ADVERTISEMENT

ತ್ಯಾಜ್ಯ ನೀರು ಸಂಸ್ಕರಣೆಗೆ ಯೋಜನೆ: ಪರಿಶೀಲಿಸಿದ ಸಚಿವ ಯೋಗೇಶ್ವರ್‌

ವೃಷಭಾವತಿ ನದಿ ಪಾತ್ರಕ್ಕೆ ಭೇಟಿ ನೀಡಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 22:36 IST
Last Updated 8 ಜುಲೈ 2021, 22:36 IST
ಯೋಗೇಶ್ವರ್‌ ಅವರು ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಹಾದು ಹೋಗಿರುವ ವೃಷಭಾವತಿ ಕಾಲುವೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು- -– ಪ್ರಜಾವಾಣಿ ಚಿತ್ರ
ಯೋಗೇಶ್ವರ್‌ ಅವರು ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಹಾದು ಹೋಗಿರುವ ವೃಷಭಾವತಿ ಕಾಲುವೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು- -– ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವೃಷಭಾವತಿ ನದಿಯ ಕೊಳಚೆ ನೀರನ್ನು ಸಂಸ್ಕರಿಸಿ ಕೃಷಿ ಚಟುವಟಿಕೆಗಳಿಗೆ ಬಳಸಲು ಹಾಗೂ ಈ ನೀರನ್ನು ಕೆರೆಗಳಿಗೆ ತುಂಬಿಸುವ ಸಲುವಾಗಿ ₹1,500 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಮೂರನೇ ಹಂತದ ಈ ಯೋಜನೆ ಮುಂದಿನ 5 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ಪರಿಸರ ಹಾಗೂ ಜೀವಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ್‌ ತಿಳಿಸಿದರು.

ನದಿ ಪಾತ್ರಕ್ಕೆ ಗುರುವಾರ ಭೇಟಿ ನೀಡಿದ ಅವರು ಬೆಂಗಳೂರು ಜಲ ಮಂಡಳಿ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.

‘ವೃಷಭಾವತಿ ಕಣಿವೆ ವ್ಯಾಪ್ತಿಯಲ್ಲಿ 1,500 ಎಂ.ಎಲ್‌.ಡಿ.ತ್ಯಾಜ್ಯ ನೀರು ಹರಿಯುತ್ತಿದೆ. ಇದನ್ನು ಮೂರು ಹಂತಗಳಲ್ಲಿ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ ಕೆರೆಗಳನ್ನು ತುಂಬಿಸುವುದು ಹಾಗೂ ಕೃಷಿ ಚಟುವಟಿಕೆಗಳಿಗೆ ಬಳಸಬೇಕೆಂಬುದು ನಮ್ಮ ಉದ್ದೇಶ. ಒಂದು ಎಂ.ಎಲ್‌.ಡಿ.ತ್ಯಾಜ್ಯ ನೀರನ್ನು ಸಂಸ್ಕರಿಸಲು ₹1 ಕೋಟಿ ವೆಚ್ಚವಾಗುತ್ತದೆ’ ಎಂದರು.

ADVERTISEMENT

‘ಬೆಂಗಳೂರಿನ ಶೇ 40ರಷ್ಟು ತ್ಯಾಜ್ಯ ನೀರು ವೃಷಭಾವತಿ ಕಾಲುವೆ ಮೂಲಕ ಬಿಡದಿಯ ಬೈರಮಂಗಲ ಕೆರೆಗೆ ಸೇರುತ್ತಿದೆ. ಸದ್ಯಕ್ಕೆ ನಾಯಂಡಹಳ್ಳಿ ಹಾಗೂ ಮೈಲಸಂದ್ರದಲ್ಲಿ ತ್ಯಾಜ್ಯ ನೀರು ಸಂಸ್ಕರಿಸಲಾಗುತ್ತಿದೆ. ಇದನ್ನು ಕೃಷಿ ಸೇರಿ ಯಾವ ಚಟುವಟಿಕೆಗಳಿಗೂ ಬಳಸಲು ಸಾಧ್ಯವಿಲ್ಲ. ಸಂಸ್ಕರಿಸಿದ ನೀರನ್ನು ಚರಂಡಿಗಳಿಗೇ ಹರಿಸಲಾಗುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪಿಸುವ ಯೋಜನೆಗೆ ಸಿಂಡಿಕೇಟ್‌ ಸದಸ್ಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಯೋಜನೆಯ ಮಹತ್ವವನ್ನು ಅವರಿಗೆ ವಿವರಿಸಲಾಗುತ್ತದೆ’ ಎಂದು ತಿಳಿಸಿದರು.

‘ಬೈರಮಂಗಲ ಕೆರೆ ಏತ ನೀರಾವರಿ ಯೋಜನೆಗಾಗಿ ₹250 ಕೋಟಿ ಅನುದಾನ ಒದಗಿಸಲಾಗಿದೆ. ಈ ಸಂಬಂಧ ಈಗಾಗಲೇ ಟೆಂಡರ್‌ ಕೂಡ ಕರೆಯಲಾಗಿದೆ. ಮಳೆ ನೀರು ಹಾಗೂ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಬೇರ್ಪಡಿಸಿ ಸುತ್ತಲಿನ 142 ಕೆರೆಗಳಿಗೆ ಅದನ್ನು ಹರಿಸಲಾಗುತ್ತದೆ. ಈ ಕುರಿತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಜೊತೆಯೂ ಮಾತನಾಡಿದ್ದೇನೆ. ವೃಷಭಾವತಿ ನದಿಯ ಮೂಲದಿಂದ ಹಿಡಿದು ಅದು ಅರ್ಕಾವತಿ ನದಿ ಸೇರುವವರೆಗಿನ ಪ್ರದೇಶದ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಹೈಕೋರ್ಟ್‌ ನಿರ್ದೇಶಿಸಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸಮೀಕ್ಷೆ ಆರಂಭಿಸಿದ್ದಾರೆ’ ಎಂದು ಹೇಳಿದರು.

‘1,476 ಕಾರ್ಖಾನೆಗಳ ಮೇಲೆ ಕ್ರಮ’
‘ವೃಷಭಾವತಿ ನದಿ ಪ್ರದೇಶದಲ್ಲಿ ಒಟ್ಟು 3,304 ಕೈಗಾರಿಕೆಗಳಿವೆ. ಈ ಪೈಕಿ 1,396 ಕೈಗಾರಿಕೆಗಳು ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಉಲ್ಲಂಘಿಸಿ ನೇರವಾಗಿ ನದಿಗೆ ತ್ಯಾಜ್ಯ ನೀರು ಹರಿಸುತ್ತಿವೆ. ಒಟ್ಟು 1,476 ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. 77 ಕಾರ್ಖಾನೆಗಳ ಮೇಲೆ ಕ್ರಿಮಿನಲ್‍ ಮೊಕದ್ದಮೆ ದಾಖಲಾಗಿಸಲಾಗಿದ್ದು, 275 ಕಾರ್ಖಾನೆಗಳನ್ನು ಮುಚ್ಚಿಸಲಾಗಿದೆ’ ಎಂದು ಯೋಗೇಶ್ವರ್‌ ಮಾಹಿತಿ ನೀಡಿದರು.

ನಿಯಮ ಉಲ್ಲಂಘಿಸುವ ಕಾರ್ಖಾನೆಗಳ ಜೊತೆಗೆ ಅದಕ್ಕೆ ಸಹಕಾರ ನೀಡುವ ಅಧಿಕಾರಿಗಳ ವಿರುದ್ಧವೂ ದೂರು ದಾಖಲಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.