ADVERTISEMENT

ಹಳೆ ಬಾಕಿ ಪಾವತಿಗೆ ಆದೇಶ: ಕೊರಗ ಸಮುದಾಯ ಕಂಗಾಲು

ಕೊರಗರಿಗೆ ಉಚಿತ ಆರೋಗ್ಯ ಸೌಲಭ್ಯ ರದ್ದು

ಅದಿತ್ಯ ಕೆ.ಎ.
Published 26 ಆಗಸ್ಟ್ 2022, 20:13 IST
Last Updated 26 ಆಗಸ್ಟ್ 2022, 20:13 IST
ಸುಂದರ
ಸುಂದರ   

ಬೆಂಗಳೂರು: ಕೊರಗ ಸಮುದಾಯಕ್ಕೆ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಲಭಿಸುತ್ತಿದ್ದ ಉಚಿತ ಆರೋಗ್ಯ ಸೌಲಭ್ಯವನ್ನು ಏಪ್ರಿಲ್‌ 15ರಿಂದ ರಾಜ್ಯ ಸರ್ಕಾರ ರದ್ದುಗೊಳಿಸಿದೆ. ‌

‘ಖಾಸಗಿ ಆಸ್ಪತ್ರೆಗಳ ಹಳೇ ಬಾಕಿ ಮಾತ್ರ ಮರು ಪಾವತಿಸಲಾಗುವುದು. ಮುಂದೆ ವೈದ್ಯಕೀಯ ವೆಚ್ಚ ಮರುಪಾವತಿಗೆ ಅವಕಾಶ ಇಲ್ಲ. ಹಳೇ ಬಾಕಿ ₹ 1.25 ಕೋಟಿ ಬಿಡುಗಡೆ ಮಾಡಲಾಗುವುದು’ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ಕಾರ್ಯದರ್ಶಿ ಶಂಭುಲಿಂಗಪ್ಪ ಇತ್ತೀಚಿನ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಕಂಗಾಲು: ಸರ್ಕಾರದ ನಿರ್ಧಾರದಿಂದ ಅಳಿವಿನ ಅಂಚಿನಲ್ಲಿರುವ ಬುಡಕಟ್ಟು ಸಮುದಾಯ ಕಂಗಾಲಾಗಿದೆ.

ADVERTISEMENT

‘ಬುಟ್ಟಿ ಹೆಣೆಯುವುದು ಕುಲಕಸುಬು. ಪರಿಶಿಷ್ಟ ಪಂಗಡದ ನೈಜ ಬುಡಕಟ್ಟು ಸಮುದಾಯವಾಗಿರುವ ಕೊರಗರು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ. ಶಿವಮೊಗ್ಗ, ಬೆಂಗಳೂರು, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೆ ಕೂಲಿ ಅರಸಿ ಕೆಲವು ಕುಟುಂಬಗಳು ವಲಸೆ ಹೋಗಿವೆ. ಉಚಿತ ಆರೋಗ್ಯ ಸೌಲಭ್ಯ ನಿರಾಕರಿಸಿದ್ದರಿಂದ ಗಂಭೀರ ಕಾಯಿಲೆಗೆ ಚಿಕಿತ್ಸೆ ಲಭಿಸದೆ ಕೆಲವು ದಿನಗಳ ಅಂತರದಲ್ಲಿ 12 ಮಂದಿ ಮೃತಪಟ್ಟಿದ್ದಾರೆ’ ಎಂದು ಅಲೆಮಾರಿ ಬುಡಕಟ್ಟು ಮಹಾಸಭಾದ ಸಂಘಟನಾ ಕಾರ್ಯದರ್ಶಿ ಸುಂದರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲಾ ಪಂಚಾಯಿತಿಗಳ ಮೂಲಕ ವಿತರಿಸಲಾಗಿದ್ದ ಆರೋಗ್ಯ ಕಾರ್ಡ್‌ ತೋರಿಸಿದರೆ ಖಾಸಗಿ ಆಸ್ಪತ್ರೆ
ಯಲ್ಲಿ ತಕ್ಷಣ ಚಿಕಿತ್ಸೆ ದೊರೆಯುತ್ತಿತ್ತು. ಆದರೆ, ಆಯುಷ್ಮಾನ್‌ ಕಾರ್ಡ್‌ನಿಂದ ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಜಿಲ್ಲಾ ಸರ್ಜನ್‌ ಸಹಿ ಬೇಕಿದೆ. ಪ್ರಕ್ರಿಯೆ ಪೂರ್ಣಗೊಳಿಸುವ ವೇಳೆಗೆ ರೋಗಿಯ ಪ್ರಾಣ ಹೋಗಿರುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಉಚಿತ ಆರೋಗ್ಯ ಸೌಲಭ್ಯ ಯೋಜನೆಯಡಿ ಈವರೆಗೆ ದಕ್ಷಿಣ ಕನ್ನಡದಲ್ಲಿ 192 ಮಂದಿ ಉಡುಪಿಯಲ್ಲಿ 29 ಮಂದಿ ಚಿಕಿತ್ಸೆ ಪಡೆದಿದ್ದಾರೆ.

ಕಾರಣ ಪತ್ತೆಗೆ ಸಂಶೋಧನೆ: ವರ್ಷದಿಂದ ವರ್ಷಕ್ಕೆ ಈ ಸಮುದಾಯದ ಜನಸಂಖ್ಯೆ ಕಡಿಮೆ ಆಗುತ್ತಿದೆ. ಹತ್ತು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4,500ರಷ್ಟಿದ್ದ ಜನಸಂಖ್ಯೆ 3,700ಕ್ಕೆ ಕುಸಿದಿದೆ. ಉಡುಪಿಯಲ್ಲಿ 11 ಸಾವಿರದಿಂದ 10 ಸಾವಿರಕ್ಕೆ ಇಳಿದಿದೆ. ಏಕಾಏಕಿ ಜನಸಂಖ್ಯೆ ಕಡಿಮೆ ಆಗುತ್ತಿರುವುದಕ್ಕೆ ಕಾರಣ ಪತ್ತೆಹಚ್ಚಲು ಯೆನೆಪೋಯ ವೈದ್ಯಕೀಯ ಕಾಲೇಜು ಸಂಶೋಧನೆ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.