ADVERTISEMENT

ಕೈದಿಗಳ ಮಾಂಸದೂಟಕ್ಕೆ ಸಂಚಕಾರ

ಮಾಂಸ ಸಾಗಣೆ ವಾಹನದಲ್ಲಿ ಮೊಬೈಲ್ ಪತ್ತೆ l ಹೊಸಬರಿಗೆ ಗುತ್ತಿಗೆ ನಿರ್ಧಾರ

ಎಂ.ಸಿ.ಮಂಜುನಾಥ
Published 1 ಜನವರಿ 2019, 20:15 IST
Last Updated 1 ಜನವರಿ 2019, 20:15 IST
   

ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕುರಿ–ಕೋಳಿ ಮಾಂಸ ಸಾಗಿಸುವ ವಾಹನದಲ್ಲಿ ಮೊಬೈಲ್‌ ಹಾಗೂ ಸಿಮ್‌ಗಳು ಪತ್ತೆಯಾದ ಬಳಿಕ ಜೈಲಿಗೆ ಮಾಂಸ ಪೂರೈಕೆ ಸ್ಥಗಿತವಾಗಿದ್ದು, ಮೂರು ವಾರಗಳಿಂದ ಮಾಂಸದೂಟ ಸಿಗದಿರುವುದು ಕೈದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇದೇ ಡಿ.7ರಂದು ಜೈಲಿಗೆ ಕುರಿ ಮಾಂಸ ತಂದಿದ್ದ ವಾಹನದಲ್ಲಿ ದುಬಾರಿ ಬೆಲೆಯ ಆರು ಮೊಬೈಲ್‌ಗಳು ಪತ್ತೆಯಾಗಿದ್ದವು. ಈ ಸಂಬಂಧ ಮಾಂಸ ಪೂರೈಕೆಯ ಗುತ್ತಿಗೆದಾರ ಚಾಮರಾಜಪೇಟೆಯ ‘ರಾಜ್‌ ಮಟನ್‌ಸ್ಟಾಲ್’ ಮಾಲೀಕ ಸುರೇಶ್ ಬಾಬು ಹಾಗೂ ಆತನ ಸಹಚರರಿಬ್ಬರನ್ನು ಪೊಲೀಸರು ಬಂಧಿಸಿದ್ದರು. ಮತ್ತೊಂದೆಡೆ, ಜೈಲು ಅಧಿಕಾರಿಗಳು ಮಾಂಸ ಪೂರೈಕೆಯ ಗುತ್ತಿಗೆಯನ್ನು ಹೊಸಬರಿಗೆ ನೀಡಲು ನಿರ್ಧರಿಸಿರುವ ಕಾರಣ ಮೂರು ವಾರಗಳಿಂದ ಕಾರಾಗೃಹಕ್ಕೆ ಮಾಂಸ ಸಾಗಣೆಯಾಗಿಲ್ಲ.

‘ಯಾರೋ ಒಬ್ಬರು ಮಾಡಿದ ತಪ್ಪಿಗೆ, ಮೂರೂವರೆ ಸಾವಿರ ಕೈದಿಗಳಿಗೆ ತೊಂದರೆ ಕೊಡುವುದು ಸರಿಯಲ್ಲ. ಜೈಲಿಗೆ ಗಾಂಜಾ ಹಾಗೂ ಮೊಬೈಲ್‌ಗಳನ್ನು ಪೂರೈಸುವ ವ್ಯಕ್ತಿಗೆ ಮಾಂಸ ಸಾಗಣೆಯ ಗುತ್ತಿಗೆ ಕೊಟ್ಟಿದ್ದು ಅಧಿಕಾರಿಗಳ ತಪ್ಪಲ್ಲವೇ’ ಎಂದು ಕೆಲ ಕೈದಿಗಳು ತಮ್ಮ ಭೇಟಿಗೆ ಬಂದ ಸಂಬಂಧಿಕರ ಬಳಿ ಅಲವತ್ತುಕೊಂಡಿದ್ದಾರೆ.

ADVERTISEMENT

‘ಹಲವು ವರ್ಷಗಳಿಂದ ಸುರೇಶ್ ಬಾಬು ಹಾಗೂ ಬರ್ಕತ್ ಖಾನ್ ಎಂಬ ವ್ಯಾಪಾರಿಗಳಿಗೇ ಗುತ್ತಿಗೆ ಸಿಗುತ್ತಿದೆ. ರಾಜ್ಯದಲ್ಲಿ ಬೇರೆ ಮಾಂಸದ ವ್ಯಾಪಾರಿಗಳೇ ಇಲ್ಲವೇ? ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಶುಕ್ರವಾರ ಮಾಂಸ ಕೊಡದ ಹೊರತು, ಆ ದಿನ ನಾವು ಊಟ ಮಾಡದಿರಲು ನಿರ್ಧರಿಸಿದ್ದೇವೆ’ ಎಂದು ಕೈದಿಗಳು ಪಟ್ಟು ಹಿಡಿದಿದ್ದಾರೆ.

‘ಕಾರಾಗೃಹದ ಮ್ಯಾನ್ಯುಯಲ್ ಪ್ರಕಾರ, ಕೈದಿಗಳಿಗೆ ಪ್ರತಿ ಶುಕ್ರವಾರ ಮಾಂಸದೂಟ ನೀಡಬೇಕು. ಒಂದು ವಾರ ಕುರಿ ಮಾಂಸ (ಒಬ್ಬರಿಗೆ 110 ಗ್ರಾಂ ಪ್ರಮಾಣದಲ್ಲಿ) ಕೊಟ್ಟರೆ, ಇನ್ನೊಂದು ವಾರ ಕೋಳಿ ಮಾಂಸ (200 ಗ್ರಾಂ ಪ್ರಮಾಣದಲ್ಲಿ) ನೀಡಬೇಕು. ಸುಮಾರು 3,500 ಕೈದಿಗಳು ಶುಕ್ರವಾರಕ್ಕಾಗಿಯೇ ಎದುರು ನೋಡುತ್ತಿರುತ್ತಾರೆ’ ಎಂದು ಇತ್ತೀಚೆಗೆ ಸನ್ನಡತೆ ಅಧಾರದಡಿ ಬಿಡುಗಡೆಯಾದ ಕೈದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಷ್ಟೇ ಸಿರಿವಂತ ಕೈದಿಯಾದರೂ, ಒಂದೆರಡು ತಿಂಗಳು ಮಾತ್ರ ಮನೆಯಿಂದ ಊಟ ತರಿಸಿಕೊಳ್ಳುತ್ತಾರೆ. ಆ ನಂತರ ಜೈಲಿನ ಊಟಕ್ಕೇ ಹೊಂದಿಕೊಂಡು ಬಿಡುತ್ತಾರೆ. ಪ್ರತಿದಿನ ಸೊಪ್ಪು–ಬೇಳೆ ಸಾರು ತಿನ್ನುವ ಕೈದಿಗಳಿಗೆ ಮಾಂಸ ಹಬ್ಬದೂಟದಂತೆ. ಇದಕ್ಕಾಗಿ ಕೆಲವರು ಗುರುವಾರ ರಾತ್ರಿಯಿಂದಲೇ ಮಾನಸಿಕವಾಗಿ ಸಿದ್ಧರಾಗಿರುತ್ತಾರೆ. ಆದರೆ, ಮರುದಿನ ಮಧ್ಯಾಹ್ನ ಅದೇ ಸೊಪ್ಪಿನ ಸಾರು ಬಂದಾಗ ಹತಾಶರಾಗಿ ಊಟ ಬಿಟ್ಟು ಎದ್ದು ಹೋಗುತ್ತಾರೆ. ಈ ಸನ್ನಿವೇಶವನ್ನು ಹಿಂದೆ ನಾನೂ ಅನುಭವಿಸಿದ್ದೇನೆ’ ಎಂದು ಹೇಳಿದರು.

ರೂ 80 ಲಕ್ಷ ಆದಾಯ: ‘ಕಾರಾಗೃಹಕ್ಕೆ ಮಾಂಸ ಪೂರೈಸುವುದರಿಂದ ನನಗೆ ವರ್ಷಕ್ಕೆ ರೂ 70 ಲಕ್ಷದಿಂದ ರೂ 80 ಲಕ್ಷದವರೆಗೆ ಆದಾಯ ಬರುತ್ತದೆ. ಇಷ್ಟೊಂದು ಲಾಭ ಇರುವಾಗ ಆರು ಮೊಬೈಲ್ ಸಾಗಣೆ ಮಾಡಿ ಹಣ ಸಂಪಾದನೆ ಮಾಡುವ ಪ್ರಮೇಯ ಏನಿದೆ? ನನ್ನ ಗುತ್ತಿಗೆ ರದ್ದಾಗಲೆಂದು ಯಾರೋ ಈ ರೀತಿ ಕುತಂತ್ರ ಮಾಡಿದ್ದಾರೆ’ ಎಂದು ಆರೋಪಿ ಸುರೇಶ್‌ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದ.

‘ಸುರೇಶ್ ಮನೆ ಹಾಗೂ ಅಂಗಡಿ ಸಮೀಪದ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದೆ. ಡಿ.6ರ ನಸುಕಿನ ವೇಳೆ (3 ಗಂಟೆ ಸುಮಾರಿಗೆ) ಯಾರೋ ಇಬ್ಬರು ಬಂದು ಒಂದು ಚೀಲವನ್ನು ಅವರ ಸರಕು ಸಾಗಣೆ ವಾಹನದ ಕೆಳಗೆ ಇಟ್ಟಿರುವುದು ಸೆರೆಯಾಗಿದೆ. ಅವರಿಗೂ ಸುರೇಶ್‌ ಅವರಿಗೂ ಸಂಬಂಧವಿದೆಯೇ ಎನ್ನುವ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.