ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.

ತಲಾ 40 ನಿಮಿಷಗಳ ಎರಡು ಆಡಿಯೊ ತುಣುಕುಗಳು ಜೆಡಿಎಸ್‌– ಕಾಂಗ್ರೆಸ್‌ ಶಾಸಕರನ್ನು ಪಕ್ಷದತ್ತ ಸೆಳೆಯುವ ಕಮಲ ಪಕ್ಷದ ನಾಯಕರ ‘ತಂತ್ರ’ಗಾರಿಕೆಯನ್ನು ಬಯಲಿಗೆಳೆದಿದೆ ಎಂದೇ ಹೇಳಲಾಗುತ್ತಿದೆ.

ADVERTISEMENT

ಸಂಭಾಷಣೆಯ ಸಾರಾಂಶ: ‘ಸಾಹೇಬ್ರು (ಯಡಿಯೂರಪ್ಪ) ಒಳ್ಳೆಯದು ಮಾಡ್ತಾರೆ. ನೀನು ರೆಡಿ ಆಗು ಉಳಿದಿದ್ದು ವಿಜಯಣ್ಣ ಜೊತೆ ಮಾತನಾಡುತ್ತೇನೆ. ಸಾಹೇಬ್ರ ಆಶೀರ್ವಾದ ತಗೋ.. ನೀವು ಸಮಾಜದವರು. ನಿಮ್ಮ ಸಮಾಜದವರೊಬ್ಬರನ್ನು ಮುಖ್ಯಮಂತ್ರಿ ಮಾಡೋಕೆ ಹೆಮ್ಮೆ ಇರಬೇಕು. ಅವನ್‌ ಯಾರೋ ಕುಮಾರಸ್ವಾಮಿ ರಾಮನಗರದವರು.. ಹಾಸನದವರು ಸಂಬಂಧ ಇಲ್ಲದಕ್ಕೆ ಸಾಯ್ತಿ’ ಎಂದು ಶಿವನಗೌಡ ನಾಯಕ್‌ ಹೇಳುತ್ತಾರೆ.

‘ವೀರಶೈವ ವ್ಯಕ್ತಿಯನ್ನ ಮುಖ್ಯಮಂತ್ರಿ ಮಾಡಿದರೆ ಒಂದು ಇತಿಹಾಸ ಆಗುತ್ತದೆ... ಅವನು ಕುಮಾರಣ್ಣನಿಗೆ ಜಾತಿ... ಅವನು ಸಿದ್ದರಾಮಯ್ಯ...ಜಾತಿ ಅಂತೇ ಸುಡಗಾಡು. ನಮಗೆ ಏನಂದ್ರೆ ಲಿಂಗಾಯಿತರನ್ನ ಮುಖ್ಯಮಂತ್ರಿ ಮಾಡಿದ್ರೆ ಒಂದು ಕ್ರೆಡಿಟ್‌ ಸಿಗುತ್ತೆ. ಲಾಂಗ್‌ ಲೈಫ್‌ ಇರುತ್ತದೆ’ ಎಂದಿದ್ದಾರೆ ಶಿವನಗೌಡ.

‘ಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಹಣಕಾಸು ನೆರವು ನೀಡಿದ್ದಾರೆ’ ಎಂಬ ಶರಣಗೌಡ ಮಾತಿಗೆ, ‘2–3 ಕೋಟಿ ಕೊಟ್ಟಿರುತ್ತಾರೆ’ ಎಂದು ಯಡಿಯೂರಪ್ಪ ಹೇಳುತ್ತಾರೆ. ಅದಕ್ಕೆ ಶಿವನಗೌಡ ಜಾಸ್ತಿ ಮಾಡಿರುತ್ತಾರೆ ಎಂದಾಗ, ‘ಅಷ್ಟೆ ಸರ್‌’ ಎಂದೂ ಶರಣಗೌಡ ಪ್ರತಿಕ್ರಿಯಿಸಿದ್ದಾರೆ.

ಈ ಮಧ್ಯೆ, ‘ಸಿದ್ದರಾಮಯ್ಯ, ಕುಮಾರಸ್ವಾಮಿ ಎಲ್ಲರನ್ನೂ ಬಹಳ ಹತ್ತಿರದಿಂದ ಗೊತ್ತು’ ಎಂದು ಹೇಳಿಕೊಳ್ಳುವ ಅನಾಮಿಕ ವ್ಯಕ್ತಿ, ಬಿಜೆಪಿ ಪರವಾಗಿ ಮಾತನಾಡುತ್ತಾರೆ. ಹಣದ ವಿಷಯ ಬಂದಾಗ ವಿಜಯೇಂದ್ರ ಹೆಸರೂ ಪ್ರಸ್ತಾಪವಾಗುತ್ತದೆ. ಬಿಜೆಪಿ ಕಡೆ ಶರಣಗೌಡ ಮನಸ್ಸು ಬದಲಾಯಿಸುವಂತೆ ಮಾಡುವ ನಿಟ್ಟಿನಲ್ಲಿ ಶಿವನಗೌಡ ನಾಯಕ್‌ ಮತ್ತು ಪ್ರೀತಂ ಗೌಡ ಮಾತುಕತೆ ನಡೆಸುತ್ತಾರೆ.

‘ನೀವು ಇಲ್ಲಾಂದ್ರೆ ಜೆಡಿಎಸ್‌ಗೆ ಬೇಸ್‌ ಇಲ್ಲ’ ಎಂದು ಅನಾಮಿಕ ವ್ಯಕ್ತಿ ಹೇಳಿದಾಗ, ‘ದೇವೇಗೌಡ ಮತ್ತು ಕುಮಾರಸ್ವಾಮಿ ನಮ್ಮಂಥವರನ್ನು ಹುಟ್ಟಿಸುತ್ತಾರೆ’ ಎಂದು ಶರಣಗೌಡ ಪ್ರತಿಕ್ರಿಯಿಸುತ್ತಾರೆ. ಆಗ ಮಧ್ಯಪ್ರವೇಶಿಸುವ ಪ್ರೀತಂಗೌಡ, ‘ಹಾಸನದಲ್ಲಿ ನಿನ್ನಂಥವರು, ನನ್ನಂಥವರು ನಿಂತ್ರೆ ಏನೂ ಮಾಡೋಕೆ ಆಗಲ್ಲ. ಇಲ್ಲಿ ನಿಮ್ಮ ಸ್ವಂತ ತಾಕತ್ತು ಬೇಕು’ ಎನ್ನುತ್ತಾರೆ.

ಪಕ್ಷಕ್ಕೆ ಬರಲು ಎಷ್ಟು ಹಣ ಕೊಡಬೇಕು ಎಂಬ ವಿಷಯ ಬಂದಾಗ ವಿಜಯೇಂದ್ರನ ಜೊತೆ ಮಾತನಾಡಿಸುವುದಾಗಿ ಹೇಳುವ ಶಿವನಗೌಡ ನಾಯಕ್‌, ‘ಏನ್‌ ಇದೆ ನಿನ್‌ ಫಿಗರ್‌ ಹೇಳಿ ಬಿಡಣ್ಣ’ ಎಂದು ಶರಣಗೌಡನನ್ನು ಪ್ರಶ್ನಿಸುತ್ತಾರೆ.

‘ಮುಂಬೈಯಲ್ಲಿ ಇರುವವರಿಗೆ ಮಂತ್ರಿ ಕೊಟ್ಟು 15 ಕೊಟ್ಟಿದ್ದಾರೆ. ನಿನಗೆ 15 ಬೇಡ....’ ಎಂದೂ ಶಿವನಗೌಡ ಹೇಳಿದಾಗ, ‘ಅಲ್ಲಿ ಇರುವವರು ಯಾರು’ ಎಂದು ಶರಣ ಗೌಡ ಕೇಳುತ್ತಾರೆ.

ಆಗ ಮಧ್ಯಪ್ರವೇಶಿಸುವ ಪ್ರೀತಂ ಗೌಡ, ‘ಮುಂಬೈನಲ್ಲಿರುವವರ ಜೊತೆ ವಿಡಿಯೊ ಕಾಲ್‌ ಮಾಡ್ಸೋಣ’ ಎಂದೂ ಸಲಹೆ ನೀಡುತ್ತಾರೆ.

ಈ ವೇಳೆ ಅನಾಮಿಕ ವ್ಯಕ್ತಿ, ‘ರಮೇಶ, ಉಮೇಶ್‌, ನಾರಾಯಣಗೌಡ, ದದ್ದಲ್‌, ಚಿಮ್ಮನಕಟ್ಟಿ, ನಾಗೇಶ್‌, ಶಂಕರ್‌... ಪ್ರತಾಪ್‌ಗೌಡ, ದದ್ದಲ್‌ ಬಿಟ್ಟರೆ ಎಲ್ಲರೂ ಇದ್ದಾರೆ. ತುಮಕೂರು ಒಬ್ರು ಬರ್ತಾರೆ ಗೌರಿ ಶಂಕರ್‌’ ಎಂದು ಹೇಳುತ್ತಾರೆ.

‘ನೀನು ಮೆಂಟಲಿ ರೆಡಿ ಆಗು. ಅಪ್ಪನನ್ನು ಒಪ್ಪಿಸು. ಉಳಿದಿದಿದ್ದು ನನಗೆ ಬಿಡು. ಕ್ಯಾಶ್‌ ಎಲ್ಲಿಗೆ ತಲುಪಿಸಬೇಕು ಹೇಳು. ಅಲ್ಲಿಗೆ ತಲುಪಿಸುತ್ತೇನೆ. ನನ್ ಜವಾಬ್ದಾರಿ. ನೀನು ಬಾಂಬೆಗೆ ಹೋಗಿ ನೋಡ್ಕೊಂಡು ಬಾ. 11 ಯಾರಿದ್ದಾರೆ ನೋಡಿಕೊಂಡು ಅವರ ಜೊತೆ ಮಾತಾಡಿ ಸೀದಾ ಬಂದುಬಿಡು’ ಎಂದು ಶಿವನಗೌಡ ಹೇಳಿದಾಗ, ‘ಆಯಿತು ಅಣ್ಣ’ ಎಂದು ಶರಣಗೌಡ ಹೇಳುತ್ತಾರೆ.

ಎರಡನೇ ಆಡಿಯೊದಲ್ಲಿ ಶರಣಗೌಡ ಅವರು ‘ಸ್ಪೀಕರ್‌ ಅವರು ತಮ್ಮ ತಂದೆಯ ಶಾಸಕ ಸ್ಥಾನ ಅನರ್ಹಗೊಳಿಸುತ್ತಾರೆಯೇ’ ಎಂಬ ಸಂಶಯ ವ್ಯಕ್ತಪಡಿಸಿದಾಗ,‘ನೋಡಪ್ಪ, ನೋಟಿಸು, ಸ್ಪೀಕರ್‌ ಯಾವುದಕ್ಕೂ ಕವಡೆ ಕಾಸಿನ ಕಿಮ್ಮತ್ತು ಇಲ್ಲ. ನಿಮ್ಮ ಫಾದರ್‌ ಹದಿನೈದು ದಿನಗಳಲ್ಲಿ ರಾಜೀನಾಮೆ ಕೊಡಲು ಹೋಗುತ್ತಾರಲ್ಲ ಆಗ ಮುಲಾಜಿಲ್ಲದೆ ಸ್ಪೀಕರ್‌ಗೆ ರಾಜೀನಾಮೆ ಬೀಸಾಕಬೇಕು ಅಷ್ಟೇ, ಕಮಕ್‌ ಕಿಮಕ್‌ ಏನಿದೆ..’ ಎಂದು ಯಡಿಯೂರಪ್ಪ ಹೇಳುತ್ತಾರೆ.

‘ನಿಮ್ಮ ಫಾದರ್‌ ರಾಜೀನಾಮೆ ಕೊಡಲು ಸಿದ್ಧರಾದ ಮೇಲೆ ಆ್ಯಕ್ಷನ್‌ ತೆಗೆದುಕೊಂಡರೆ ಏನು ಬೆಲೆ ಇದೆ. ಏನೇ ಆ್ಯಕ್ಷನ್‌ ತೆಗೆದುಕೊಂಡರೂ ಅದು ಈ ಟರ್ಮ್‌ಗೆ ಮಾತ್ರ. ನಾಳೆ ಎಲೆಕ್ಷನ್‌ಗೆ ಸ್ಪರ್ಧಿಸುವಾಗ ಯಾವ ಕಾನೂನು ಅಡ್ಡಿ ಬರುವುದಿಲ್ಲ’ ಎನ್ನುತ್ತಾರೆ ಯಡಿಯೂರಪ್ಪ.

‘ಜೆಡಿಎಸ್‌ನವರು ಯಾರಾದರೂ ಬಂದಿದ್ದಾರಾ’ ಎಂಬ ಶರಣಗೌಡರ ಪ್ರಶ್ನೆಗೆ, ನಾರಾಯಣಗೌಡರು ಬರುತ್ತಾರೆ ಎಂಬ ಉತ್ತರ ಯಡಿಯೂರಪ್ಪ ಅವರದು. ಆಗ ಶಿವನಗೌಡ ಮತ್ತು ಇನ್ನಿಬ್ಬರು, ‘ಸರ್ಕಾರ ಬಿದ್ದು ಹೋಯಿತು ಎಂದರೆ, ಜೆಡಿಎಸ್‌ ಅನ್ನು ಯಾರು ಕೇಳುತ್ತಾರೆ. ರಾಜ್ಯದಲ್ಲಿ ಜೆಡಿಎಸ್‌ ಇರೋದೆ ಇಲ್ಲ’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.