ADVERTISEMENT

18 ತಿಂಗಳಲ್ಲಿ ಪಿಇಎಸ್ ಆಸ್ಪತ್ರೆ ನಿರ್ಮಾಣ ಪೂರ್ಣ :ಕುಲಪತಿ ದೊರೆಸ್ವಾಮಿ

150 ವಿದ್ಯಾರ್ಥಿಗಳ ಕಾಲೇಜು ಆರಂಭ

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 20:00 IST
Last Updated 14 ಜನವರಿ 2020, 20:00 IST

ಬೆಂಗಳೂರು: ‘ಪಿ.ಇ.ಎಸ್ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಸಿಟಿ ಕ್ಯಾಂಪಸ್‌ನಲ್ಲಿ 1,200 ಬೆಡ್ ಸೌಲಭ್ಯದ ಸುಸಜ್ಜಿತ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗುರುವಾರ (ಜ. 16) ಬೆಳಿಗ್ಗೆ 10ಕ್ಕೆ ಭೂಮಿಪೂಜೆ ಮಾಡಲಿದ್ದಾರೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಆರ್‌. ದೊರೆಸ್ವಾಮಿ ಹೇಳಿದರು.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘20 ಲಕ್ಷ ಚದರ ಅಡಿ ಜಾಗದಲ್ಲಿ ₹ 500 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. 18 ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸಿ ಹೊರರೋಗಿಗಳ ವಿಭಾಗ (ಒಪಿಡಿ) ಆರಂಭಿಸಲಾಗುವುದು. ಇದೊಂದು ಸುಸಜ್ಜಿತ ಆಧುನಿಕ ಸೌಲಭ್ಯವುಳ್ಳ ಆಸ್ಪತ್ರೆ ಆಗಲಿದೆ’ ಎಂದು ತಿಳಿಸಿದರು.

‘ಆಂಧ್ರಪ್ರದೇಶದ ಕುಪ್ಪಂನಲ್ಲಿ ಸುಸಜ್ಜಿತ ಆಸ್ಪತ್ರೆ ತೆರೆದು ಆಂಧ್ರ, ಕರ್ನಾಟಕ ಹಾಗೂ ತಮಿಳುನಾಡಿನ 700ರಿಂದ 800 ಹಳ್ಳಿಗಳ ಜನರಿಗೆ ಆರೋಗ್ಯ ಸೇವೆ ಸಿಗುವಂತೆ ಮಾಡಿದ್ದೇವೆ. ಇದೀಗ ಬೆಂಗಳೂರಿನಲ್ಲೂ ಆಸ್ಪತ್ರೆ ತೆರೆಯುವ ಕನಸು ನನಸಾಗುತ್ತಿದೆ. ಎಲೆಕ್ಟ್ರಾನಿಕ್ ಸಿಟಿ ಅಕ್ಕಪಕ್ಕದ ಗ್ರಾಮಗಳನ್ನು ದತ್ತು ಪಡೆದು, ಅಭಿವೃದ್ಧಿ ಜೊತೆಗೆ ಆರೋಗ್ಯ ಸೇವೆ ನೀಡಲಿದ್ದೇವೆ. ಅದಾದ ನಂತರವೇ 2020ರ ಶೈಕ್ಷಣಿಕ ವರ್ಷದಿಂದ ಕಾಲೇಜು ಸಹ ಆರಂಭಿಸಲಾಗುವುದು. 150 ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ಇದೆ’ ಎಂದು ಹೇಳಿದರು.

ADVERTISEMENT

1,015 ವಿದ್ಯಾರ್ಥಿಗಳಿಗೆ ಉದ್ಯೋಗ: ‘ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಬಿಬಿಎ ವಿದ್ಯಾರ್ಥಿ ಎಸ್‌. ಅಭಿಮಾನ್ ಪ್ರಥಮ ರ‍್ಯಾಂಕ್ ಪಡೆದಿದ್ದಾನೆ. ಆತನಿಗೆ ಲಂಡನ್‌ನ ಸ್ಕೂಲ್ ಆಫ್‌ ಎಕಾಮಿಕ್ಸ್‌ನಲ್ಲಿ ಸೀಟು ಸಿಕ್ಕಿದೆ. ಈ ವರ್ಷ ಕ್ಯಾಂಪಸ್‌ ಸಂದರ್ಶನದಲ್ಲಿ ವಿಶ್ವವಿದ್ಯಾಲಯದ ಅಂತಿಮ ವರ್ಷದ 1,015 ವಿದ್ಯಾರ್ಥಿಗಳು 93 ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ’ ಎಂದು ದೊರೆಸ್ವಾಮಿ ತಿಳಿಸಿದರು.

9 ಶಾಲೆಗಳ ನಿರ್ಮಾಣ: ‘ಪ್ರವಾಹಪೀಡಿತ ಉತ್ತರ ಕರ್ನಾಟಕದ ಬಾಗಲಕೋಟೆ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ 9 ಶಾಲೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಏಳು ಶಾಲೆಗಳ ಕಾಮಗಾರಿ ಮುಗಿದಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.