ADVERTISEMENT

ಜೆಡಿಎಸ್‌ ಪಂಚರತ್ನ ರಥ ಯಾತ್ರೆ

ನ.1ರಿಂದ ಪ್ರಾರಂಭ l ಜಲಧಾರೆ ಯಶಸ್ಸಿನಿಂದ ಪ್ರೇರಣೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 19:48 IST
Last Updated 26 ಸೆಪ್ಟೆಂಬರ್ 2022, 19:48 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ಕಾಂಗ್ರೆಸ್‌, ಬಿಜೆಪಿ ಪರಸ್ಪರ ಆರೋಪ–ಪ್ರತ್ಯಾರೋಪದಲ್ಲಿ ತೊಡಗಿರುವ ಸಮಯದಲ್ಲೇ ಸದ್ದಿಲ್ಲದೇ ಚುನಾವಣಾ ಪ್ರಚಾರಕ್ಕೆ ಅಣಿಯಾಗುತ್ತಿರುವ ಜೆಡಿಎಸ್‌, ನ.1ರಿಂದ ಪಂಚರತ್ನ ರಥ ಯಾತ್ರೆ ಆರಂಭಿಸಲಿದೆ.

ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ರಾಜ್ಯ ಕಾರ್ಯಕಾರಿಣಿ ಸದಸ್ಯರು ಹಾಗೂ ಪದಾಧಿಕಾರಿಗಳ ಜತೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಸರಣಿ ಸಭೆ ನಡೆಸಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ, ‘ಕನ್ನಡಿಗರು ಸಂಭ್ರಮಿಸುವ ಕರ್ನಾಟಕ ರಾಜ್ಯೋತ್ಸವದ ದಿನವೇ ಯಾತ್ರೆಗೆ ಚಾಲನೆ ನೀಡಲಾಗುವುದು. ಪಕ್ಷ ಅಧಿಕಾರಕ್ಕೆ ಬಂದರೆ ಏನು ಮಾಡಲಿದೆ ಎನ್ನುವುದನ್ನು ಯಾತ್ರೆ ಮೂಲಕ ಜನರಿಗೆ ಮನವರಿಕೆ ಮಾಡಲು ಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ. ರಾಷ್ಟ್ರೀಯ ಪಕ್ಷಗಳಂತೆ ಅಬ್ಬರವಿಲ್ಲದೆ ಯಾತ್ರೆಯ ರೂಪುರೇಷೆಗಳನ್ನು ಶೀಘ್ರ ಬಿಡುಗಡೆ ಮಡಲಾಗುವುದು’ ಎಂದರು.

ADVERTISEMENT

‘ಪಂಚರತ್ನ ರಥಯಾತ್ರೆ ಆಗಸ್ಟ್‌ ತಿಂಗಳು ಆರಂಭವಾಗಬೇಕಿತ್ತು. ಮಳೆಯಿಂದಾಗಿ ಮುಂದೂಡಲಾಗಿತ್ತು. ಕೆಲ ತಿಂಗಳ ಹಿಂದೆ ಹಮ್ಮಿಕೊಂಡಿದ್ದ ಜನತಾ ಜಲಧಾರೆ ಸಮಾವೇಶಗಳು ಯಶಸ್ವಿಯಾಗಿದ್ದವು. ನೀರಾವರಿ ಯೋಜನೆಗಳ ಜಾರಿಗೆ ₹ 4 ಲಕ್ಷ ಕೋಟಿ ಬೇಕಿದೆ. ಯೋಜನೆ ಜಾರಿಗೆ ದೂರದೃಷ್ಟಿಯ ಅಗತ್ಯವಿದೆ. ಈ ಕುರಿತು ಜನರಿಗೆ ಮನವರಿಕೆ ಮಾಡಲಾಗುವುದು’ ಎಂದೂ ಅವರು ವಿವರ ನೀಡಿದರು.

8ಕ್ಕೆ ಜನತಾ ಮಿತ್ರ ಸಮಾರೋಪ: ‘ಜನತಾ ಮಿತ್ರ ಕಾರ್ಯಕ್ರಮವೂ ಯಶಸ್ವಿಯಾಗಿದೆ. ಅ.8ರಂದು ಬೆಂಗಳೂರಿ
ನಲ್ಲಿ ಸಮಾರೋಪ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಬೆಂಗಳೂರಿನ ಜನರಿಗೆ ಪಕ್ಷದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲಾಗುವುದು’ ಎಂದರು.

‘ಸಿ.ಎಂ.ಇಬ್ರಾಹಿಂ ಅವರು ಪಕ್ಷದ ಸಂಘಟನೆ ಬಲಪಡಿಸುತ್ತಿದ್ದಾರೆ. ರಾಜ್ಯ ಕಾರ್ಯಕಾರಿಣಿ ಸಮಿತಿಗೆ ಆಯ್ಕೆ ನಡೆದ ಮೇಲೆ ಕೆಲವರಿಗೆ ಜಿಲ್ಲಾ ಉಸ್ತುವಾರಿ ವಹಿಸುವ ನಿರ್ಧಾರ ಮಾಡಲಾಗಿದೆ. ನೇಮಕ ಮಾಡುವ ಸಂಪೂರ್ಣ ಅಧಿಕಾರವನ್ನು ಅಧ್ಯಕ್ಷರಿಗೇ ನೀಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.