ADVERTISEMENT

ಫೆ.22ರಿಂದ ಕಡಲೆ ಖರೀದಿಗೆ ಅನುಮತಿ

ಬೆಳೆಗಾರರ ಬೇಡಿಕೆಗೆ ಕೇಂದ್ರದ ಸ್ಪಂದನೆ: ಖರೀದಿ ಕೇಂದ್ರಗಳ ತೆರೆಯಲು ಸಿದ್ಧತೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 21:54 IST
Last Updated 14 ಫೆಬ್ರುವರಿ 2021, 21:54 IST

ಬಾಗಲಕೋಟೆ: ಕಡಲೆ ಬೆಳೆಗಾರರ ಸಂಕಷ್ಟಕ್ಕೆ ಕೊನೆಗೂ ಸ್ಪಂದಿಸಿರುವ ಕೇಂದ್ರ ಸರ್ಕಾರ ಅವರ ಬೇಡಿಕೆಯಂತೆ ಬೆಂಬಲ ಬೆಲೆಯಡಿ ಕಾಳು ಖರೀದಿಗೆ ಮುಂದಾಗಿದೆ. ಫೆಬ್ರುವರಿ 22ರಿಂದ ಖರೀದಿ ಆರಂಭಿಸುವಂತೆ ಆದೇಶ ಹೊರಡಿಸಿದೆ.

ಹಂಗಾಮು ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ಇನ್ನೂ ಕಡಲೆ ಖರೀದಿ ಆರಂಭವಾಗದ ಬಗ್ಗೆ ’ಪ್ರಜಾವಾಣಿ‘ ಫೆಬ್ರುವರಿ 13ರಂದು ವಿಶೇಷ ವರದಿ ಪ್ರಕಟಿಸಿತ್ತು. ಅದರ ಬೆನ್ನಿಗೆ ಸರ್ಕಾರದ ಆದೇಶ ಹೊರಬಿದ್ದಿದೆ.

ಕ್ವಿಂಟಲ್‌ಗೆ ₹ 5100ರಂತೆ ಬೆಂಬಲ ಬೆಲೆಯಲ್ಲಿ ಎಕರೆಗೆ ನಾಲ್ಕು ಕ್ವಿಂಟಲ್‌ನಂತೆ ಪ್ರತಿ ರೈತರಿಂದ ಕನಿಷ್ಠ 15 ಕ್ವಿಂಟಲ್‌ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ.

ADVERTISEMENT

ಫೆಬ್ರುವರಿ 15ರಿಂದ ಏಪ್ರಿಲ್ 30ರವರೆಗೆ ರೈತರಿಗೆ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ. ಮೇ 14ರವರೆಗೆ ಖರೀದಿಗೆ ಅನುಮತಿ ನೀಡಲಾಗಿದೆ.

ಜಿಲ್ಲೆಯಲ್ಲಿ ಎಷ್ಟು ಕಡೆ ಖರೀದಿ ಕೇಂದ್ರ ತೆರೆಯಬೇಕು ಎಂಬುದರ ಬಗ್ಗೆ ಖರೀದಿ ಸಂಸ್ಥೆಯಾದ ರಾಜ್ಯ ಕೃಷಿ ಸಹಕಾರ ಮಾರಾಟ ಮಹಾಮಂಡಳದ ಜಿಲ್ಲಾ ವ್ಯವಸ್ಥಾಪಕರಿಗೆ ಮಾಹಿತಿ ಕೇಳಿದ್ದೇವೆ. ನಂತರ ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸಭೆ ನಡೆಸಿ ಖರೀದಿ ಪ್ರಕ್ರಿಯೆಯನ್ನು ಅಧಿಕೃತವಾಗಿ ಆರಂಭಿಸಲಾಗುವುದು ಎಂದು ಎಪಿಎಂಸಿ ಸಹಾಯಕ ನಿರ್ದೇಶಕ ಎನ್.ಎ.ಲಕ್ಕುಂಡಿ ‘ಪ್ರಜಾವಾಣಿ‘ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.