ADVERTISEMENT

2 ತಿಂಗಳಲ್ಲಿ ಪೌರಕಾರ್ಮಿಕರ ನೌಕರಿ ಕಾಯಂ: ಕಾರಜೋಳ ಭರವಸೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2022, 7:56 IST
Last Updated 22 ಆಗಸ್ಟ್ 2022, 7:56 IST
   

ಮೈಸೂರು: ‘ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಇನ್ನೆರಡು ತಿಂಗಳಲ್ಲಿ ಕಾಯಂಗೊಳಿಸಿ ಸರ್ಕಾರಿ ನೌಕರರನ್ನಾಗಿ ಮಾಡಲಾಗುವುದು’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭರವಸೆ ನೀಡಿದರು.

ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಜಾಗೃತಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

‘ಸ್ವಾತಂತ್ರ್ಯ ಬಂದು 75 ವರ್ಷಗಳಾದವು.‌ ಆದರೆ, ದೀನ–ದಲಿತರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಿಲ್ಲ. ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಈಗಲೂ ಇದ್ದಾರೆ ಎಂದರೆ ನಾಚಿಕೆಪಟ್ಟುಕೊಳ್ಳಬೇಕು. ಮಲ ಹೊರುವ ಪದ್ಧತಿ ನಿಷೇಧಿಸಿದ ನಂತರವೂ ಪೌರಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲಾಗಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

ಅಂಗಲಾಚಿದರೂ:

‘ನಮ್ಮ ಮಕ್ಕಳಿಗೂ ಶಿಕ್ಷಣ ಸಿಗಬೇಕು. ಮಲ ಹೊರುವ ಪದ್ಧತಿಯನ್ನು ಸಂಪೂರ್ಣ ನಿಷೇಧಿಸಬೇಕು.‌ ನಮ್ಮನ್ನು ಸರ್ಕಾರಿ ನೌಕರರೆಂದು‌ ಪರಿಗಣಿಸಬೇಕು ಎಂದು ಸಫಾಯಿ ಕರ್ಮಚಾರಿಗಳು ಅಂಗಲಾಚಿದರೂ ಅವರ ಬೇಡಿಕೆ ಈಡೇರಿರಲಿಲ್ಲ’ ಎಂದು ಹೇಳಿದರು.

‘ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನನ್ನ ಕೋರಿಕೆಯ ಮೇರೆಗೆ ಸಫಾಯಿ‌ ಕರ್ಮಚಾರಿ ಆಯೋಗ ಸ್ಥಾಪಿಸಿದರು. ಆದಾಗ್ಯೂ ಅವರ ಸಮಸ್ಯೆಗಳು ಉಳಿದಿವೆ. ಅನೇಕ ಸರ್ಕಾರಗಳು ಬಂದವು–ಹೋದವು. ಆದರೆ, ನಮ್ಮ ಸರ್ಕಾರವು ಪೌರಕಾರ್ಮಿಕರ ಕಾಯಂಗೆ ಕ್ರಮ ವಹಿಸಿದೆ. ಅಲ್ಲಿವರೆಗೆ ಸಂಕಷ್ಟ ಪರಿಹಾರವಾಗಿ ತಲಾ ₹ 2ಸಾವಿರ ನೀಡುತ್ತಿದೆ. ಕಾಯಂಗೊಳಿಸುವವರೆಗೂ‌ ನಮಗೆ ಸಮಾಧಾನವಿಲ್ಲ’ ಎಂದರು.

‘ಕಾಯಂಗೊಳಿಸಲು ಎದುರಾಗಿರುವ ಕಾನೂನು ತೊಡಕು ನಿವಾರಣೆಗೆ ಕ್ರಮ ವಹಿಸಲಾಗಿದೆ. ಈಗಿರುವ ನೇಮಕಾತಿ ಕಾನೂನಿನ ಪ್ರಕಾರ ಶೇ 82ರಷ್ಟು ಹುದ್ದೆಗಳನ್ನು ಬೇರೆ ಸಮಾಜದವರಿಗೆ ಕೊಡಬೇಕು ಎಂದಿದೆ. ಆದರೆ, ಶೇ 100ರಷ್ಟು ನಮ್ಮ ಸಮಾಜದವರೇ ಬರಬೇಕು ಎನ್ನುವುದು ನಮ್ಮ ಆಶಯ. ಇದಕ್ಕಾಗಿ ವಿಶೇಷ ನೇಮಕಾತಿ ನಿಯಮ ರೂಪಿಸಲು ಸಮಿತಿ‌ ರಚಿಸಲಾಗಿದೆ. ತ್ವರತವಾಗಿ ವರದಿ ಪಡೆದು ಮುಖ್ಯಮಂತ್ರಿ ಕ್ರಮ ವಹಿಸಲಿದ್ದಾರೆ’ ಎಂದು ತಿಳಿಸಿದರು.

ಅಧಿಕಾರಿಗಳ ಅಸಡ್ಡೆ ಸಲ್ಲದು:

‘ಹಿಂದಿನ ಸರ್ಕಾರಗಳು ಮತ ರಾಜಕಾರಣಕ್ಕಾಗಿ ಮಿದುಳಿನಿಂದಷ್ಟೆ ಕೆಲಸ ಮಾಡಿದವು. ನಾವು ಮಿದುಳಿನೊಂದಿಗೆ ಹೃದಯ ಹಾಗೂ ಕಾನೂನನ್ನು ಜೋಡಿಸಿ ದೀನ– ದಲಿತರಿಗೆ ನ್ಯಾಯ ಒದಗಿಸಲು ಶ್ರಮಿಸುತ್ತಿದ್ದೇವೆ. ನಗರ ಪ್ರದೇಶದಲ್ಲಿರುವ 52ಸಾವಿರ ಪೌರಕಾರ್ಮಿಕರೆಲ್ಲರಿಗೂ ನ್ಯಾಯ ಒದಗಿಸಲಾಗುವುದು’ ಎಂದರು.

‘ಗ್ರಾಮೀಣ ಪ್ರದೇಶಗಳಲ್ಲಿ ಕೇವಲ 6ಸಾವಿರ ಪೌರಕಾರ್ಮಿಕರಿದ್ದಾರೆ ಎಂದು ವರದಿ ಕೊಟ್ಟಿರುವುದು ಸರಿಯಲ್ಲ. ಈ ಸಂಖ್ಯೆ ಕನಿಷ್ಠ 29ಸಾವಿರವಾದರೂ ದಾಟಬೇಕು. ಆಯೋಗದ ಅಧ್ಯಕ್ಷರು ಎಲ್ಲ ಗ್ರಾ.ಪಂಗಳ ಅಧ್ಯಕ್ಷರು, ಅಧಿಕಾರಿಗಳ ಸಭೆ ನಡೆಸಿ ನಿಖರ ಮಾಹಿತಿ ಪಡೆದುಕೊಳ್ಳಬೇಕು. ಅಧಿಕಾರಿಗಳು ಅಸೆಡ್ಡೆಯಿಂದ ನೌಕರಿ ಮಾಡಬಾರದು’ ಎಂದು ಸೂಚಿಸಿದರು.

‘ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಸಫಾಯಿ‌ ಕರ್ಮಚಾರಿಗಳ ಮಕ್ಕಳಿಗೆ ಶೇ 5ರಷ್ಟು ಸೀಟುಗಳನ್ನು ಕೊಡಲಾಗುತ್ತದೆ. ಅದಕ್ಕೆ ತಗಲುವ ವೆಚ್ಚವನ್ನು ಸರ್ಕಾರ ಪಾವತಿಸುತ್ತದೆ. ಸಮಾಜದವರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಹೊರಗುತ್ತಿಗೆ ಏಜೆನ್ಸಿಗಳು ಪೌರಕಾರ್ಮಿಕನ್ನು ಬಹಳ ಶೋಷಿಸುತ್ತಿವೆ. ಇದು ನೋವಿನ ಸಂಗತಿ. ಹೀಗಾಗಿಯೇ ಶೋಷಣೆ ಮುಕ್ತಗೊಳಿಸಲು ನೌಕರಿ ಕಾಯಂಗೆ ನಿರ್ಧರಿಸಿದ್ದೇವೆ’ ಎಂದರು.

ಶಿಕ್ಷಣ ಕೊಡಿಸಿ:

‘ವಿದ್ಯೆಯಿಂದ ಮಾತ್ರ ಬದುಕು ಬದಲಾವಣೆ ಆಗುತ್ತದೆ. ಹೀಗಾಗಿ, ಶೋಷಿತರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಕುಡಿತದ ಚಟಕ್ಕೆ ಒಳಗಾಗಬಾರದು. ಸ್ಥಳೀಯ ಸಂಸ್ಥೆಗಳವರು ಸ್ವಚ್ಛತೆಗಾಗಿ ಯಂತ್ರಗಳ ಖರೀದಿಗೆ ಕ್ರಮ ಕೈಗೊಳ್ಳಬೇಕು. ಐದಾರು ಸಾವಿರ ರೂಪಾಯಿ ಕೊಡುತ್ತಾರೆಂದು ಮಲದ ಗುಂಡಿಗಳಿಗೆ ಇಳಿಯಬಾರದು’ ಎಂದು ಕೋರಿದರು.

‘90 ಮಂದಿ ಮಲದ ಗುಂಡಿಗಿಳಿದು ಸಾವಿಗೀಡಾಗಿದ್ದಾರೆ. ಹೀಗಾಗಿ, ಯಂತ್ರಗಳನ್ನು ಹೊಂದಿಲ್ಲದ ಸಂಸ್ಥೆಗಳಿಗೆ ನೋಟಿಸ್ ಕೊಡಬೇಕು. ಅಲ್ಲಿನ ಅಧಿಕಾರಿಗಳಿಗೆ ದಂಡ ವಿಧಿಸಬೇಕು’ ಎಂದು ತಾಕೀತು ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಮಾತನಾಡಿ, ‘ಕೆಲವು ನಾಯಕರು ಜಾತಿಯಿಂದಲೇ ಮೇಲೆ ಬಂದಿರುತ್ತಾರೆ. ಆದರೆ, ಅವರಿಗೆ ದೂರದಿಂದಲೇ ‌ಕಾಲಿಗೆ ನಮಸ್ಕಾರ ಹಾಕಬೇಕಾಗುತ್ತದೆ. ಆದರೆ, ಗೋವಿಂದ ಕಾರಜೋಳ ಅವರಿಗೆ ಬದ್ಧತೆ ಇದೆ‌. ತಮ್ಮ ಸಮಾಜದವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಯಾವುದೇ ಮುಲಾಜಿಲ್ಲದೆ ಸಚಿವ ಸಂಪುಟ ಸಭೆಯಲ್ಲಿ ಕೇಳುತ್ತಾರೆ. ಸೌಲಭ್ಯ ಕೊಡಿಸುತ್ತಿದ್ದಾರೆ’ ಎಂದು ಶ್ಲಾಘಿಸಿದರು.

‘ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಎಲ್ಲ ಜಿಲ್ಲೆಗಳಲ್ಲೂ ನಡೆಸಲಾಗುತ್ತದೆ. ಮೊದಲಿಗೆ ಮೈಸೂರಿನಿಂದ ಆರಂಭಿಸಲಾಗಿದೆ’ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ತಿಳಿಸಿದರು.

‘ಮ್ಯಾನ್ಯುಯಲ್ ಸ್ಕ್ಯಾವೆಂಜರ್ ತಡೆಯುವುದು‌ ನಮಗೆ ಸವಾಲಾಗಿದೆ. 10ಸಾವಿರ ಮಂದಿ ಅದರಲ್ಲಿ ತೊಡಗಿದ್ದಾರೆ; ತಲೆ ಮೇಲೆ ಮರ‌ ಹೊರುವ ಪದ್ಧತಿ ಇಂದಿಗೂ ಜೀವಂತವಾಗಿದೆ. ನಿಷೇಧದ ನಡುವೆಯೂ ನಡೆದಿರುವುದಕ್ಕೆ ದಂಡ ಹಾಕಿ ಕ್ರಮ ವಹಿಸಲಾಗುತ್ತಿದೆ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಸಫಾಯಿ ಕರ್ಮಚಾರಿಯ ಪಾದ ಪೂಜೆ ಮಾಡಿ ಇಡೀ ಸಮಾಜಕ್ಕೆ ಗೌರವ ಸಲ್ಲಿಸಿದ್ದಾರೆ. ಅಧಿಕಾರಿಗಳು ಪೌರಕಾರ್ಮಿಕರನ್ನು ಗೌರವದಿಂದ ಕಾಣಬೇಕು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದರು.

ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪೌರಕಾರ್ಮಿಕರ 81 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಮೇಯರ್ ಸುನಂದಾ ಫಾಲನೇತ್ರ ಮಾತನಾಡಿದರು. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್‌ ಸದಸ್ಯ ಸಿ.ಎನ್.ಮಂಜೇಗೌಡ, ನಿಗಮ–ಮಂಡಳಿಗಳ ಅಧ್ಯಕ್ಷರಾದ ಮಹದೇವಯ್ಯ, ಕಾ.ಪು.ಸಿದ್ದಲಿಂಗಸ್ವಾಮಿ, ಎಂ.ಶ್ರೀನಿವಾಸಗೌಡ, ಎಂ.ಶಿವಕುಮಾರ್, ರಘು ಕೌಟಿಲ್ಯ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ, ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.