ನಿತಿನ್ ಗಡ್ಕರಿ ಅವರಿಗೆ ಶಿವಕುಮಾರ್ ಹೂಗುಚ್ಛ ನೀಡಿದರು
ನವದೆಹಲಿ: ಬೆಂಗಳೂರು- ಕನಕಪುರ ನಡುವಣ ರಸ್ತೆ ಆರು ಪಥಕ್ಕೆ ಉನ್ನತೀಕರಣ, ನನೆಗುದಿಗೆ ಬಿದ್ದಿರುವ ಕಗ್ಗಲಿಪುರ ಟೋಲ್ ವರೆಗಿನ ರಸ್ತೆ ಕಾಮಗಾರಿ, ಉಪನಗರ ವರ್ತುಲ ರಸ್ತೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಶೀಘ್ರ ಪರಿಹಾರ ಬಿಡುಗಡೆ, ಹೆಬ್ಬಾಳ ಜಂಕ್ಷನ್‌ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತ್ಯೇಕ ಮೇಲ್ಸೇತುವೆ ನಿರ್ಮಾಣ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯ ನೆರವು ಹಾಗೂ ಸಹಕಾರ ನೀಡುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಅಭಿವೃದ್ಧಿ ಸಚಿವ ನಿತಿನ್ ಗಡ್ಕರಿ ಅವರನ್ನು ನವದೆಹಲಿಯಲ್ಲಿ
ಬುಧವಾರ ಭೇಟಿ ಮಾಡಿ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ನೆರವು ನೀಡುವಂತೆ ಮನವಿ ಸಲ್ಲಿಸಿದರು.
ಹೆದ್ದಾರಿ 209ರ ಉನ್ನತೀಕರಣ: ಹಾಲಿ ನಾಲ್ಕು ಪಥ ಇರುವ ಹೆದ್ದಾರಿ 209 (ಬೆಂಗಳೂರು-ಕನಕಪುರ) ಅನ್ನು ಎರಡೂ ಬದಿಯಲ್ಲಿ ಸರ್ವಿಸ್ ರಸ್ತೆ ಜತೆಗೆ ಆರು ಪಥಗಳಿಗೆ ಉನ್ನತೀಕರಣಗೊಳಿಸಬೇಕು. ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಸೇರಿದಂತೆ ಈ ಪ್ರದೇಶದ ಅಭಿವೃದ್ಧಿಯಿಂದ ಈ ಹೆದ್ದಾರಿಯಲ್ಲಿ ವಾಹನ ಸಂಚಾರ ಗಣನೀಯ ಏರಿಕೆ ಕಂಡಿದೆ. ಈ ಭಾಗದಲ್ಲಿ ಸಂಚಾರ ಸುಗಮಗೊಳಿಸಲು, ಸಂಚಾರಿ ಸುರಕ್ಷತೆ, ಕೈಗಾರಿಕಾ ಪ್ರದೇಶದ ವಾಹನಗಳ ಸುಗಮ ಸಂಚಾರಕ್ಕೆ ಈ ಯೋಜನೆ ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಕಗ್ಗಲಿಪುರ ಟೋಲ್ ರಸ್ತೆ ಕಾಮಗಾರಿ ಪೂರ್ಣಕ್ಕೆ ಆಗ್ರಹ: ರಾಷ್ಟ್ರೀಯ ಹೆದ್ದಾರಿ 209ರಲ್ಲಿ ರವಿಶಂಕರ ಗುರೂಜಿ ಆಶ್ರಮದಿಂದ ಕಗ್ಗಲಿಪುರ ಟೋಲ್ ವರೆಗಿನ 7 ಕಿ.ಮೀ ಉದ್ದದ ರಸ್ತೆ ಕಾಮಗಾರಿ ಬಹುದಿನಗಳಿಂದ ನನೆಗುದಿಗೆ ಬಿದ್ದಿದೆ. ಈ ಯೋಜನೆಗೆ ಅಗತ್ಯ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲಾಗಿದ್ದು, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆಕ್ಷೇಪದಿಂದ ಈ ಯೋಜನೆ ಕಾಮಗಾರಿ ನಿಂತಿದೆ.
ಈ ಹೆದ್ದಾರಿಯಲ್ಲಿ ಈ ಭಾಗದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಹಾರೋಹಳ್ಳಿ ಕೈಗಾರಿಕಾ ಪ್ರದೇಶದಿಂದ ವಾಹನ ಸಂಚಾರ ಹೆಚ್ಚಾಗಿದ್ದು, ಈ ಭಾಗದಲ್ಲಿ ಸುಗಮ ಸಂಚಾರಕ್ಕೆ ಈ ಕಾಮಗಾರಿ ಪೂರ್ಣಗೊಳಿಸುವುದು ಅಗತ್ಯವಾಗಿದೆ. ಈ ಕಾಮಗಾರಿಗೆ ಎದುರಾಗಿರುವ ಅಡಚಣೆ ನಿವಾರಿಸಿ, ಆದಷ್ಟು ಬೇಗ ಯೋಜನೆ ಪೂರ್ಣಗೊಳಿಸಲು ಸಚಿವಾಲಯವು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಪರಿಹಾರ ನಿಧಿ ಬಿಡುಗಡೆ: ಉಪನಗರ ವರ್ತುಲ ರಸ್ತೆ ಯೋಜನೆಯು ದಾಬಸ್ ಪೇಟೆ, ಮಾಗಡಿ, ರಾಮನಗರ, ಹಾರೋಹಳ್ಳಿ ನಡುವೆ ಸಂಪರ್ಕ ವೃದ್ಧಿಸಲು ಹಾಗೂ ಮೂಲಸೌಕರ್ಯ ಒದಗಿಸಲು ಮಹತ್ವದ್ದಾಗಿದೆ. ಈ ಯೋಜನೆಗೆ ಭೂಮಿ ಕಳೆದುಕೊಂಡಿರುವ ರೈತರಿಗೆ ಶೀಘ್ರವೇ ಪರಿಹಾರ ಮೊತ್ತ ಬಿಡುಗಡೆ ಮಾಡಬೇಕು. ಈ ಯೋಜನೆ 2019ರಲ್ಲಿ ಆರಂಭವಾಯಿತಾದರೂ ಪರಿಹಾರ ಬಿಡುಗಡೆ ತಡವಾಗಿರುವ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಯೋಜನೆ ಪ್ರಗತಿ ಕುಂಠಿತವಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಹೆಬ್ಬಾಳದಿಂದ ವಿಮಾನ ನಿಲ್ದಾಣಕ್ಕೆ ಪ್ರತ್ಯೇಕ ಮೇಲ್ಸೇತುವೆ
ಹೆಬ್ಬಾಳ ಜಂಕ್ಷನ್‌ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಣ 35 ಕಿ.ಮೀ ಉದ್ದದ ಪ್ರದೇಶದಲ್ಲಿ ಅಪಾರ ಅಭಿವೃದ್ಧಿಆಗಿದ್ದು ಅನೇಕ ಕೈಗಾರಿಕೆ ಹಾಗೂ ವಾಣಿಜ್ಯ ಸಂಕೀರ್ಣಗಳು ಸ್ಥಾಪನೆಯಾಗಿವೆ. ಹೀಗಾಗಿ ಈ ಭಾಗದಲ್ಲಿ ಸಂಚಾರ ದಟ್ಟಣೆ ತೀವ್ರವಾಗಿದೆ. ಈಗಿರುವ ಎಲಿವೆಟೆಡ್ ಕಾರಿಡಾರ್ ನಡುವೆ ಟ್ರಾಫಿಕ್ ಸಿಗ್ನಲ್ ಪಾದಚಾರಿಗಳ ರಸ್ತೆ ದಾಟುವಿಕೆಯಿಂದ ಇಲ್ಲಿನ ಪ್ರಯಾಣಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಹೆಬ್ಬಾಳ ಜಂಕ್ಷನ್‌ನಿಂದ ವಿಮಾನ ನಿಲ್ದಾಣಕ್ಕೆ ಪ್ರತ್ಯೇಕ ಮೇಲ್ಸೇತುವೆ ನಿರ್ಮಾಣ ಮಾಡಬೇಕು. ಇದರಿಂದ ವಿಮಾನ ನಿಲ್ದಾಣ ಪ್ರಯಾಣಿಕರು ಸ್ಥಳೀಯ ವಾಹನಗಳು ಕೈಗಾರಿಕಾ ವಲಯದ ದೊಡ್ಡ ವಾಹನಗಳ ಸಂಚಾರ ಸುಗಮವಾಗಲಿದೆ ಎಂದು ಮನವಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.