ADVERTISEMENT

ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ: ವಿರೋಧ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 9:10 IST
Last Updated 16 ಡಿಸೆಂಬರ್ 2018, 9:10 IST
ಅಶೋಕ ಚಂದರಗಿ
ಅಶೋಕ ಚಂದರಗಿ   

ಬೆಳಗಾವಿ: ರಾಜ್ಯದ ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ, 1ನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮವನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿಗೊಳಿಸುವ ಸರ್ಕಾರದ ಕ್ರಮವನ್ನು ವಿರೋಧಿಸಿರುವ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ ಮತ್ತು ಪ್ರೊ.ಚಂದ್ರಶೇಖರ ಪಾಟೀಲ ಅವರ ನಿಲುವನ್ನು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಬೆಂಬಲಿಸಿದೆ. ‘ಕನ್ನಡಕ್ಕೆ ಕಂಟಕಪ್ರಾಯವಾದ ನಿಲುವಿನಿಂದ ಸರ್ಕಾರ ಹಿಂದೆ ಸರಿಯಬೇಕು’ ಎಂದು ಆಗ್ರಹಿಸಿದೆ.

‘ಮಹಾರಾಷ್ಟ್ರದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಜಾರಿಗೆ ತರುವ ಪ್ರಯತ್ನ ಮಾಡಿದಾಗ, ಪ್ರಾದೇಶಿಕ ಭಾಷೆಗೆ ಧಕ್ಕೆಯಾದಾಗ ಅಲ್ಲಿನ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿದಿದ್ದನ್ನು ಬರಗೂರು ಉಲ್ಲೇಖಿಸಿದ್ದಾರೆ. 1998ರಲ್ಲಿ, ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಜಾರಿಗೆ ತರಲು ನಡೆಸಿದ ಯತ್ನಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಆಗ ಸರ್ಕಾರ ತನ್ನ ನಿರ್ಧಾರ ಕೈಬಿಟ್ಟಿತ್ತು’ ಎಂದು ಕ್ರಿಯಾಸಮಿತಿ ಅಧ್ಯಕ್ಷ ಅಶೋಕ ಚಂದರಗಿ ತಿಳಿಸಿದ್ದಾರೆ.

‘ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸುವುದಕ್ಕೆ ಯಾರದೇ ವಿರೋಧ ಇಲ್ಲ. ಆದರೆ ಮಾಧ್ಯಮವನ್ನಾಗಿ ಮಾಡಿದರೆ ಕನ್ನಡದ ಭವಿಷ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ಸರ್ಕಾರ ಚಿಂತಿಸಬೇಕು’ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.