ADVERTISEMENT

ನ್ಯಾಯಾಧೀಶರಿಗೆ ಪಿಂಚಣಿ: ಸರ್ಕಾರದ ಕ್ರಮ ರದ್ದು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 2:20 IST
Last Updated 29 ನವೆಂಬರ್ 2019, 2:20 IST
ಕರ್ನಾಟಕ ಹೈಕೋರ್ಟ್‌
ಕರ್ನಾಟಕ ಹೈಕೋರ್ಟ್‌   

ಬೆಂಗಳೂರು: ‘ಹೈಕೋರ್ಟ್ ಒಪ್ಪಿಗೆ ಇಲ್ಲದೆ ನ್ಯಾಯಾಧೀಶರ ಸಂಬಳ ಮತ್ತು ಪಿಂಚಣಿಗೆ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ’ ಎಂದು ಹೇಳಿರುವ ಹೈಕೋರ್ಟ್‌, 2006ರ ಏಪ್ರಿಲ್‌ 1ರ ನಂತರ ನೇಮಕಗೊಂಡ ಜಿಲ್ಲಾ ಮತ್ತು ಸಿವಿಲ್ ನ್ಯಾಯಾಧೀಶರನ್ನು ಹೊಸ ನಿವೃತ್ತಿ ವೇತನ ಯೋಜನೆಗೆ ಒಳಪಡಿಸಿ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಕ್ರಮವನ್ನು ರದ್ದುಗೊಳಿಸಿದೆ.

ಅಪಘಾತದಲ್ಲಿ ಮೃತಪಟ್ಟಿದ್ದ ಜಿಲ್ಲಾ ನ್ಯಾಯಾಧೀಶ ರುದ್ರಮುನಿ ಕುಟುಂಬಕ್ಕೆ ಪಿಂಚಣಿ ನೀಡದಿರುವ ಕ್ರಮವನ್ನು ಪ್ರಶ್ನಿಸಿ ಅವರ ಪತ್ನಿ ಶೈಲಜಾ ಮತ್ತು ಅವರ ಮಕ್ಕಳು ಸಲ್ಲಿಸಿದ್ದ ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ಹಾಗೂ ನ್ಯಾಯಮೂರ್ತಿ ಪಿ.ಎಂ.ನವಾಜ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ಈ ಕುರಿತಂತೆ ಆದೇಶಿಸಿದೆ.

‘ಏಕಾಏಕಿ ಪಿಂಚಣಿ ಯೋಜನೆ ಹಿಂತೆಗೆದುಕೊಂಡಿರುವುದು ಸುಪ್ರೀಂ ಕೋರ್ಟ್‌ ತೀರ್ಪು ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ. ಈ ಹಿಂದೆ ಇದ್ದಂತೆ ಸರ್ಕಾರದ ವೆಚ್ಚದಲ್ಲೇ ಪಿಂಚಣಿ ನೀಡಬೇಕು. ಹೊಸ ಯೋಜನೆ ಅನ್ವಯ ಈಗಾಗಲೇ ನ್ಯಾಯಾಧೀಶರ ಸಂಬಳದಲ್ಲಿ ಕಡಿತ ಮಾಡಿದ ಹಣವನ್ನು ಹಿಂದಿರುಗಿಸಬೇಕು. ರುದ್ರಮುನಿ ಅವರ ಕುಟುಂಬಕ್ಕೆ ಒಂದು ತಿಂಗಳ ಅವಧಿಯಲ್ಲಿ ಪಿಂಚಣಿ ಬಿಡುಗಡೆ ಮಾಡಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ.

ADVERTISEMENT

‘ಈ ಆದೇಶದಿಂದಾಗಿ 2006ರ ಏಪ್ರಿಲ್‌ 1ರಿಂದ ನೇಮಕಗೊಂಡಿರುವ ರಾಜ್ಯದ 500ಕ್ಕೂ ಹೆಚ್ಚು ನ್ಯಾಯಾಧೀಶರಿಗೆ ಅನುಕೂಲವಾಗಲಿದೆ’ ಎಂದು ಅರ್ಜಿದಾರರ ಪರ ವಕೀಲ ಪಿ.ಪಿ.ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.