ADVERTISEMENT

ಪಂಚಮಸಾಲಿ: ತನಿಖಾ ಆಯೋಗ ರಚನೆ– ಆದೇಶ ಕಾಯ್ದಿರಿಸಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 15:32 IST
Last Updated 24 ಫೆಬ್ರುವರಿ 2025, 15:32 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮತ್ತು ಲಿಂಗಾಯತ ಉಪ ಪಂಗಡಗಳಿಗೆ ಒಬಿಸಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಬಗ್ಗೆ ತನಿಖಾ ಆಯೋಗ ರಚಿಸಲು ನಿರ್ದೇಶಿಸಬೇಕು’ ಎಂದು ಕೋರಲಾದ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಹೈಕೋರ್ಟ್‌ ಕಾಯ್ದಿರಿಸಿದೆ.

ಈ ಸಂಬಂಧ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ‘ನ್ಯಾಯಾಲಯದ ಆದೇಶದ ಅನುಸಾರ ಶಾಂತಿಯುತ ಪ್ರತಿಭಟನೆಗೆ ಅನುಮತಿ ನೀಡಲಾಗಿತ್ತು. ಆದರೆ, ಪ್ರತಿಭಟನಕಾರರು ಮತ್ತು ಕೆಲವು ಗಲಭೆಕೋರರು ಕಾನೂನು ಕೈಗೆತ್ತಿಕೊಂಡಿದ್ದರು. ಈ ವೇಳೆ 23 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸ್‌ ವಾಹನಗಳು ಜಖಂಗೊಂಡಿವೆ’ ಎಂದರು.

ADVERTISEMENT

ಸ್ವಾಮೀಜಿ ಪರ ಪದಾಂಕಿತ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ, ‘ನಿಷೇಧಾಜ್ಞೆ ವಿಧಿಸಿರುವಾಗಲೇ ನಿರ್ದಿಷ್ಟ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ನ್ಯಾಯಾಲಯ ನಮಗೆ ಅನುಮತಿ ನೀಡಿತ್ತು. ಸಚಿವರು ಮನವಿ ಸ್ವೀಕರಿಸಿದ ಬಳಿಕ ಪ್ರತಿಭಟನಕಾರರು ಸ್ಥಳದಿಂದ ತೆರಳುತ್ತಿದ್ದರು. ಆ ಸಂದರ್ಭದಲ್ಲಿ ಲಾಠಿ ಪ್ರಹಾರ ನಡೆಸಲಾಗಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳೂ ಇದರಲ್ಲಿ ಭಾಗಿಯಾಗಿರುವ ಕಾರಣ ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ’ ಎಂದರು. ಹೈಕೋರ್ಟ್‌ ವಕೀಲೆ ಪೂಜಾ ಆರ್‌.ಸವದತ್ತಿ ವಕಾಲತ್ತು ವಹಿಸಿದ್ದಾರೆ.

ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ ಆದೇಶ ಕಾಯ್ದಿರಿಸಿತು. ‘ಬೆಳಗಾವಿಯ ಸುವರ್ಣ ಸೌಧದ ಬಳಿ 2024ರ ಡಿಸೆಂಬರ್ 10ರಂದು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಈ ಕುರಿತಂತೆ ತನಿಖಾ ಆಯೋಗ ರಚಿಸಲು ನಿರ್ದೇಶಿಸಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.