ADVERTISEMENT

ಫೆ. 21ರಂದು ಬೆಂಗಳೂರಿನಲ್ಲಿ ಪಂಚಮಸಾಲಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 16:06 IST
Last Updated 10 ಫೆಬ್ರುವರಿ 2021, 16:06 IST
ಸಭೆಯ ನಂತರ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು.
ಸಭೆಯ ನಂತರ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು.   

ತುಮಕೂರು: ಫೆ.21ರಂದು ಬೆಳಿಗ್ಗೆ 11ಕ್ಕೆ ಬೆಂಗಳೂರಿನ ನೈಸ್ ರಸ್ತೆಯ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಪಂಚಮಸಾಲಿ ಸಮಾವೇಶ ನಡೆಯಲಿದೆ.

ಸಭೆಯ ನಂತರ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಜ.14 ರಂದು ಪಂಚ ಲಕ್ಷ ಪಾದಯಾತ್ರೆ ಕೂಡಲಸಂಗಮದಿಂದ ಹೊರಟಿತ್ತು. ಇದೇ ಮೊದಲ ಬಾರಿ ನಮ್ಮ ಸಮಾಜದ ಎಲ್ಲ ಶಾಸಕರು ಒಗ್ಗಟ್ಟು ತೋರಿದ ಸಭೆ ಇದು. ಗುರುಗಳು ಪಾದಯಾತ್ರೆ ನಡೆಸಿ ಸಮಾಜಕ್ಕೆ ಶಕ್ತಿ ಪ್ರದರ್ಶಿಸಿದ್ದಾರೆ. ಕರ್ನಾಟಕ ತೆಲಂಗಾಣ ಆಂಧ್ರ ಮಹಾರಾಷ್ಟ್ರದಿಂದ ಸಮುದಾಯದವರು ಬರುವರು. 10 ಲಕ್ಷ ಜನರು ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಸಮಾವೇಶದ ನಂತರದ ದಿನವೂ ಧರಣಿ ಸತ್ಯಾಗ್ರಹ ನಡೆಸುತ್ತೇವೆ. ಸಚಿವ ಮುರುಗೇಶ ನಿರಾಣಿ, ಸಿ.ಸಿ.ಪಾಟೀಲ್ ಅವರು ಯಡಿಯೂರಪ್ಪ ಸರ್ಕಾರ‌ ಇರುವುದರಲ್ಲಿ ಮೀಸಲಾತಿ ಕೊಡಿಸುತ್ತೇವೆ ಎಂದಿದ್ದಾರೆ. ಒಗ್ಗಟ್ಟಾಗಿ ಸಮಾವೇಶ ಮಾಡುತ್ತೇವೆ. ಸಮಾಜದವರು ಭಿನ್ನಾಭಿಪ್ರಾಯ ಇಟ್ಟುಕೊಳ್ಳಬಾರದು ಎಂದರು.
ಪಾದಯಾತ್ರೆ ಫೆ 18ಕ್ಕೆ ತಲುಪಲಿದೆ. ನಮ್ಮ ಸಮುದಾಯ ಹೆಚ್ಚಿರುವ ಕಡೆ ಬೆಂಗಳೂರಿನಲ್ಲಿ ಪಾದಯಾತ್ರೆ ಮಾಡುತ್ತೇವೆ. ನಮ್ಮ ಸಮಾವೇಶ ನೋಡಿ ಯಡಿಯೂರಪ್ಪ ಅಂದು ಸಂಜೆಯೊಳಗೆ ಮೀಸಲಾತಿ ಘೋಷಿಸುವರು ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ADVERTISEMENT

ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ತುಮಕೂರಿನಲ್ಲಿ ಮಹತ್ವದ ಸಭೆ ನಡೆಯಿತು. ಎರಡೂ ಪೀಠದ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಭೆ ನಡೆದಿದೆ. ಫೆ.21ರಂದು ಬೆಂಗಳೂರಿನಲ್ಲಿ ಐತಿಹಾಸಿಕ ಸಭೆ ನಡೆಯಲಿದೆ. ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಇಬ್ಬರು ಸಚಿವರು ಈ ಸಭೆಯಲ್ಲಿ ಪಾಲ್ಗೊಂಡು ಮೀಸಲಾತಿ ಕೊಡಿಸಲು ಶ್ರಮಿಸುತ್ತೇವೆ ಎಂದಿದ್ದಾರೆ. ಸಮಾವೇಶದ ಪೂರ್ವದಲ್ಲಿ ಮೀಸಲಾತಿ ಘೋಷಿಸಬೇಕು. ಇಲ್ಲದಿದ್ದರೆ ಆಮರಣಾಂತ ಉಪವಾಸ ನಡೆಸುತ್ತೇವೆ ಎಂದರು.

ಸಭೆಯಲ್ಲಿ ನಮ್ಮ ಅಭಿಪ್ರಾಯ ಬೇರೆ ಇರುತ್ತದೆ. ಮತ್ತೊಬ್ಬರ ಅಭಿಪ್ರಾಯ ಬೇರೆ ಇರುತ್ತದೆ. ಆದರೆ ನಾವು ಒಗ್ಗಟ್ಟಾಗಿ ಇದ್ದೇವೆ. 500 ಕಿ.ಮೀ ನಡೆದು ಬಂದಿದ್ದೇವೆ. ಸಮಾಜದವರಿಗೆ ಮತ್ತು ಮಠಾಧೀಶರಿಗೆ ಗೊಂದಲದ ಹೇಳಿಕೆ ಕೊಡಬಾರದು ಎಂದು ಮನವಿ ಮಾಡುವೆ. ಯಾವುದೇ ಗೊಂದಲಗಳು ಇಲ್ಲ‌. ಇಬ್ಬರು ಸಚಿವರು ಮೀಸಲಾತಿ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.