ADVERTISEMENT

ವಿವೇಕದಿಂದ ವರ್ತಿಸಿ: ಪೇಜಾವರ ವಿಶ್ವಪ್ರಸನ್ನಶ್ರೀ ಚಾಟಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 17:51 IST
Last Updated 20 ಅಕ್ಟೋಬರ್ 2021, 17:51 IST
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ   

ಗದಗ: ‘ಚುನಾವಣೆ ಸಂದರ್ಭದಲ್ಲಿ ಯಾವುದೋ ಒಂದು ಗುಂಪು, ಸಮುದಾಯವನ್ನು ಓಲೈಸಲು ರಾಜಕಾರಣಿಗಳು ಇಲ್ಲ ಸಲ್ಲದ ಮಾತನಾಡುವುದು ಸರಿಯಲ್ಲ. ತಾವು ಆಡುವ ಮಾತಿನಿಂದ ಆಗುವ ದುಷ್ಪರಿಣಾಮದ ಬಗ್ಗೆ ರಾಜಕೀಯ ನಾಯಕರು ಯೋಚಿಸದಿರುವುದು ಬೇಸರದ ಸಂಗತಿ’ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.‌

ಬುಧವಾರ ರಾತ್ರಿ ನಗರಕ್ಕೆ ಆಗಮಿಸಿದ ವೇಳೆ ಮಾಧ್ಯಮ ಪ್ರತಿನಿಧಿಗಳ ಜತೆಗೆ ಅವರು ಮಾತನಾಡಿ, ‘ಮತಗಳನ್ನು ಸೆಳೆಯುವ ಒಂದೇ ಉದ್ದೇಶದಿಂದ ರಾಜಕಾರಣಿಗಳು ಇಂತಹ ಮಾತು ಆಡುತ್ತಿದ್ದು, ರಾಜಕೀಯ ವ್ಯವಸ್ಥೆ ಹಾಳಾಗಿದೆ. ಜನಪ್ರತಿನಿಧಿಗಳು ವಿವೇಕದಿಂದ ವರ್ತಿಸಬೇಕು’ ಎಂದು ಅವರು ಚಾಟಿ ಬೀಸಿದರು.

‘ಚುನಾವಣೆ ಬಂದಾಗ ಅಭಿವೃದ್ಧಿಯ ಚರ್ಚೆಗಳು ಕಡಿಮೆಯಾಗಿ, ವ್ಯಕ್ತಿಗತವಾಗಿ ವಿಚಾರ ಪ್ರಸ್ತಾಪದ ಪ್ರವೃತ್ತಿ ನಡೆಯುತ್ತಿದೆ. ಇದರಿಂದ ಯಾರಿಗೂ ಏನೂ ಉಪಯೋಗ ಇಲ್ಲ. ಬದಲಾಗಿ ಚುನಾವಣೆಯಲ್ಲಿ ಜಯಗಳಿಸಿದರೆ ಕ್ಷೇತ್ರಕ್ಕೆ, ಜನತೆಗೆ ತಾವೇನು ಮಾಡುತ್ತೇವೆ ಎಂಬುದನ್ನು ಮತದಾರರ ಮುಂದೆ ಹೇಳಲಿ’ ಎಂದು ಸಲಹೆ ನೀಡಿದರು.

ADVERTISEMENT

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ರಾಮ ಮಂದಿರ ದೇಣಿಗೆ ಸಂಗ್ರಹ ಲೆಕ್ಕ ಕೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ‘ರಾಮ ಮಂದಿರ ನಿರ್ಮಾಣ ಹಾಗೂ ಅದಕ್ಕೆ ಸಂಬಂಧಿಸಿದಂತೆ ಒಂದು ಟ್ರಸ್ಟ್ ಇದೆ. ಕಾರ್ಯದರ್ಶಿಗಳಿದ್ದಾರೆ. ಈ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರೂ ಸಾರ್ವಜನಿಕವಾಗಿ ಕೇಳುವುದಕ್ಕಿಂತ; ಟ್ರಸ್ಟ್ ಬಳಿ ಲೆಕ್ಕ ಕೇಳಲಿ, ಅವರು ಕೊಡುತ್ತಾರೆ’ ಎಂದು ಹೇಳಿದರು.

‘ಗದುಗಿನಲ್ಲಿರುವ ಈಗಿನ ಜುಮ್ಮಾ ಮಸೀದಿ ಜಾಗದಲ್ಲಿ ಹಿಂದೆ ವೆಂಕಟೇಶ್ವರ ದೇವಸ್ಥಾನ ಇತ್ತು’ ಎಂಬ ಚರ್ಚೆ ಕುರಿತ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ಇದು ನ್ಯಾಯಾಲಯದ ಮೂಲಕ ಇತ್ಯರ್ಥವಾದಲ್ಲಿ ಸ್ವಾಗತಿಸುತ್ತೇವೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣ ವಿಚಾರ ಕೂಡ ಏಕಪಕ್ಷೀಯವಾಗಿ ಆಗಿಲ್ಲ. ಕೋರ್ಟ್ ಮೂಲಕ ಆಗಿದ್ದರಿಂದಾಗಿ ಎಲ್ಲರೂ ಒಪ್ಪಬೇಕಾಯಿತು. ಯಾವುದೇ ಕೆಲಸ ಶಾಂತಿಯುತವಾಗಿ ನಡೆದರೆ ಮಾತ್ರ ಯಾವುದೇ ಸಮಸ್ಯೆ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.