ADVERTISEMENT

ಚಿಕಿತ್ಸೆಗಾಗಿ ರೋಗಿಗಳ ಪರದಾಟ, ಎಂಜಿನಿಯರ್‌ ಸಾವಿಗೆ ಕೊರೊನಾ ಭೀತಿ ಕಾರಣವೇ?

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 21:03 IST
Last Updated 9 ಏಪ್ರಿಲ್ 2020, 21:03 IST
ರಾಜು ನಾಯ್ಕ
ರಾಜು ನಾಯ್ಕ   

ಹುಬ್ಬಳ್ಳಿ: ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಹೊರತುಪಡಿಸಿ ಉಳಿದ ಚಿಕಿತ್ಸೆಗಳನ್ನು ನೀಡುತ್ತಿಲ್ಲ. ಜೊತೆಗೆ ಕ್ಲಿನಿಕ್‌ಗಳೂ ಬಂದ್ ಆಗಿವೆ. ಚಿಕಿತ್ಸೆಗಾಗಿ ಜನರು ಪರದಾಡುವಂತಾಗಿದೆ.

ಬೆಳಿಗ್ಗೆ ಕೆಲ ವೈದ್ಯರು ಕ್ಲಿನಿಕ್‌ಗಳನ್ನು ತೆರೆದು ಚಿಕಿತ್ಸೆ ನೀಡುತ್ತಿದ್ದಾರೆ. ಜನರು, ಈಗ ವೈದ್ಯಕೀಯ ಸೌಲಭ್ಯಕ್ಕಾಗಿಯೂ ಸಂಕಷ್ಟ ಎದುರಿಸುವಂತಾಗಿದೆ. ಧಾರವಾಡದ ಎಂಜಿನಿಯರ್ ರಾಜು ನಾಯ್ಕ್‌ ಅವರಿಗೆ ಸರಿಯಾಗಿ ಚಿಕಿತ್ಸೆ ದೊರೆಯದ್ದರಿಂದಲೇ ಮೃತರಾದರು ಎಂಬ ಆರೋಪ ಕೇಳಿ ಬಂದಿದೆ.

ಪುಣೆಯಲ್ಲಿ ಎಂಜಿನಿಯರ್‌ ಆಗಿದ್ದ ರಾಜು ಅವರು ಲಾಕ್‌ ಡೌನ್‌ ಆದ ಹಿನ್ನೆಲೆಯಲ್ಲಿ ಧಾರವಾಡಕ್ಕೆ ಬಂದಿದ್ದರು. ವಾರದ ನಂತರ ಅವರ ಕಣ್ಣುಗಳು ಹಳದಿ ಆಗಿದ್ದವು. ಜೊತೆಗೆ ಕೆಮ್ಮು, ಜ್ವರ ಕಾಣಿಸಿಕೊಂಡಿದ್ದವು. ಪುಣೆಯಿಂದ ಬಂದಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದೆ ಕೋವಿಡ್‌ –19 ತಪಾಸಣೆಗಾಗಿ ಕಿಮ್ಸ್‌ಗೆ ಹೋಗುವಂತೆ ಸೂಚಿಸಿದರು.

ADVERTISEMENT

ಮಾ.30 ರಂದು ಕಿಮ್ಸ್‌ಗೆ ದಾಖಲಾದರು. ಏ.1ಕ್ಕೆ ‘ಕೋವಿಡ್‌–19’ ಇಲ್ಲ ಎಂಬ ವರದಿ ಬಂದಿತು. ಏ.2 ರಂದು ಆರೋಗ್ಯದ ಸ್ಥಿತಿ ಚಿಂತಾಜನಕವಾಗಿದ್ದರಿಂದ ಅಲ್ಲಿಂದ ಬಿಡುಗಡೆ ಮಾಡಿಸಿಕೊಂಡು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಹೋಗಲಾಯಿತು. ಅವರೂ ಚಿಕಿತ್ಸೆ ನೀಡಲಿಲ್ಲ. ಮತ್ತೆ ಕಿಮ್ಸ್‌ಗೆ ದಾಖಲಿಸಲಾಯಿತು. ಅಲ್ಲಿಯೇ ಮೃತರಾದರು.

‘ಚಿಕಿತ್ಸೆ ಸರಿಯಾಗಿ ನೀಡಿದ್ದರೆ ಮಗ ಬದುಕಿರುತ್ತಿದ್ದ. ‘ಕೋವಿಡ್‌–19’ ಭೀತಿಯಿಂದ ಸರಿಯಾದ ಚಿಕಿತ್ಸೆ ನೀಡಲಿಲ್ಲ. ಚಿಕಿತ್ಸೆ ನೀಡಿದ್ದರೆ, ಇದ್ದೊಬ್ಬ ಮಗ ಉಳಿಯುತ್ತಿದ್ದ’ ಎಂದು ರಾಜು ತಂದೆ ಚಂದ್ರಕಾಂತ ನಾಯ್ಕ್‌ ಆರೋಪಿಸಿದರು.

‘ರಾಜು ನಾಯ್ಕ್‌ ಅವರಿಗೆ ನ್ಯುಮೋನಿಯಾ, ಜಾಂಡೀಸ್‌ ಲಕ್ಷಣಗಳಿದ್ದವು. ಅವರಚಿಕಿತ್ಸೆಯಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸಿಲ್ಲ. ಕೊರೊನಾ ಇರಬಹುದು ಎಂದು ಕೋವಿಡ್‌ 19 ಪರೀಕ್ಷೆ ಮಾಡಿಸಲಾಗಿತ್ತು. ಹಾಗೆಂದು ಚಿಕಿತ್ಸೆ ನಿಲ್ಲಿಸಿರಲಿಲ್ಲ’ ಎನ್ನುತ್ತಾರೆ ಕಿಮ್ಸ್‌ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ.

***

ಯಾವುದೇ ರೋಗಿ ಇರಲಿ. ಸೂಕ್ತ ಚಿಕಿತ್ಸೆ ಸಿಗುವ ವ್ಯವಸ್ಥೆ ಆಗಬೇಕು. ಆಸ್ಪತ್ರೆಗಳಿಂದ ಆಸ್ಪತ್ರೆಗೆ ಅಲೆದಾಡಿಸಿದರೆ, ರೋಗಿಗಳು ಬೇಗನೇ ಸಾಯುತ್ತಾರೆ

- ಚಂದ್ರಕಾಂತ ನಾಯ್ಕ, ಮೃತರ ತಂದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.