ADVERTISEMENT

ನಿರೀಕ್ಷೆ ಹುಸಿಗೊಳಿಸಿದ ಪ್ಲಾಸ್ಮಾ ಚಿಕಿತ್ಸೆ

ಚಿಕಿತ್ಸೆಗೆ ಒಳಗಾಗಿದ್ದ 60 ವರ್ಷದ ವ್ಯಕ್ತಿ ಹೃದಯಾಘಾತದಿಂದ ಸಾವು

​ಪ್ರಜಾವಾಣಿ ವಾರ್ತೆ
Published 14 ಮೇ 2020, 19:52 IST
Last Updated 14 ಮೇ 2020, 19:52 IST
ಪ್ಲಾಸ್ಮಾ ಪೊಟ್ಟೊಣ
ಪ್ಲಾಸ್ಮಾ ಪೊಟ್ಟೊಣ   

ಬೆಂಗಳೂರು: ರಾಜ್ಯದಲ್ಲಿ ನಡೆಸಿದ ಪ್ರಥಮ ಪ್ರಾಯೋಗಿಕ ಪ್ಲಾಸ್ಮಾ ಚಿಕಿತ್ಸೆ ವೈದ್ಯರ ನಿರೀಕ್ಷೆಯನ್ನು ಹುಸಿಗೊಳಿಸಿದೆ. ವೆಂಟಿಲೇಟರ್‌ ನೆರವಿನೊಂದಿಗೆ ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದ 60 ವರ್ಷದ ವ್ಯಕ್ತಿಯನ್ನು ಉಳಿಸಿಕೊಳ್ಳಲು ವೈದ್ಯರು ನಡೆಸಿದ ಕಡೆಯ ಪ್ರಯತ್ನವೂ ಫಲ ನೀಡಲಿಲ್ಲ.

ಕೆಲ ದಿನಗಳ ಹಿಂದಷ್ಟೇ ರಾಜ್ಯದಲ್ಲಿ ಪ್ರಾಯೋಗಿಕವಾಗಿ ಪ್ಲಾಸ್ಮಾ ಚಿಕಿತ್ಸೆ ಮಾಡಲುಡ್ರಗ್‌ ಕಂಟ್ರೋಲರ್ ಜನರಲ್ ಆಫ್‌ ಇಂಡಿಯಾ (ಡಿಸಿಜಿಐ) ಅನುಮತಿ ನೀಡಿತ್ತು.ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಮತ್ತು ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದರೂ ರೋಗಿಗಳು ದೊರೆತಿರಲಿಲ್ಲ.

ಆಂಧ್ರಪ್ರದೇಶದ ಅನಂತಪುರದ 60 ವರ್ಷದ ವ್ಯಕ್ತಿಯನ್ನು ಚಿಕಿತ್ಸೆಯಿಂದ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನಿರ್ಧರಿಸಿದ ವಿಕ್ಟೋರಿಯಾ ವೈದ್ಯರು,ಕ್ಯಾನ್ಸರ್ ತಜ್ಞ ಡಾ.ಯು.ಎಸ್.ವಿಶಾಲ್ ರಾವ್ ನೇತೃತ್ವದ ವೈದ್ಯರ ತಂಡಕ್ಕೆ ಮೇ 11ರಂದು ಪ್ಲಾಸ್ಮಾ ಚಿಕಿತ್ಸೆ ಮಾಡಲು ಸೂಚಿಸಿದ್ದರು.

ADVERTISEMENT

ರೋಗಿಯು ತೀವ್ರ ಉಸಿರಾಟದ ತೊಂದರೆ, ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದುದರಿಂದತೀವ್ರ ನಿಗಾ ಘಟಕದಲ್ಲಿರಿಸಿ, ವೆಂಟಿಲೇಟರ್ ಅಳವಡಿಸಲಾಗಿತ್ತು. ವಿಕ್ಟೋರಿಯಾ ವೈದ್ಯರು ಕೈಚೆಲ್ಲಿದ ಪರಿಣಾಮ ರೋಗಿಯ ಕುಟುಂಬ ಸದಸ್ಯರು ಕೂಡ ಚಿಕಿತ್ಸೆ ಮಾಡುವಂತೆ ಕೋರಿದ್ದರು.ಕೇವಲ ಒಂದು ಗಂಟೆಯಲ್ಲಿ ಪ್ಲಾಸ್ಮಾ ಚಿಕಿತ್ಸೆ ಮಾಡ ಲಾಗಿತ್ತು. ಇದಾದ ಎರಡು ದಿನಗಳ ಬಳಿಕ ರೋಗಿಯ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿತ್ತು. ಆದರೆ, ಗುರುವಾರ ಮತ್ತೆ ಆರೋಗ್ಯದ ಸ್ಥಿತಿ ಹದಗೆಟ್ಟು, ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ. ವೃದ್ಧರ ಪತ್ನಿ ಕೂಡ ಸೋಂಕಿನಿಂದ ಬಳಲುತ್ತಿದ್ದಾರೆ.

6 ಮಂದಿ ದಾನ: ‘ವೆಂಟಿಲೇಟರ್‌ ಸಹಾಯದಿಂದ ಉಸಿರಾಡು ತ್ತಿರುವವರನ್ನು ಸಾಮಾನ್ಯ ಚಿಕಿತ್ಸೆಯ ಮೂಲಕ ಉಳಿಸಿಕೊಳ್ಳುವುದು ಕಷ್ಟ. ಅಂತಹವರಿಗೆ ಪ್ಲಾಸ್ಮಾ ಥೆರಪಿ ನೀಡು ತ್ತೇವೆ’ ಎಂದು ಡಾ. ವಿಶಾಲ್ ರಾವ್ ತಿಳಿಸಿದರು.

‘ಥೆರಪಿಗೆ ವೃದ್ಧರು ಸ್ಪಂದಿಸಿದ ಪರಿಣಾಮ ನಾಲ್ಕು ಅಥವಾ ಐದನೇ ದಿನ ಅವರ ಆರೋಗ್ಯದಲ್ಲಿ ಚೇತರಿಕೆ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ, ಅವರು ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಈವರೆಗೆ 6 ಮಂದಿ ತಮ್ಮ ಪ್ಲಾಸ್ಮಾ ದಾನ ಮಾಡಿದ್ದಾರೆ. ಅಗತ್ಯ ಇರುವವರಿಗೆ ಥೆರಪಿ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.