ADVERTISEMENT

ಕೈಸೇರದ ಪಿಂಚಣಿ: ಅಶಕ್ತರು ಕಂಗಾಲು

ಏಳೆಂಟು ತಿಂಗಳುಗಳಿಂದ ವೃದ್ಧರು, ಅಂಗವಿಕಲರು, ವಿಧವೆಯರ ಗೋಳು : ಔಷಧ ಖರೀದಿಗೂ ಪರದಾಟ

ರಾಜೇಶ್ ರೈ ಚಟ್ಲ
Published 28 ಆಗಸ್ಟ್ 2020, 21:53 IST
Last Updated 28 ಆಗಸ್ಟ್ 2020, 21:53 IST
ಅಬ್ದುಲ್ಲ ಸತ್ತಾರ್
ಅಬ್ದುಲ್ಲ ಸತ್ತಾರ್   

ಬೆಂಗಳೂರು: ಔಷಧ ಖರೀದಿ ಸೇರಿದಂತೆತಿಂಗಳ ಜೀವನೋಪಾಯಕ್ಕಾಗಿ ಸಾಮಾಜಿಕ ಭದ್ರತೆ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಮೂರು ಲಕ್ಷಕ್ಕೂ ಹೆಚ್ಚು ಅಶಕ್ತರುಏಳೆಂಟು ತಿಂಗಳುಗಳಿಂದ ಹಣ ಕೈಸೇರದೆ ಕಂಗಾಲಾಗಿದ್ದಾರೆ.

ವೃದ್ಧಾಪ್ಯ, ವಿಧವಾ, ಅಂಗವಿಕಲ ವೇತನ, ಮನಸ್ವಿನಿ (ಅವಿವಾಹಿತ, ವಿಚ್ಛೇದಿತ), ಮೈತ್ರಿ (ಲೈಂಗಿಕ ಅಲ್ಪಸಂಖ್ಯಾತರು), ಸಂಧ್ಯಾ ಸುರಕ್ಷಾ, ಆ್ಯಸಿಡ್‌ ಸಂತ್ರಸ್ತರು, ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರು (ವಿಧವೆ), ಎಂಡೋಸಲ್ಫಾನ್‌ ಸಂತ್ರಸ್ತರು ಹೀಗೆ ಒಂಬತ್ತು ಪಿಂಚಣಿ ಯೋಜನೆಗಳಡಿ 65.92 ಲಕ್ಷ ಫಲಾನುಭವಿಗಳು 2020ರ ಜುಲೈ ತಿಂಗಳಲ್ಲಿ ಪಿಂಚಣಿ ಪಡೆದಿದ್ದಾರೆ.

ಆದರೆ, ಖಜಾನೆ ಬದಲು, ವಿಳಾಸದಲ್ಲಿ ಇಲ್ಲ, ಬ್ಯಾಂಕು ಖಾತೆ ಮಾಹಿತಿ, ಆಧಾರ್‌ ಸೇರಿದಂತೆ ಸೂಕ್ತ ದಾಖಲೆ ಸಲ್ಲಿಸಿಲ್ಲ... ಹೀಗೆ ಹಲವು ಕಾರಣಗಳಿಂದ 3.40 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಏಳೆಂಟು ತಿಂಗಳುಗಳಿಂದ ಪಿಂಚಣಿ ಬಟವಾಡೆ ಆಗಿಲ್ಲ ಎನ್ನುತ್ತಾರೆ ಅಧಿಕಾರಿಗಳು. ಆದರೆ, ಪಿಂಚಣಿ ಪಡೆಯಲು ಅರ್ಹರಿದ್ದರೂ, ನನೆಗುದಿಗೆ ಬಿದ್ದಿದೆ ಎಂಬ ಆರೋಪ ಫಲಾನುಭವಿಗಳದ್ದು.

ADVERTISEMENT

ಪ್ರತೀ ತಿಂಗಳ 10ನೇ ತಾರೀಕಿನೊಳಗೆ ಪಿಂಚಣಿ ಜಮೆಯಾಗುತ್ತಿತ್ತು. ಆದರೆ, ವರ್ಷಾರಂಭದಲ್ಲಿ ತಂತ್ರಾಂಶ ಅಪ್‌ಡೇಟ್‌ನಿಂದ ತೊಂದರೆಗಳು, ಬಳಿಕ ಲಾಕ್‌ಡೌನ್‌ನಿಂದ ಅಡಚಣೆ ಆಗಿದೆ ಎನ್ನುವುದು ತಾಲ್ಲೂಕು ಮಟ್ಟದ ಅಧಿಕಾರಿಗಳ ವಾದ.

ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಸಮಸ್ಯೆ ತಲೆದೋರಿದೆ ಎಂಬ ಮಾತೂ ಇದೆ. ಆದರೆ, ಇದನ್ನು ಒಪ್ಪದ ನಿರ್ದೇಶನಾಲಯದ ನಿರ್ದೇಶಕ ಜಿ. ಪ್ರಭು, ‘ಪಿಂಚಣಿ ಹಂಚಿಕೆ ಅಗತ್ಯ ವಸ್ತುಗಳ ಸೇವೆಯಲ್ಲಿ ಸೇರಿದೆ. ಹೀಗಾಗಿ, ಆದ್ಯತೆ ಮೇಲೆ ಹಣ ಬಿಡುಗಡೆಯಾಗುತ್ತಿದೆ. ಹಣ ಜಮಾವಣೆಗೆ ತಾಂತ್ರಿಕ ಕಾರಣಗಳಿಂದ ತೊಂದರೆಯಾಗಿರುವುದು ನಿಜ. ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

‘2020ರ ಜ. 1ರಿಂದ ಖಜಾನೆ–1ರ ಬದಲು ಖಜಾನೆ–2ರ ತಂತ್ರಾಂಶದ ಮೂಲಕ ಪಿಂಚಣಿ ಬಟವಾಡೆಯಾಗುತ್ತಿದೆ. ಆದರೆ, ಸೂಕ್ತ ದಾಖಲೆಗಳನ್ನು ನೀಡದ, ತಪ್ಪು ಅಂಚೆಪಟ್ಟಿಗೆ ಸಂಖ್ಯೆ, ಗ್ರಾಮದ ಹೆಸರು ನಮೂದಿಸಿದ ಫಲಾನುಭವಿಗಳಿಗೆ ಮಾಸಾಶನ ಹಂಚಿಕೆ ಸ್ಥಗಿತಗೊಂಡಿದೆ. ಅರ್ಹ ಪಿಂಚಣಿದಾರರರ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿದೆ’ ಎಂದರು.

ವಿವಿಧ ಕಾರಣಗಳಿಗೆ ಹಲವು ತಿಂಗಳುಗಳಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಿದ್ದ 5,29,867 ಪಿಂಚಣಿದಾರರ ಪೈಕಿ, ಆಗಸ್ಟ್ 14ರವರೆಗೆ 3,25,289 ಫಲಾನುಭವಿಗಳಿಗೆ ಮತ್ತೆ ಹಂಚಿಕೆ ಆರಂಭಿಸಲಾಗಿದೆ. ಇನ್ನೂ 2,04,578 ಫಲಾನುಭವಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡಲಾಗಿದೆ. ತಡೆಹಿಡಿಯಲಾದರಲ್ಲಿ ಬೆಂಗಳೂರು (20,441), ತುಮಕೂರು (18,561), ಬೆಳಗಾವಿ (16,614), ಮೈಸೂರು (12,991), ಹಾಸನ (11,754), ಕಲಬುರ್ಗಿ (10,445) ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಶೇ 30ರಷ್ಟು ಮಂದಿ ಮೃತಪಟ್ಟಿರುವ ಶಂಕೆಯಿದೆ. ಇನ್ನೂ ಕೆಲವರು ಬ್ಯಾಂಕ್‌ ಖಾತೆ ಸಂಖ್ಯೆ, ಆಧಾರ್‌, ವಿಳಾಸ ಸೇರಿ ಅಗತ್ಯ ಮಾಹಿತಿ ಸಲ್ಲಿಸದ ಕಾರಣಕ್ಕೆ ತಡೆಹಿಡಿಯಲಾಗಿದೆ.

ಅಲ್ಲದೆ, ಫಿಸಿಕಲ್‌ ವೆರಿಫಿಕೇಷನ್‌ (ದೈಹಿಕ ಪರೀಕ್ಷೆ) ಆಗಿಲ್ಲ ಎಂಬ ಕಾರಣಕ್ಕೆ 1,33,319 ಫಲಾನುಭವಿಗಳಿಗೆ ಪಿಂಚಣಿ ಹಂಚಿಕೆಯಾಗುತ್ತಿಲ್ಲ. 7,51,064 ಫಲಾನುಭವಿಗಳ ದೈಹಿಕ ಪರೀಕ್ಷೆ ಬಾಕಿ ಇತ್ತು. ಈ ಪೈಕಿ, ಆಗಸ್ಟ್ 14ವರೆಗೆ 6,16,310 ಫಲಾನುಭವಿಗಳ ದೈಹಿಕ ಪರೀಕ್ಷೆ ಪೂರ್ಣಗೊಂಡಿದ್ದು, ಮೃತಪಟ್ಟ ಕಾರಣಕ್ಕೆ 1,00,013 ಮಂದಿಯ ಪಿಂಚಣಿ ರದ್ದುಪಡಿಸಲಾಗಿದೆ. ಸಮರ್ಪಕ ದಾಖಲೆ ನೀಡಿದ 5,16,297 ಮಂದಿಗೆ ಮತ್ತೆ ಪಿಂಚಣಿ ನೀಡಲಾಗುತ್ತಿದೆ. ದೈಹಿಕ ಪರೀಕ್ಷೆ ಆಗಬೇಕಾದ ಫಲಾನುಭವಿಗಳ ಸಂಖ್ಯೆ ಅತೀ ಹೆಚ್ಚು ಬೆಂಗಳೂರು (90,889), ಬೆಳಗಾವಿ (6,126), ಕೋಲಾರ (5,077), ಮಂಡ್ಯ (4,130) ಜಿಲ್ಲೆಯಲ್ಲಿದ್ದಾರೆ.

‘ಪಿಂಚಣಿದಾರರ ಬಗ್ಗೆ ವರ್ಷಕ್ಕೊಮ್ಮೆ ದೈಹಿಕ ಪರಿಶೀಲನೆ ನಡೆಸಲಾಗುತ್ತದೆ. ಆದರೆ, ತಾಲ್ಲೂಕುಮಟ್ಟದಲ್ಲಿ ನಡೆಯುವ ಈ ಪ್ರಕ್ರಿಯೆ ಕೊರೊನಾ ಕಾರಣಕ್ಕೆ ಕೆಲವು ಜಿಲ್ಲೆಗಳಲ್ಲಿ ಈ ಬಾರಿ ನಡೆದಿಲ್ಲ. ಈ ರೀತಿಯ ಪರಿಶೀಲನೆ ವೇಳೆ ಮೃತಪಟ್ಟವರು, ಎರಡೆರಡು ಯೋಜನೆಗಳಲ್ಲಿ ಪಿಂಚಣಿ ಪಡೆಯುತ್ತಿರುವವರನ್ನು ಪತ್ತೆ ಹಚ್ಚಲಾಗಿದ್ದು, ಆರು ತಿಂಗಳ ಅವಧಿಯಲ್ಲಿ 4 ಲಕ್ಷಕ್ಕೂ ಹೆಚ್ಚು ನಕಲಿ ಪಿಂಚಣಿದಾರರನ್ನು ಗುರುತಿಸಿ, ಮಾಸಾಶನ ರದ್ದುಪಡಿಸಲಾಗಿದೆ’ ಎಂದೂ ಅವರು ತಿಳಿಸಿದರು.

20.36 ಲಕ್ಷ ಜನರಿಗೆ ಮನಿ ಆರ್ಡರ್!

‘ಹೊಸ ತಂತ್ರಾಂಶ ಮೂಲಕ 45.55 ಲಕ್ಷ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಪಿಂಚಣಿ ಜಮೆ ಮಾಡಲಾಗುತ್ತಿದೆ. ಇನ್ನೂ 20.36 ಲಕ್ಷ ಜನರಿಗೆ ಎಲೆಕ್ಟ್ರಾನಿಕ್‌ ಮನಿ ಆರ್ಡರ್‌ (ಇಎಂಒ) ಮೂಲಕ ತಲುಪಿಸಲಾಗುತ್ತಿದೆ. ಅನೇಕ ಹಳ್ಳಿಗಳಲ್ಲಿ ಈ ವ್ಯವಸ್ಥೆ ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಕಾರಣಕ್ಕಾಗಿ ಅಂಚೆ ಕಚೇರಿ ಅಥವಾ ಬ್ಯಾಂಕಿನಲ್ಲಿ ಖಾತೆ ತೆರೆದು ವಿವರ ಸಲ್ಲಿಸುವಂತೆ ಫಲಾನುಭವಿಗಳಿಗೆ ಸೂಚಿಸಲಾಗಿದೆ’ ಎಂದು ಜಿ. ಪ್ರಭು ತಿಳಿಸಿದರು.

***

‌‘ಅಲೆದಾಡಿ ಸಾಕಾಯಿತು’

ಆರು ತಿಂಗಳುಗಳಿಂದ ಪಿಂಚಣಿ ಹಣ ಬಂದಿಲ್ಲ. ಆಧಾರ್, ಪಿಂಚಣಿ ಆದೇಶ ಪತ್ರ, ಬ್ಯಾಂಕ್ ಪಾಸ್‌ಬುಕ್ ನಕಲು ನೀಡಬೇಕೆಂದು ಅಧಿಕಾರಿಗಳು ತಿಳಿಸಿದ್ದರು. ನಾಡಕಚೇರಿಗೆ ದಾಖಲೆಗಳನ್ನು ನೀಡಿ ಎರಡು ತಿಂಗಳು ಕಳೆದರೂ ಹಣ ಬಂದಿಲ್ಲ ಕಚೇರಿಗೆ ಅಲೆದಾಡಿ ಸಾಕಾಯಿತು. ನನಗೆ ಮಧುಮೇಹ, ರಕ್ತದೊತ್ತಡ ಕಾಯಿಲೆಯಿದೆ. ಈ ಹಣದಲ್ಲಿ ಮಾತ್ರೆ ಖರೀದಿಸುತ್ತಿದ್ದೆ. ಹಣ ಬಾರದೆ ತೊಂದರೆಯಾಗಿದೆ.

-ಅಬ್ದುಲ್ ಸತ್ತಾರ್,ಜಕ್ಕೂರು

***

‘ಫೆಬ್ರುವರಿಯಿಂದ ಪಿಂಚಣಿ ಬಂದಿಲ್ಲ’

ಫೆಬ್ರುವರಿಯಿಂದ ಪಿಂಚಣಿ ಬಂದಿಲ್ಲ. ತಹಶೀಲ್ದಾರ್ ಕಚೇರಿಯಲ್ಲಿ ಎರಡು ಬಾರಿ ದಾಖಲೆಗಳ ನಕಲು ನೀಡಿ ಬಂದರೂ ಪ್ರಯೋಜನ
ವಾಗಿಲ್ಲ. ಹಣ ಬಂದಿರುವ ಬಗ್ಗೆ ಖಾತರಿಪಡಿಸಿಕೊಳ್ಳಲು ವಾರಕ್ಕೊಮ್ಮೆ ಆಟೊಗೆ ಹಣ ನೀಡಿ ಅಂಚೆ ಕಚೇರಿಗೆ ಹೋಗಿ ಬರುತ್ತಿದ್ದೇನೆ. ಅಲ್ಲಿ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲಬೇಕು. ಕೊನೆಗೆ ಸಿಬ್ಬಂದಿ ಪಾಸ್‌ ಬುಕ್‌ ಪರಿಶೀಲಿಸಿ ಹಣ ಬಂದಿಲ್ಲ ಎಂದು ಹೇಳುತ್ತಾರೆ. ಸಣ್ಣಪುಟ್ಟ ಖರ್ಚುಗಳಿಗೆ ಈ ಹಣವನ್ನೇ ನಂಬಿದ್ದೇನೆ.

-ಪ್ರೇಮಮ್ಮ,ಯಲಹಂಕ

***

‘ಯಾರ ಬಳಿ ಅಂಗಲಾಚಬೇಕು’

ಅಂಗವಿಕಲ ಪಿಂಚಣಿ ಯೋಜನೆಯಡಿ ನನಗೆ ತಿಂಗಳಿಗೆ
₹ 1,400 ಪಿಂಚಣಿ ಮೇ ತಿಂಗಳವರೆಗೆ ಬಂದಿದೆ. ಆದರೆ, ಎರಡು ತಿಂಗಳುಗಳಿಂದ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿದೆ. ನನ್ನ ವೈದ್ಯಕೀಯ ವೆಚ್ಚಗಳಿಗೆ ಈ ಹಣವನ್ನು ಬಳಸುತ್ತಿದ್ದೆ. ಪಿಂಚಣಿ ಬಾರದೆ ಸಂಕಷ್ಟದಲ್ಲಿದ್ದೇನೆ.

-ಸಿ.ಕೆ. ಅಕ್ಷಯ್,ಕಬ್ಬನ್‌ಪೇಟೆ

***

ಪಿಂಚಣಿಗೆ ಮೀಸಲಿಟ್ಟ ವಾರ್ಷಿಕ ಮೊತ್ತ– ₹ 7,465 ಕೋಟಿ

ರಾಜ್ಯದಲ್ಲಿ ಪಿಂಚಣಿ ಪಡೆದವರ ಅಂಕಿಅಂಶ (ಜುಲೈ–2020)

ಪಿಂಚಣಿ ವಿಧ; ಫಲಾನುಭವಿಗಳು

ವೃದ್ಧಾಪ್ಯ; 12,00,790

ಸಂಧ್ಯಾ ಸುರಕ್ಷಾ; 27,01,733

ವಿಧವೆಯರು; 16,91,100

ಅಂಗವಿಕಲ; 8,63,337

ಮೈತ್ರಿ; 1,727

ಮನಸ್ವಿನಿ; 1,23,071,

ಆ್ಯಸಿಡ್‌ ಸಂತ್ರಸ್ತರು; 36

ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರು (ವಿಧವೆಯರು); 4,098

ಎಂಡೋಸಲ್ಫಾನ್‌ ಸಂತ್ರಸ್ತರು; 6,474

ಒಟ್ಟು; 65,92,366

***

ಪಿಂಚಣಿ ತಡೆಹಿಡಿಯಲಾದ ಫಲಾನುಭವಿಗಳು

ಕಾರಣ; ಪಿಂಚಣಿದಾರರು

ವಿವಿಧ ಕಾರಣಕ್ಕೆ ತಾತ್ಕಾಲಿಕ ಅಮಾನತು; 2,04,578

ದೈಹಿಕ ಪರೀಕ್ಷೆ ಆಗಿಲ್ಲ; 1,33,319

ಒಟ್ಟು; 3,37,897

***

ಪಿಂಚಣಿ ಹಣ ಹಂಚಿಕೆ ವಿಧಾನ

ವಿಧಾನ; ಫಲಾನುಭವಿಗಳು

ಬ್ಯಾಂಕು ಖಾತೆ; 45,55,659

ಮನಿ ಆರ್ಡರ್‌; 20,36,707

*ಮಾಹಿತಿ ಮೂಲ– ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.