ADVERTISEMENT

ಸಂಸದೀಯ ಕಾರ್ಯದರ್ಶಿ ಹುದ್ದೆ ರದ್ದು

ನೇಮಕಾತಿ ಅಧಿಕಾರ ಮುಖ್ಯಮಂತ್ರಿಗೆ ಇಲ್ಲ: ಹೈಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 19:55 IST
Last Updated 4 ಜನವರಿ 2020, 19:55 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಎಚ್.ಡಿ. ಕುಮಾರಸ್ವಾಮಿ‌ ಮುಖ್ಯಮಂತ್ರಿಯಾಗಿದ್ದ ವೇಳೆ ಸಂಸದೀಯ ಕಾರ್ಯದರ್ಶಿ ಹುದ್ದೆಗೆ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ನೇಮಿಸಿದ್ದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್, ಇಂತಹ ನೇಮಕಾತಿ ಅಧಿಕಾರ ಮುಖ್ಯಮಂತ್ರಿಗೆ ಇಲ್ಲ ಎಂದು ಆದೇಶದಲ್ಲಿ ಹೇಳಿದೆ.

ಸಂಸದೀಯ ಕಾರ್ಯದರ್ಶಿಗಳ ನೇಮಕಾತಿ‌ ಪ್ರಶ್ನಿಸಿ ವಿಜಯನಗರದ ನಿವಾಸಿ ಎಂ.ಬಿ.ಆದಿನಾರಾಯಣ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿ, ಕಾಯ್ದಿರಿಸಿದ್ದ‌ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶನಿವಾರ ಪ್ರಕಟಿಸಿದೆ.

‘ಸಂಸದೀಯ‌ ಕಾರ್ಯದರ್ಶಿಗಳ ನೇಮಕ ಮಾಡಲು ಮುಖ್ಯಮಂತ್ರಿಗಳಿಗೆ ಅಧಿಕಾರ ಇಲ್ಲ. ಒಟ್ಟು ಶಾಸಕರ ಪೈಕಿ ಶೇ 15ರಷ್ಟು ಶಾಸಕರನ್ನು ಮಾತ್ರ ಸಚಿವ ಸಂಪುಟದ ಸದಸ್ಯರಾಗಿ ನಿಯೋಜಿಸಲು ಅವಕಾಶ ಇದೆ.‌ ಸಂಸದೀಯ ಕಾರ್ಯದರ್ಶಿಗಳು ಸಚಿವ ಸಂಪುಟ ಸ್ಥಾನಮಾನ ಹೊಂದಿದ್ದು, ಭತ್ಯೆ ಪಡೆಯುತ್ತಾರೆ.‌‌ ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ’ ಎಂದು ಆದೇಶದಲ್ಲಿ‌ ತಿಳಿಸಲಾಗಿದೆ.

ADVERTISEMENT

‘ಸಂಸದೀಯ ಕಾರ್ಯದರ್ಶಿಗಳ ವೇತನ ಹಾಗೂ ಭತ್ಯೆ ಕಾಯ್ದೆಯು ಕಾನೂನಿಗೆ ವ್ಯತಿರಿಕ್ತವಾಗಿದೆ’ ಎಂದು ನ್ಯಾಯಪೀಠ ಘೋಷಿಸಿದೆ.

ಡಾ.ಅಂಜಲಿ ಹೇಮಂತ ನಿಂಬಾಳ್ಕರ್, ಮಹಾಂತೇಶ ಕೌಜಲಗಿ, ರೂಪಕಲಾ ಎಂ.ಶಶಿಧರ್, ರಾಘವೇಂದ್ರ ಹಿಟ್ನಾಳ್, ಡಿ.ಎಸ್.ಹೂಲಗೇರಿ, ವಿಧಾನ ಪರಿಷತ್ ಸದಸ್ಯರಾದ ಕೆ.ಅಬ್ದುಲ್ ಜಬ್ಬಾರ್, ಐವನ್ ಡಿಸೋಜ ಮತ್ತು ಕೆ.ಗೋವಿಂದರಾಜ್ ಅವರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ಕುಮಾರಸ್ವಾಮಿ ನೇಮಕ ಮಾಡಿದ್ದರು.

ಈ ಕ್ರಮವನ್ನು ಪ್ರಶ್ನಿಸಿದ್ದ ಅರ್ಜಿದಾರರು, ‘ಸಂಸದೀಯ ಕಾರ್ಯದರ್ಶಿಗಳ ನೇಮಕಾತಿ ಸಂವಿಧಾನದ 164 (1-ಎ) ವಿಧಿಗೆ ವಿರುದ್ಧವಾಗಿದೆ. ಆದ್ದರಿಂದ ಐವನ್ ಡಿಸೋಜ ಹಾಗೂ ಇತರರನ್ನು ಸಂಸದೀಯ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದ್ದರು.

ಬಿಎಸ್‌ವೈ ನೇಮಿಸಿದವರಿಗೂ ಆತಂಕ?

ಸಂಸದೀಯ ಕಾರ್ಯದರ್ಶಿ ನೇಮಕದ ಅಧಿಕಾರ ಮುಖ್ಯಮಂತ್ರಿಗೆ ಇಲ್ಲ ಎಂದು ಹೈಕೋರ್ಟ್ ಹೇಳಿರುವುದರಿಂದಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕವಾಗಿರುವ ರಾಜಕೀಯ ಕಾರ್ಯದರ್ಶಿಗಳ ಹಣೆಬರಹ ಏನಾಗಲಿದೆ ಎಂಬ ಕುತೂಹಲ ಮೂಡಿದೆ.

ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಎಸ್‌.ಆರ್‌.ವಿಶ್ವನಾಥ್‌, ಎಂ.ಪಿ.ರೇಣುಕಾಚಾರ್ಯ ಹಾಗೂ ಶಂಕರಗೌಡ ಪಾಟೀಲ ಅವರನ್ನು ರಾಜಕೀಯ ಕಾರ್ಯದರ್ಶಿಗಳಾಗಿ ನೇಮಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಇನ್ನಷ್ಟು ಶಾಸಕರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಿ ಸಮಾಧಾನಪಡಿಸುವ ಇರಾದೆಯನ್ನು ಮುಖ್ಯಮಂತ್ರಿ ಹೊಂದಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.