ಬೆಂಗಳೂರು: ‘ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡಿದವರನ್ನು ಬಂಧಿಸುವಂತೆ ಸೂಚಿಸಿಲ್ಲ. ಇಂತಹ ವಿಷಯಗಳಲ್ಲಿ ಸ್ಥಳೀಯ ಪೊಲೀಸರೇ ಕ್ರಮಕೈಗೊಳ್ಳುತ್ತಾರೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಲು ಸೂಚನೆ ನೀಡಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಮಂಗಳವಾರ ಉತ್ತರ ನೀಡಿದ ಅವರು, ‘ಯಾರೋ, ಏನೋ ಹೇಳುತ್ತಾರೆ ಎಂದ ತಕ್ಷಣ ಬಂಧಿಸಲು ಆಗುತ್ತದೆಯೇ? ಹೇಳಿಕೆಯ ತೀವ್ರತೆ ನೋಡಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ. ಅದಕ್ಕಾಗಿಯೇ ದ್ವೇಷ ಭಾಷಣ ಮಸೂದೆ ಸಿದ್ಧಪಡಿಸಲಾಗಿದೆ’ ಎಂದರು.
ವಿಧಾನಸಭೆಯಲ್ಲಿ ಸೋಮವಾರ ಮಾತನಾಡಿದ್ದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದ ವ್ಯಕ್ತಿಯ ವಿರುದ್ಧ ಕಾನೂನು ಪ್ರಕಾರ ತಕ್ಷಣ ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದ್ದರು.
ವಿರೋಧಪಕ್ಷದ ನಾಯಕ ಆರ್. ಅಶೋಕ ವಿಷಯ ಪ್ರಸ್ತಾಪಿಸಿ, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡುವ ವೇಳೆ ಒಬ್ಬ ವ್ಯಕ್ತಿ, ಮುಖ್ಯಮಂತ್ರಿ 24 ಕೊಲೆ ಮಾಡಿದ್ದಾರೆ ಎಂದಿದ್ದಾರೆ. ಅದನ್ನು ಕೇಳಿದ ಬಳಿಕವೂ ಕ್ರಮಕೈಗೊಳ್ಳದಿದ್ದರೆ ಹೇಗೆ? ಸರ್ಕಾರ ಇಷ್ಟೊಂದು ನಿಷ್ಕ್ರಿಯವಾಗಬೇಕೇ ಎಂದು ಪ್ರಶ್ನಿಸಿದ್ದರು.
ಆದರೆ, ಈ ಹೇಳಿಕೆ ನೀಡಿದ್ದು ಬಿಜೆಪಿ ಶಾಸಕ ಹರೀಶ್ ಪೂಂಜಾ ಎನ್ನುವ ಮಾಹಿತಿ ಗೃಹ ಸಚಿವರಿಗೆ ತಡವಾಗಿ ಗೊತ್ತಾಗಿದೆ. ‘2023ರಲ್ಲಿ ಇಂತಹ ಹೇಳಿಕೆ ನೀಡಿದ್ದ ಪೂಂಜಾ ವಿರುದ್ಧ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯದ ತಡೆಯಾಜ್ಞೆ ತಂದಿದ್ದರು. ತಡೆಯಾಜ್ಞೆ ತೆರವಾದ ತಕ್ಷಣ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.