ADVERTISEMENT

ತಾಳೆ ಎಣ್ಣೆ ಆಮದಿಗೆ ಚಿಂತನೆ: ಕತ್ತಿ

ಯುದ್ಧದಿಂದ ಬೆಲೆ ಏರಿಕೆಯಾಗಿಲ್ಲ ಎಂದ ಸಚಿವರು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2022, 20:44 IST
Last Updated 28 ಮಾರ್ಚ್ 2022, 20:44 IST
   

ಬೆಂಗಳೂರು: ‘ರಷ್ಯಾ– ಉಕ್ರೇನ್‌ ಯುದ್ಧವು ಬೆಲೆ ಏರಿಕೆಗೆ ಕಾರಣವಲ್ಲ. ಬೇಸಿಗೆ ಕಾಲದಲ್ಲಿ ಬೆಲೆ ಏರಿಕೆ ಸಹಜ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ವ್ಯತ್ಯಾಸಗಳಿಂದ ಪರಿಣಾಮ ಬೀರಿದೆ. ಹೀಗಾಗಿ, ನಾವು ನಿಯಂತ್ರಿಸಲು ಸಾಧ್ಯವಿಲ್ಲ’ ಎಂದು ಆಹಾರ ಸಚಿವ ಉಮೇಶ ವಿ. ಕತ್ತಿ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಸೋಮ ವಾರ ಕಾಂಗ್ರೆಸ್‌ನ ಎಸ್‌. ರವಿ ಅವರು ದಿನಬಳಕೆ ವಸ್ತುಗಳ ಬೆಲೆ ಏರಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಸದ್ಯ 4 ಲಕ್ಷ ಟನ್‌ ಖಾದ್ಯ ತೈಲ ಸಂಗ್ರಹ ಇದೆ. ತಾಳೆ ಎಣ್ಣೆ ಆಮದು ಮಾಡಿಕೊಳ್ಳುವ ಬಗ್ಗೆ ಪರಿಶೀಲಿಸಲಾಗುತ್ತಿದೆ’ ಎಂದರು.

‘ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಕಡಿತಗೊಳಿಸುವ ಬಗ್ಗೆ ಮುಖ್ಯಮಂತ್ರಿ ಅವರನ್ನು ಕೇಳಬೇಕು. ಕಾಳಸಂತೆಯಲ್ಲಿ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು. ಹೆಚ್ಚಿನ ಬೆಲೆಗೆ ವಿವಿಧ ಅಗತ್ಯ ವಸ್ತುಗಳನ್ನು ಮಾರಾಟ ಮಾಡಿದವರ ವಿರುದ್ಧ 75 ಮೊಕದ್ದಮೆಗಳನ್ನು ದಾಖಲಿಸಲಾಗಿದೆ. 29 ಮೊಕದ್ದಮೆಗಳಲ್ಲಿ ₹2.96 ಲಕ್ಷ ದಂಡ ವಸೂಲಿ ಮಾಡಲಾಗಿದೆ’ ಎಂದರು.

ADVERTISEMENT

8 ಲಕ್ಷ ಬಿಪಿಎಲ್ ಕಾರ್ಡ್: ‘ರಾಜ್ಯದಲ್ಲಿ 8 ಲಕ್ಷ ಬಿಪಿಎಲ್ ಕಾರ್ಡ್‌ಗಳ ವಿತರಣೆ ಬಾಕಿ ಇದೆ. ಜೂನ್ ಅಂತ್ಯದ ಒಳಗೆ ಸಮೀಕ್ಷೆ ಪೂರ್ಣಗೊಳಿಸಿ ಪಡಿತರ ಚೀಟಿ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಸಚಿವ ಕತ್ತಿ ಹೇಳಿದರು.

ಕಾಂಗ್ರೆಸ್ ಸದಸ್ಯ ಯು.ಬಿ ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಕಳೆದ ಮೂರು ವರ್ಷಗಳಲ್ಲಿ ಬಿಪಿಎಲ್‌ ಕಾರ್ಡ್‌ ಕೋರಿ 15.53 ಲಕ್ಷ ಅರ್ಜಿಗಳನ್ನು ಸಲ್ಲಿಸಲಾಗಿದೆ. ಇದರಲ್ಲಿ 8.03 ಲಕ್ಷ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಕೋವಿಡ್ ಕಾರಣಕ್ಕೆ ಕಾರ್ಡ್‌ಗಳ ವಿತರಣೆ ವಿಳಂಬವಾಗಿದೆ. 8 ಲಕ್ಷ ಅರ್ಜಿಯಲ್ಲಿ 4 ಲಕ್ಷ ಅರ್ಜಿಗಳು ಸಮೀಕ್ಷೆಯಾಗಿ ವಿತರಣೆ ಬಾಕಿ ಇದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.