ADVERTISEMENT

ಪ್ರವಾಸೋದ್ಯಮ ನೀತಿ 10 ಲಕ್ಷ ಉದ್ಯೋಗ ಗುರಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 20:08 IST
Last Updated 27 ಸೆಪ್ಟೆಂಬರ್ 2020, 20:08 IST
ಬೇಲೂರು ಚನ್ನಕೇಶವ ದೇವಸ್ಥಾನ
ಬೇಲೂರು ಚನ್ನಕೇಶವ ದೇವಸ್ಥಾನ   

ಬೆಂಗಳೂರು: ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಪ್ರತ್ಯೇಕ ಲ್ಯಾಂಡ್‌ ಬ್ಯಾಂಕ್‌ ಸ್ಥಾಪಿಸುವುದು, ಹೂಡಿಕೆದಾರರಿಗೆ ಗುತ್ತಿಗೆ ಆಧಾರದಲ್ಲಿ ಜಮೀನು ನೀಡುವ ಮೂಲಕ ಐದು ವರ್ಷಗಳಲ್ಲಿ ಹತ್ತು ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಿರುವ ‘ಪ್ರವಾಸೋದ್ಯಮ ನೀತಿ– 2025’ ಭಾನುವಾರದಿಂದ ಜಾರಿಗೆ ಬಂದಿದೆ.

ವಿಧಾನಸೌಧದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೂತನ ನೀತಿಯ ವಿವರ ಬಿಡುಗಡೆ ಮಾಡಿದರು.

26 ವಿಧಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಹಾಗೂ ರಾಜ್ಯದ ಎಂಟು ಜಿಲ್ಲೆಗಳಲ್ಲಿ 70 ಪ್ರವಾಸಿ ತಾಣಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಈ ನೀತಿ ಹೊಂದಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಜಮೀನು ಒದಗಿಸುವುದು, ಬಂಡವಾಳ ಪ್ರೋತ್ಸಾಹ ಧನ, ವಿವಿಧ ಶುಲ್ಕಗಳ ರಿಯಾಯ್ತಿಗಳನ್ನು ನೀಡುವ ಘೋಷಣೆ ನೀತಿಯಲ್ಲಿದೆ.

ADVERTISEMENT

ಆಕರ್ಷಣೆ, ಸಂಪರ್ಕ, ಸೌಲಭ್ಯ, ವಾಸ್ತವ್ಯ ಮತ್ತು ಚಟುವಟಿಕೆ ಎಂಬ ಐದು ಅಂಶಗಳ ಆಧಾರದ ಮೇಲೆ ಈ ನೀತಿಯನ್ನು ರೂಪಿಸಲಾಗಿದೆ. ಐದು ವರ್ಷಗಳಲ್ಲಿ ₹ 500 ಕೋಟಿ ಸಹಾಯಧನ ನೀಡುವ ಮೂಲಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ₹ 5,000 ಕೋಟಿ ಹೂಡಿಕೆಯನ್ನು ಆಕರ್ಷಿಸುವ ಗುರಿ ಇದೆ.

ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸಿ.ಟಿ. ರವಿ, ‘ಈ ನೀತಿಯಲ್ಲಿಉದ್ಯೋಗ ಸೃಷ್ಟಿ, ಆರ್ಥಿಕ ಅಭಿವೃದ್ಧಿ, ಪ್ರವಾಸೋದ್ಯಮ ತಾಣಗಳಲ್ಲಿ ಸುರಕ್ಷತೆ, ನೈರ್ಮಲ್ಯಕ್ಕೆ ಆದ್ಯತೆ ನೀಡಲಾಗಿದೆ’ ಎಂದರು.

ಪ್ರವಾಸಿ ತಾಣಗಳಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ₹ 1 ಲಕ್ಷ ನೆರವು, ಪೂರಕ ಮೂಲಸೌಕರ್ಯ ಅಭಿವೃದ್ಧಿಗೆ ವರ್ಷಕ್ಕೆ ₹ 7.5 ಲಕ್ಷ ಅಥವಾ ಐದು ವರ್ಷಗಳಿಗೆ ₹ 25 ಲಕ್ಷ ನೆರವು ಒದಗಿಸುವ ಪ್ರಸ್ತಾವ ನೀತಿಯಲ್ಲಿದೆ. ಪ್ರವಾಸೋದ್ಯಮದಲ್ಲಿನ ಹೂಡಿಕೆದಾರರಿಗೂ ಇದೇ ಮೊತ್ತದ ಪ್ರೋತ್ಸಾಹಧನ ನೀಡುವ ಯೋಜನೆ ಪ್ರಕಟಿಸಲಾಗಿದೆ. ಮಹಿಳೆಯರಿಗೆ ಶೇ 5ರಷ್ಟು ಹೆಚ್ಚುವರಿ ಪ್ರೋತ್ಸಾಹಧನ ದೊರಕಲಿದೆ ಎಂದರು.

ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಹೂಡಿಕೆದಾರರಿಗೆ ಪ್ರೋತ್ಸಾಹಧನ ಮತ್ತು ರಿಯಾಯ್ತಿಗಳನ್ನು ನೀಡಲು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ಸಮಿತಿಗಳು ಅಸ್ತಿತ್ವಕ್ಕೆ ಬರಲಿವೆ ಎಂದು ರವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.