ಕಲಾಪ
ಪರಿಷತ್ ಪ್ರಶ್ನೋತ್ತರ
ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯವನ್ನು ಬೇರೆ ವಿಶ್ವವಿದ್ಯಾಲಯಗಳ ಜತೆ ವಿಲೀನ ಮಾಡುವ ಅಥವಾ ಮುಚ್ಚುವಂತಹ ಯಾವುದೇ ಪ್ರಸ್ತಾವಗಳು ರಾಜ್ಯ ಸರ್ಕಾರದ ಮುಂದೆ ಇಲ್ಲ. ಯಾವುದೇ ಕಾರಣಕ್ಕೂ ಆ ವಿಶ್ವವಿದ್ಯಾಲಯವನ್ನು ಮುಚ್ಚುವುದಿಲ್ಲ. ಆ ಭಾಗದ ಶಾಸಕರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದು, ಈ ಬಗ್ಗೆ ಅವರಿಗೆ ತಿಳಿವಳಿಕೆ ಹೇಳಿ.
ಎನ್.ಚಲುವರಾಯಸ್ವಾಮಿ, ಕೃಷಿ ಸಚಿವ (ಪ್ರಶ್ನೆ: ಹಣಮಂತ ನಿರಾಣಿ, ಬಿಜೆಪಿ)
–––––
ಕಲಬುರಗಿ ಜಿಲ್ಲೆಯಲ್ಲಿ ಜವಳಿ ಪಾರ್ಕ್ ಸ್ಥಾಪನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲುದಾರಿಕೆಯ ಯೋಜನೆಯಾಗಿದೆ. ಕೇಂದ್ರವು ಅನುದಾನ ಬಿಡುಗಡೆ ಮಾಡಿದಂತೆ, ರಾಜ್ಯವೂ ಅನುದಾನ ಒದಗಿಸಿಕೊಂಡು ಕಾಮಗಾರಿ ನಡೆಸಲಿದೆ. ಈಗಾಗಲೇ ಒಪ್ಪಂದ ಏರ್ಪಟ್ಟಿದೆ. ಜವಳಿ ಪಾರ್ಕ್ ಕಾರ್ಯಾರಂಭ ಮಾಡಲು ಕನಿಷ್ಠ 5ರಿಂದ 10 ವರ್ಷವಾದರೂ ಬೇಕು.
ಶಿವಾನಂದ ಪಾಟೀಲ, ಜವಳಿ ಸಚಿವ (ಪ್ರಶ್ನೆ: ಜಗದೇವ ಗುತ್ತೇದಾರ್, ಕಾಂಗ್ರೆಸ್)
––––
ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಕಚೇರಿಗೆ ಸಹಾಯಕ ನಿರ್ದೇಶಕರನ್ನು ನೇಮಕ ಮಾಡಲು, ಸ್ನಾತಕ ಅಥವಾ ಸ್ನಾತಕೋತ್ತರ ಪದವಿ ಪಡೆದ 40 ಸಿಬ್ಬಂದಿಯ ಕೊರತೆ ಇದೆ. ಅದಕ್ಕಿಂತ ಕಡಿಮೆ ವಿದ್ಯಾರ್ಹತೆಯ ಅಧಿಕಾರಿಗಳನ್ನು ನಿಯೋಜನೆ ಮಾಡಿ, ಅಗತ್ಯ ಪದವಿ ಪಡೆಯಲು 2 ವರ್ಷ ರಜೆ ನೀಡುವ ವ್ಯವಸ್ಥೆ ಮಾಡಲಾಗಿದೆ.
ಬೈರತಿ ಸುರೇಶ್, ನಗರಾಭಿವೃದ್ಧಿ ಸಚಿವ (ಪ್ರಶ್ನೆ: ಟಿ.ಎ.ಶರವಣ, ಜೆಡಿಎಸ್)
-------------------------
ವಿಧಾನಸಭೆ ಪ್ರಶ್ನೋತ್ತರ
ಪಿಎಸ್‌ಐ 402 ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಇದೇ ಆಗಸ್ಟ್ 2ರಂದು ಪ್ರಕಟಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಂಧುತ್ವ, ವೈದ್ಯಕೀಯ ಪ್ರಮಾಣಪತ್ರ, ದಾಖಲಾತಿಗಳ ಪರಿಶೀಲನೆ ನಡೆಯುತ್ತಿದೆ. 15–20 ದಿನಗಳಲ್ಲಿ ನೇಮಕಾತಿ ಆದೇಶ ನೀಡಲಾಗುವುದು.
ಜಿ. ಪರಮೇಶ್ವರ, ಗೃಹ ಸಚಿವ (ಪ್ರಶ್ನೆ: ಬಿ.ವೈ. ವಿಜಯೇಂದ್ರ, ಬಿಜೆಪಿ)
ಮಹದಾಯಿ, ಕಳಸಾ ಬಂಡೂರಿ ಯೋಜನೆಯ ಕಾಮಗಾರಿಗೆ ಆರಂಭಿಸಲು ಸರ್ಕಾರ ಬದ್ಧವಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ದಾಖಲಿಸಿರುವ ಕೇಸು ವಾಪಸ್ ಪಡೆದು ನಮ್ಮ ಜಾಗದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ಈ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು.
ಡಿ.ಕೆ. ಶಿವಕುಮಾರ್, ಜಲಸಂಪನ್ಮೂಲ ಸಚಿವ (ಪ್ರಶ್ನೆ: ಎನ್.ಎಚ್. ಕೋನರಡ್ಡಿ, ಕಾಂಗ್ರೆಸ್)
ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಬೆಣ್ಣಿಹಳ್ಳ ಮತ್ತು ಮಾಸ್ತಿ ಹಳ್ಳಗಳ ಹೂಳು ತೆಗೆಯುವ ಕಾಮಗಾರಿ ಕೈಗೆತ್ತಿಕೊಳ್ಳಲು
₹ 83.21 ಕೋಟಿ ಮೊತ್ತದ ಪ್ರತ್ಯೇಕ ವಿಸ್ತೃತ ಯೋಜನಾ ವರದಿಯು ಕರ್ನಾಟಕ ನೀರಾವರಿ ನಿಗಮದಲ್ಲಿ ಪರಿಶೀಲನೆಯಲ್ಲಿದೆ. ಈ ಹಳ್ಳಗಳ ಅಗಲೀಕರಣ ಮತ್ತು ಹೂಳು ತೆಗೆದು ಪ್ರವಾಹ ನಿಯಂತ್ರಿಸಲು ₹ 1,610 ಕೋಟಿ ಮೊತ್ತದ ಡಿಪಿಆರ್ ತಯಾರಿಸಿ ಕೇಂದ್ರ ಸರ್ಕಾರದಿಂದ ಧನಸಹಾಯ ಕೋರಿ ಫೆ. 20ರಂದೇ ಕೇಂದ್ರ ಜಲ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ವಿಚಾರದಲ್ಲಿಯೂ ಎಲ್ಲರೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ.
ಡಿ.ಕೆ. ಶಿವಕುಮಾರ್, ಜಲಸಂಪನ್ಮೂಲ ಸಚಿವ (ಪ್ರಶ್ನೆ: ಎಂ.ಆರ್. ಪಾಟೀಲ, ಬಿಜೆಪಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.