ADVERTISEMENT

ಮೇಸ್ತ ಕೊಲೆ ಆರೋಪಿಗೆ ಉಪಾಧ್ಯಕ್ಷ ಸ್ಥಾನ: ಟೀಕೆಯ ಬಳಿಕ ಆದೇಶಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 21:42 IST
Last Updated 12 ಆಗಸ್ಟ್ 2022, 21:42 IST
   

ಕಾರವಾರ: ಯುವಕ ಪರೇಶ ಮೇಸ್ತ ಕೊಲೆ ಪ್ರಕರಣದ ಪ್ರಮುಖ ಆರೋಪಿ ಜಮಾಲ್ ಆಜಾದ್ ಅಣ್ಣಿಗೇರಿ ಅವರಿಗೆ, ಉತ್ತರ ಕನ್ನಡ ಜಿಲ್ಲಾ ವಕ್ಫ್‌ ಸಲಹಾ ಸಮಿತಿ ಉಪಾಧ್ಯಕ್ಷ ಸ್ಥಾನ ನೀಡಿದ ಕ್ರಮವು ವ್ಯಾಪಕ ಖಂಡನೆಗೆ ಗುರಿಯಾಗಿದೆ. ಸ್ವತಃ ಬಿಜೆಪಿ ಕಾರ್ಯಕರ್ತರು, ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಸರ್ಕಾರವು ನೇಮಕಾತಿಯನ್ನು ಶುಕ್ರವಾರ ತಡೆ ಹಿಡಿದಿದೆ.

ಜಿಲ್ಲಾ ವಕ್ಫ್‌ ಸಲಹಾ ಸಮಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ಜಮಾಲ್ ಅವರನ್ನು ಆಯ್ಕೆ ಮಾಡಿ ರಾಜ್ಯ ವಕ್ಫ್ ಮಂಡಳಿಯು ಗುರುವಾರ ಆದೇಶಿಸಿತ್ತು. ಇದನ್ನು ಬಿಜೆಪಿ ಮುಖಂಡರು ಟೀಕಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಮಂದಿ ತರಾಟೆಗೆ ತೆಗೆದುಕೊಂಡಿದ್ದರು. ಕಾರವಾರ ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಈ ಭಾಗದ ಹಲವು ನಾಯಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.

2017ರ ಡಿಸೆಂಬರ್‌ನಲ್ಲಿ ನಡೆದ ಗಲಭೆಯ ಸಂದರ್ಭ, ಹೊನ್ನಾವರದಲ್ಲಿ ಪರೇಶ ಮೇಸ್ತ ಅವರ ಕೊಲೆಯಾಗಿತ್ತು. ಈ ಪ್ರಕರಣವು ಭಾರಿ ಸಂಚಲನ ಉಂಟು ಮಾಡಿತ್ತು. ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು, ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದ್ದರು. ಬಳಿಕ ಪಕ್ಷದ ವಿವಿಧ ಹಿರಿಯ ಮುಖಂಡರು ಮೇಸ್ತ ಅವರ ಮನೆಗೆ ಭೇಟಿ ನೀಡಿದ್ದರು. 2018ರ ಫೆ.21ರಂದು ಅಂದಿನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡ ಬಂದು ಪಾಲಕರಿಗೆ ಸಾಂತ್ವನ ಹೇಳಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.