ADVERTISEMENT

ಪಾನ್‌ ಮಸಾಲ ಕಳ್ಳಸಾಗಣೆ ಜಾಲಕ್ಕೆ ನೆರವು: ವಾಣಿಜ್ಯ ತೆರಿಗೆ ಅಧಿಕಾರಿಗಳ ಅಮಾನತು

​ಪ್ರಜಾವಾಣಿ ವಾರ್ತೆ
Published 28 ಮೇ 2025, 15:31 IST
Last Updated 28 ಮೇ 2025, 15:31 IST
<div class="paragraphs"><p>ಅಮಾನತು</p></div>

ಅಮಾನತು

   

ಬೆಂಗಳೂರು: ದೆಹಲಿಯಲ್ಲಿ ತೆರಿಗೆ ವಂಚಿಸಿ ಬೆಂಗಳೂರಿಗೆ ಪಾನ್‌ ಮಸಾಲಾ ಕಳ್ಳಸಾಗಣೆ ಮಾಡುವ ವ್ಯಕ್ತಿಗಳಿಗೆ ನೆರವು ನೀಡಲು ₹20 ಲಕ್ಷ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ವಾಣಿಜ್ಯ ತೆರಿಗೆ ಪರಿವೀಕ್ಷಕ ನಿಜಾನಂದಮೂರ್ತಿ ಎಂ.ಆರ್‌ ಮತ್ತು ಇತರ ಮೂವರು ಅಧಿಕಾರಿಗಳನ್ನು ಆರ್ಥಿಕ ಇಲಾಖೆಯು ಅಮಾನತು ಮಾಡಿದೆ.

ಪಾನ್‌ ಮಸಾಲಾ ಕಳ್ಳಸಾಗಣೆದಾರರಿಗೆ ನಿಜಾನಂದಮೂರ್ತಿ ಅವರು ನೆರವು ನೀಡುತ್ತಿದ್ದ ಬಗ್ಗೆ ಲಭಿಸಿದ ಮಾಹಿತಿ ಆಧಾರದಲ್ಲಿ ಏಪ್ರಿಲ್‌ 24 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ನಗರದ ನಾಗರಬಾವಿಯ ನಮ್ಮೂರ ತಿಂಡಿ ಹೋಟೆಲ್‌ ಸಮೀಪ ಮನೋಜ್‌ ಎಂಬಾತನಿಂದ ₹20 ಲಕ್ಷ ಪಡೆಯುತ್ತಿದ್ದ ವೇಳೆ ನಿಜಾನಂದಮೂರ್ತಿ ಅವರನ್ನು ಬಂಧಿಸಲಾಗಿತ್ತು.

ADVERTISEMENT

ಈ ಬಗ್ಗೆ ಆಂತರಿಕ ತನಿಖೆ ನಡೆಸಿದ ವಾಣಿಜ್ಯ ತೆರಿಗೆ ಇಲಾಖೆಯು, ಜಾಗೃತ ವಿಭಾಗ–1ರ ವಾಣಿಜ್ಯ ತೆರಿಗೆ ಉಪ ಆಯುಕ್ತ (ಕೋರಮಂಗಲ) ರಘುನಾಥ ಗೌಡ, ಕೋಲಾರದ ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಚೇರಿಯ ವಾಣಿಜ್ಯ ತೆರಿಗೆ ಅಧಿಕಾರಿ ಲಕ್ಕಪ್ಪ ಮತ್ತು ಕೇಂದ್ರ ಕಚೇರಿಯ ಆಂತರಿಕ ಲೆಕ್ಕ ಪರಿಶೋಧನೆ ವಿಭಾಗದ ವಾಣಿಜ್ಯ ತೆರಿಗೆ ಅಧಿಕಾರಿ ನವೀನ್‌ ಕೆ.ಎಂ. ಅವರು ಕಳ್ಳಸಾಗಣೆ ಜಾಲಕ್ಕೆ ನೆರವು ನೀಡುತ್ತಿದ್ದರು ಎಂಬುದನ್ನು ಪತ್ತೆ ಮಾಡಿತ್ತು.

ನಿಜಾನಂದಮೂರ್ತಿ ಮತ್ತು ಇತರ ಮೂವರ ವಿರುದ್ಧ ಶಿಸ್ತು ಕ್ರಮಕ್ಕೆ ಕಾಯ್ದಿರಿಸಿ, ಅಮಾನತು ಮಾಡಬೇಕು. ಈ ಮೂಲಕ ತನಿಖೆ ನಡೆಸಲು ಅನುವು ಮಾಡಿಕೊಡಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತರು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಅದರ ಆಧಾರದಲ್ಲಿ ಕ್ರಮ ತೆಗೆದುಕೊಂಡಿರುವ ಆರ್ಥಿಕ ಇಲಾಖೆಯು, ನಾಲ್ವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.

‘ಈ ಜಾಲವು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದು, ಹತ್ತಾರು ತಿಂಗಳಿಂದ ಸಕ್ರಿಯವಾಗಿತ್ತು ಎಂಬ ಮಾಹಿತಿ ದೊರೆತಿದೆ. ರಾಜ್ಯ ಸರ್ಕಾರಕ್ಕೆ ಈ ಜಾಲವು ಈಗಾಗಲೇ ಹತ್ತಾರು ಕೋಟಿ ತೆರಿಗೆ ವಂಚಿಸಿದೆ’ ಎಂದು ಲೋಕಾಯುಕ್ತ ಪೊಲೀಸ್‌ ಮೂಲಗಳು ತಿಳಿಸಿವೆ.

‘ನಕಲಿ ಇನ್ವಾಯ್ಸ್‌ಗಳನ್ನು ಸೃಷ್ಟಿಸಿ, ಎಲ್ಲೆಡೆ ತಪಾಸಣೆ ಪಾಸು ಮಾಡಿಕೊಂಡು ಕಳ್ಳಸಾಗಣೆ ಮಾಡಲಾಗಿದೆ. ಈ ಬಗ್ಗೆ ಅರಿವಿದ್ದ ಅಧಿಕಾರಿಗಳಿಗೆ ಲಂಚ ನೀಡಿ, ಅಕ್ರಮ  ಮುಂದುವರೆಸಲಾಗಿದೆ. ವಾಣಿಜ್ಯ ಇಲಾಖೆಯ ಹಲವು ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ’ ಎಂದು ಹೇಳಿವೆ. ಲೋಕಾಯುಕ್ತ ತನಿಖೆ ಮುಂದುವರೆಸಿದ್ದು, ವಾಣಿಜ್ಯ ತೆರಿಗೆ ಇಲಾಖೆಯೂ ಆಂತರಿಕ ತನಿಖೆ ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.