ADVERTISEMENT

ಪೌರತ್ವ ಜನಜಾಗೃತಿಗೆ ಅಡ್ಡಿ; ಲಾಠಿ ಪ್ರಹಾರ

ಮೂವರು ಪೊಲೀಸರ ವಶಕ್ಕೆ; ಸ್ಥಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 16:44 IST
Last Updated 7 ಜನವರಿ 2020, 16:44 IST
ಲಘು ಲಾಠಿ ಪ್ರಹಾರ ನಡೆಸಿ ಪೊಲೀಸರು ಯುವಕರ ಗುಂಪನ್ನು ಚದುರಿಸಿದರು
ಲಘು ಲಾಠಿ ಪ್ರಹಾರ ನಡೆಸಿ ಪೊಲೀಸರು ಯುವಕರ ಗುಂಪನ್ನು ಚದುರಿಸಿದರು   

ಹೊಸಪೇಟೆ: ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕರಪತ್ರ ಹಂಚಿ, ಜನಜಾಗೃತಿ ಮೂಡಿಸುತ್ತಿದ್ದ ಬಿಜೆಪಿ ಮುಖಂಡರು, ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕುತ್ತ ‘ಗೋ ಬ್ಯಾಕ್‌’ ಎಂದು ಘೋಷಣೆ ಕೂಗುತ್ತಿದ್ದ ಇಲ್ಲಿನ ಚಿತ್ತವಾಡ್ಗಿಯ ಯುವಕರನ್ನು ಚದುರಿಸಲು ಪೊಲೀಸರು ಮಂಗಳವಾರ ಸಂಜೆ ಲಘು ಲಾಠಿ ಪ್ರಹಾರ ನಡೆಸಿದರು.

ಬಿಜೆಪಿಯವರು ಕರಪತ್ರ ಹಂಚುತ್ತ ಹೋಗುತ್ತಿದ್ದಾಗ ಎರಡೂ ಕಡೆ, ‘ಗೋ ಬ್ಯಾಕ್‌’ ಎಂಬ ಬರಹ ಹಾಗೂ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರವಿರುವ ಪೋಸ್ಟರ್‌ ಹಿಡಿದುಕೊಂಡು ಯುವಕರು ನಿಂತಿದ್ದರು. ಬಿಜೆಪಿ ಕಾರ್ಯಕರ್ತರು ಮುಂದೆ ಹೋಗುತ್ತಿದ್ದಂತೆ ಅವರೊಂದಿಗೆ ಹೆಜ್ಜೆ ಹಾಕುತ್ತ ಘೋಷಣೆ ಕೂಗುತ್ತ ಹೋದರು. ನೂಕಾಟ, ತಳ್ಳಾಟ ಉಂಟಾಗುತ್ತಿರುವುದನ್ನು ಗಮನಿಸಿದ ಪೊಲೀಸರು, ಲಾಠಿ ಪ್ರಹಾರ ನಡೆಸಿದರು. ಇದರಿಂದ ಯುವಕರು ದಿಕ್ಕಾಪಾಲಾಗಿ ಓಡಿದರು. ಬಳಿಕ ಬಿಜೆಪಿಯವರು ಅರ್ಧದಲ್ಲಿಯೇ ಜನಜಾಗೃತಿ ಮೊಟಕುಗೊಳಿಸಿ ವಾಪಾಸಾದರು.

‘ಬಿಜೆಪಿಯವರು ಜನಜಾಗೃತಿ ಅಭಿಯಾನ ನಡೆಸುತ್ತಿದ್ದಾಗ, ಸ್ಥಳೀಯ ಯುವಕರು ವಿರೋಧ ವ್ಯಕ್ತಪಡಿಸಿದರು. ಆದರೆ, ಮಾರ್ಗದುದ್ದಕ್ಕೂ ಬಿಜೆಪಿಯವರೊಂದಿಗೆ ಹೆಜ್ಜೆ ಹಾಕಿ, ಘೋಷಣೆ ಕೂಗಿ ಅವರನ್ನು ಪ್ರಚೋದಿಸುತ್ತಿದ್ದರು. ಇದೇ ವೇಳೆ ನೂಕಾಟ, ತಳ್ಳಾಟ ಉಂಟಾಗಿದ್ದರಿಂದ ಪರಿಸ್ಥಿತಿ ನಿಭಾಯಿಸಲು ಲಘು ಲಾಠಿ ಪ್ರಹಾರ ಮಾಡಬೇಕಾಯಿತು. ಪ್ರಚೋದಿಸುತ್ತಿದ್ದ ಮೂವರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಡಿ.ವೈ.ಎಸ್ಪಿ. ವಿ. ರಘುಕುಮಾರ ‘ಪ್ರಜಾವಾಣಿ‘ಗೆ ತಿಳಿಸಿದರು.

ADVERTISEMENT

ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿರುವುದು ಗೊತ್ತಾಗಿ ನೂರಾರು ಜನ ಚಿತ್ತವಾಡ್ಗಿ ಠಾಣೆ ಎದುರು ಸೇರಿದ್ದರು. ಈ ವೇಳೆ ಶಾಸಕ ಆನಂದ್‌ ಸಿಂಗ್‌ ಅಲ್ಲಿಗೆ ಬಂದು ಜನರನ್ನು ಕಳುಹಿಸಿದರು. ಶಾಂತಿ ಕಾಪಾಡಿಕೊಂಡು ಹೋಗುವಂತೆ ಬಿಜೆಪಿ ಮುಖಂಡರು ಹಾಗೂ ಯುವಕರ ಕಡೆಯವರಿಗೆ ಹೇಳಿದರು.

ಚಿತ್ತವಾಡ್ಗಿಯ ಮುಖ್ಯರಸ್ತೆಯುದ್ದಕ್ಕೂ ‘ಗೋ ಬ್ಯಾಕ್‌’ ಎಂದು ಬರೆಯಲಾಗಿತ್ತು. ಎಲ್ಲಾ ಕಟ್ಟಡಗಳಿಗೂ ವಿರೋಧ ಸೂಚಿಸುವ ಪೋಸ್ಟರ್‌ ಅಂಟಿಸಲಾಗಿತ್ತು. ಮುಂಜಾಗರೂಕತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.