ADVERTISEMENT

ತೈಲ ಬೆಲೆ ಏರಿಕೆ: ಎತ್ತಿನಗಾಡಿಯಲ್ಲಿ ವಿಧಾನಸೌಧಕ್ಕೆ ತೆರಳುತ್ತೇವೆ- ಡಿಕೆಶಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 13:21 IST
Last Updated 12 ಸೆಪ್ಟೆಂಬರ್ 2021, 13:21 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಬೆಳಗಾವಿ: ‘ಬಿಜೆಪಿ ಸರ್ಕಾರವು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸಿಲಿಂಡರ್‌ ಬೆಲೆ ಏರಿಸುತ್ತಲೇ ಇದೆ. ಇದನ್ನು ಪ್ರತಿಭಟಿಸಿ, ನಾನು ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೆ.13ರಂದು ವಿಧಾನಮಂಡಲ ಅಧಿವೇಶನಕ್ಕೆಂದು ಎತ್ತಿನಗಾಡಿಯಲ್ಲಿ ವಿಧಾನಸೌಧಕ್ಕೆ ತೆರಳುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಲವು ವಿಷಯಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ’ ಎಂದರು.

‘ಕಾಂಗ್ರೆಸ್‌ನಿಂದ ಬರಲು ಬಿಜೆಪಿಯವರು ಹಣದ ಆಫರ್ ನೀಡಿದ್ದರು’ ಎಂದಿರುವ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ ಸತ್ಯವಾದ ಮಾತನ್ನೆ ಹೇಳಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಹಾಲಿ ಶಾಸಕ ಹಾಗೂ ಮಾಜಿ ಸಚಿವರಾಗಿರುವ ಅವರ ಮಾತನ್ನು ಗಂಭೀರವಾಗಿ ಪರಿಗಣಿಸಬೇಕು. ಎಸಿಬಿಯವರು ಕೂಡಲೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಹಣದ ಆಮಿಷ ಒಡ್ಡಿದವರು ಯಾರು ಎನ್ನುವುದನ್ನು ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಅ.2ರಿಂದ ಒಂದು ತಿಂಗಳವರೆಗೆ ಪ್ರತಿ ಗ್ರಾಮ ಪಂಚಾಯ್ತಿಗಳಲ್ಲೂ ಸಭೆ ನಡೆಸಿ, ಅಲ್ಲಿನ ಸಮಸ್ಯೆಗಳನ್ನು ಚರ್ಚಿಸಬೇಕು. ನೆರೆ ಪರಿಹಾರ ಸಿಕ್ಕಿದೆಯೇ, ಉದ್ಯೋಗ ಖಾತ್ರಿ ಹಣ ಬಂದಿದೆಯೇ ಎಂಬಿತ್ಯಾದಿ ವಿಷಯಗಳನ್ನು ಚರ್ಚಿಸಬೇಕು. ಪ್ರತಿ ವಾರ್ಡ್‌ಗಳಲ್ಲೂ ಪ್ರತಿಭಟನೆ ನಡೆಸಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಲಾಗಿದೆ. ನಾನೂ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ’ ಎಂದು ತಿಳಿಸಿದರು.

‘ಬಿಜೆಪಿಯವರು ಗುಜರಾತ್‌ನಲ್ಲೂ ಮುಖ್ಯಮಂತ್ರಿ ಬದಲಾವಣೆ ಮಾಡಿದ್ದಾರೆ. ಹಲವು ಕಡೆಗಳಲ್ಲಿ ಮುಖ್ಯಮಂತ್ರಿ ಬದಲಾಯಿಸಲಾಗಿದೆ. ಆಡಳಿತ ಸರಿ ಇಲ್ಲ; ಕೊರೊನಾ ಪರಿಸ್ಥಿತಿ ಸರಿಯಾಗಿ ನಿರ್ವಹಿಸಿಲ್ಲ ಎನ್ನುವುದು ಇದರಿಂದ ಸಾಬೀತಾಗಿದೆ. ದೇಶ ಹಾಗೂ ರಾಜ್ಯದಲ್ಲಿ ಆಡಳಿತ ಸರಿ ಇಲ್ಲ ಎನ್ನುವುದಕ್ಕೆ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡುತ್ತಿರುವುದೇ ಸಾಕ್ಷಿಯಾಗಿದೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲೂ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಾಯಿಸಿದರು. ಆಡಳಿತ ಸರಿ ಇದ್ದರೆ ಬದಲಾವಣೆ ಮಾಡಬೇಕಾದ ಅಗತ್ಯ ಏನಿತ್ತು? ಯಡಿಯೂರಪ್ಪ ಅವರು ಕಣ್ಣೀರು ಹಾಕಿ ಕೆಳಗಿಳಿದರು. ಅವರು ಸಂತೋಷದಿಂದ ಕಣ್ಣೀರು ಹಾಕಿದರಾ?’ ಎಂದು ಕೇಳಿದರು.

‘ವಿಧಾನಪರಿಷತ್‌ ವಾಯವ್ಯ ಪದವೀಧರ ಕ್ಷೇತ್ರ ಮತ್ತು ವಾಯವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ಗೆ ಅರ್ಜಿ ಆಹ್ವಾನಿಸಲಾಗುವುದು. ಆಕಾಂಕ್ಷಿಗಳು ಸೆ.25ರ ಒಳಗೆ ಅರ್ಜಿಗಳನ್ನು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು ಮತ್ತು ಕೆಪಿಸಿಸಿಗೆ ಸಲ್ಲಿಸಬೇಕು. ಅರ್ಜಿಯೊಂದಿಗೆ, ಪಕ್ಷದ ಕಟ್ಟಡ ನಿಧಿಗೆಂದು ₹ 1 ಲಕ್ಷ ಕೊಡುವುದು ಕಡ್ಡಾಯವಾಗಿದೆ. ಪ್ರಸ್ತುತ ₹ 10ಸಾವಿರ ಕೊಡುತ್ತಿದ್ದರು. ಅದನ್ನು ಹೆಚ್ಚಿಸಲಾಗಿದೆ. ಪಕ್ಷದ ಕಟ್ಟಡಗಳನ್ನು ನಿರ್ಮಿಸಲು ಹಣ ಬೇಕಲ್ಲವೇ?’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.