ADVERTISEMENT

ಜಿಎಸ್‌ಟಿ ಪಾವತಿಸದ 850 ಚೀಲ ಪಾನ್‌ ಮಸಾಲ ವಶ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 15:44 IST
Last Updated 18 ಸೆಪ್ಟೆಂಬರ್ 2025, 15:44 IST
ಜಿಎಸ್‌ಟಿ
ಜಿಎಸ್‌ಟಿ   

ಬೆಂಗಳೂರು: ಜಿಎಸ್‌ಟಿ ಪಾವತಿ ಮಾಡದೆ ದೆಹಲಿಯಿಂದ ಬೆಂಗಳೂರಿಗೆ ರೈಲಿನ ಮೂಲಕ ಕಳ್ಳಸಾಗಣೆ ಮಾಡಲಾಗಿದ್ದ ₹1 ಕೋಟಿ ಮೌಲ್ಯದ ಪಾನ್‌ ಮಸಾಲವನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

‘ಖಚಿತ ಮಾಹಿತಿಯ ಆಧಾರದ ಮೇಲೆ ನಗರದ ಯಶವಂತಪುರ ರೈಲು ನಿಲ್ದಾಣದಲ್ಲಿ ಗುರುವಾರ ಕಾರ್ಯಾಚರಣೆ ನಡೆಸಲಾಯಿತು. ದೆಹಲಿಯಿಂದ ಬಂದಿದ್ದ ರೈಲಿನಿಂದ ಇಳಿಸಿದ್ದ ಚೀಲಗಳನ್ನು ಪ್ಲಾಟ್‌ಫಾರ್ಮ್‌ನಲ್ಲಿ ಇರಿಸಲಾಗಿತ್ತು ಮತ್ತು ಕೆಲವು ಚೀಲಗಳನ್ನು ಟ್ರಕ್‌ಗೆ ತುಂಬಿಸಲಾಗಿತ್ತು’ ಎಂದು ವಾಣಿಜ್ಯ ತೆರಿಗೆ ಇಲಾಖೆಯು ತಿಳಿಸಿದೆ.

‘ಆ ಎಲ್ಲ ಚೀಲಗಳ ವಿವರವನ್ನು ಪರಿಶೀಲಿಸಿದಾಗ, ಅವುಗಳಿಗೆ ಜಿಎಸ್‌ಟಿ ಪಾವತಿ ಮಾಡಿಲ್ಲ ಎಂಬುದು ಪತ್ತೆಯಾಯಿತು. ₹1 ಕೋಟಿ ಮೌಲ್ಯದ 850 ಚೀಲಗಳನ್ನು ಹೀಗೆ ಕಳ್ಳಸಾಗಣೆ ಮಾಡಲಾಗಿತ್ತು. ಅವುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಇಲಾಖೆ ತಿಳಿಸಿದೆ.

ADVERTISEMENT

‘ಈ ಹಿಂದೆಯೂ ಗುಂ‍ಪೊಂದು ದೆಹಲಿಯಿಂದ ಟ್ರಕ್‌ಗಳ ಮೂಲಕ ಬೆಂಗಳೂರಿಗೆ ಪಾನ್‌ ಮಸಾಲ ಕಳ್ಳಸಾಗಣೆ ಮಾಡುತ್ತಿತ್ತು. ಕೆಲ ತಿಂಗಳ ಹಿಂದೆ ಹಲವು ಟ್ರಕ್‌ಗಳನ್ನು ಪತ್ತೆ ಮಾಡಿ, ಸುಮಾರು ₹20 ಕೋಟಿ ಮೌಲ್ಯದಷ್ಟು ಪಾನ್‌ ಮಸಾಲ ವಶಕ್ಕೆ ಪಡೆಯಲಾಗಿತ್ತು. ಆನಂತರ ರಸ್ತೆ ಮಾರ್ಗದಲ್ಲಿ ತಪಾಸಣೆ ಬಿಗಿಗೊಳಿಸಲಾಯಿತು. ಈಗ ಆ ಗುಂಪು ರೈಲು ಮಾರ್ಗವನ್ನು ಕಳ್ಳಸಾಗಣೆಗೆ ಬಳಸಿಕೊಳ್ಳುತ್ತಿರುವ ಶಂಕೆ ಇದೆ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.