ADVERTISEMENT

ಮರಳುಗಾರಿಕೆಗೆ ಅವಕಾಶ ನೀಡದಿದ್ದರೆ ಉಪವಾಸ: ಪೇಜಾವರ ಶ್ರೀ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 10:38 IST
Last Updated 1 ನವೆಂಬರ್ 2018, 10:38 IST
   

ಉಡುಪಿ: ಪ್ರಕೃತಿಗೆ ಹಾನಿಯಾಗದಂತೆ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಅವಕಾಶ ನೀಡಬೇಕು. ಇಲ್ಲವಾದರೆ ನ.10ರಂದು ಉಪವಾಸ ಮಾಡುವುದಾಗಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಎಚ್ಚರಿಕೆ ನೀಡಿದರು.

ಮರಳುಗಾರಿಕೆ ಆರಂಭಕ್ಕೆ ಒತ್ತಾಯಿಸಿ ಬಿಜೆಪಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಧರಣಿ ಸ್ಥಳಕ್ಕೆ ಗುರುವಾರ ಭೇಟಿನೀಡಿದ ಶ್ರೀಗಳು ಮಾತನಾಡಿದರು.‌

ಮರಳುಗಾರಿಕೆ ಆರಂಭವಾಗದ ಪರಿಣಾಮ ಉದ್ದಿಮೆಗಳಿಗೆ, ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಜಿಲ್ಲೆಯಲ್ಲಿ ಅಭಿವೃದ್ಧಿ ಚಟುವಟಿಕೆಗಳು ಕುಂಠಿತಗೊಂಡಿವೆ. ಮರಳುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದರೆ ಪ್ರಾಕೃತಿಕ ಅಸಮತೋಲನ ಉಂಟಾಗಿ ಕೇರಳಕ್ಕೆ ಎದುರಾದ ಗಂಡಾಂತರ ನಾಡಿಗೂ ಬರಬಹುದು. ಅನಿರ್ಬಂಧಿತ ಮರಳುಗಾರಿಕೆಯಿಂದ ಪರಿಸರ ನಾಶವಾಗುತ್ತದೆ. ಹಾಗಾಗಿ, ಎರಡೂ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಮರಳುಗಾರಿಕೆಗೆ ಅನುಮತಿ ನೀಡಬೇಕು. ಇಲ್ಲವಾದರೆ, ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಪೇಜಾವರ ಶ್ರೀಗಳು ತಿಳಿಸಿದರು.

ADVERTISEMENT

ಪರಿಸರ ಇಲಾಖೆಯ ತಜ್ಞರ ಜತೆ ಚರ್ಚಿಸಿ ಪ್ರಕೃತಿಗೆ ಹಾನಿಯಾಗದಂತೆ ಮರಳುಗಾರಿಕೆ ಆರಂಭಿಸಬೇಕು. ಪರಿಶಿಷ್ಟ ಜಾತಿ ಸೇರಿದಂತೆ ಎಲ್ಲ ವರ್ಗದವರಿಗೂ ಅನುಮತಿ ಸಿಗಬೇಕು ಎಂದು ಶ್ರೀಗಳು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.