ADVERTISEMENT

‘ಕಾಗೇರಿಯವರೇ, ಒಂದು ಪೀಸ್‌ ತಿಂದು ನೋಡಿ...’

ಕುರಿ ಮಾಂಸದ ಬಗ್ಗೆ ಸ್ವಾರಸ್ಯಕರ ಚರ್ಚೆ ಗೆ ನಾಂದಿ ಹಾಡಿದ ರಮೇಶ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 20:15 IST
Last Updated 2 ಫೆಬ್ರುವರಿ 2021, 20:15 IST

ಬೆಂಗಳೂರು:‘ನೀವು (ಕುರಿ ಮಾಂಸ) ಒಂದು ಪೀಸ್‌ ತಿನ್ನಿ ಅದರ ರುಚಿ ಗೊತ್ತಾಗುತ್ತದೆ’.

–ಹೀಗೆಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕಿಚಾಯಿಸುವಂತೆ ಸಲಹೆ ನೀಡಿದ್ದು, ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ಕುಮಾರ್‌.

ಬಿಜೆಪಿಯ ಪೂರ್ಣಿಮಾ ಅವರು ಗಮನಸೆಳೆಯುವ ಸೂಚನೆಯಡಿ ಪ್ರಸ್ತಾಪಿಸಿದ ವಿಷಯ ಕುರಿತು ಮಾತನಾಡಿದ ರಮೇಶ್‌ಕುಮಾರ್‌ ಅವರು ಕುರಿ ಸಾಕಣೆದಾರರ ಸಮಸ್ಯೆಗಳನ್ನು ಮನ ಮುಟ್ಟುವಂತೆ ವಿವರಿಸುತ್ತಿದ್ದರು.

ADVERTISEMENT

ಆಗ ಕಾಗೇರಿಯವರು ಹಾಸ್ಯವಾಗಿ, ‘ನೀವು ಆ ಕಡೆ ಹೇಗೆ(ಕುರಿ ಸಾಕಣೆ) ಹೋದಿರಿ’ ಎಂದು ಪ್ರಶ್ನಿಸಿದರು. ‘ನೀವು ಸಂಘದ ಕಡೆ ಹೋದ್ರಿ, ನಾ ಆ ಕಡೆ ಹೋದೆ’ ಎಂದರು ರಮೇಶ್‌ಕುಮಾರ್‌.

‘ಸಿದ್ದರಾಮಯ್ಯ ಏನಾದ್ರೂ ಪ್ರಭಾವ ಬೀರಿರಬಹುದೇ’ ಎಂದು ಕಾಗೇರಿ ಮರು ಪ್ರಶ್ನೆ ಹಾಕಿದರು. ‘ಹಾಗೇನೂ ಇಲ್ಲ. ಆದರೆ, ನಮ್ಮನ್ನೆಲ್ಲ ಕಾಯಲು ಸಿದ್ದರಾಮಯ್ಯ ಅವರನ್ನು ನಾಯಕರನ್ನಾಗಿ ಮಾಡಿದ್ದೇವೆ’ ಎಂದು ರಮೇಶ್‌ಕುಮಾರ್‌ ಹೇಳಿದರು.

‘ನಾನು ಕುರಿ ಸಾಕುತ್ತಿದ್ದೇನೆ. ಅದರ ಸಮಸ್ಯೆಗಳು ಗೊತ್ತಿದೆ. ಕುರಿಯನ್ನು ಸಾಕಿ ಮಾರಲು ಹೋದರೆ ಮಧ್ಯವರ್ತಿಗಳು ಸೇರಿ ಕಡಿಮೆ ಬೆಲೆಗೆ ಕೊಳ್ಳುತ್ತಾರೆ. ಬಿ.ಎ, ಬಿಕಾಂ ಆದವರೂ ಕುರಿ ಸಾಕಣೆ ಮಾಡುತ್ತಿದ್ದಾರೆ’ ಎಂದು ಅವರು ತಿಳಿಸಿದರು.

‘ನೀವು ಕುರಿ ತಿನ್ನುವವರೂ ಅಲ್ಲ, ಕುರಿ ಕಾಯುವವರೂ ಅಲ್ಲ. ನಿಮಗೆ ಇಷ್ಟೊಂದು ಕುತೂಹಲವೇಕೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರು ಕಾಗೇರಿಯವರ ಕಾಲೆಳೆದರು.

‘ಗೋಹತ್ಯೆ ನಿಷೇಧವಾದ ನಂತರ ಕುರಿ, ಆಡುಗಳಿಗೆ ಬೆಲೆ ಹೆಚ್ಚಾಗಿದೆ. ಈ ಹಂತದಲ್ಲಿ ಆಕಸ್ಮಿಕವಾಗಿ ಕುರಿ, ಮೇಕೆಗಳು ಸತ್ತರೆ ಸೂಕ್ತ ಪರಿಹಾರ ನೀಡಬೇಕು. ಪರಿಹಾರ ನೀಡುವ ಯೋಜನೆ ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ವಾಸ್ತವ ಸಂಗತಿ ಏನು’ ಎಂದು ಜೆಡಿಎಸ್‌ನ ಶಿವಲಿಂಗೇಗೌಡ ಅವರು ಪ್ರಶ್ನಿಸಿದರು.

ಬಿಜೆಪಿಯ ಪೂರ್ಣಿಮಾ ಮಾತನಾಡಿ, ‘ಕುರಿಗಳು ಮತ್ತು ಮೇಕೆಗಳು ಆಕಸ್ಮಿಕವಾಗಿ ಸತ್ತರೆ ಕುರಿಗಾಹಿಗಳಿಗೆ ಅನುಗ್ರಹ ಯೋಜನೆಯಡಿ ಪರಿಹಾರ ನೀಡಬೇಕು. ಈಗ ಪರಿಹಾರ ನೀಡುತ್ತಿಲ್ಲ. ಇದಕ್ಕೆ ಕೋವಿಡ್‌ ಆರ್ಥಿಕ ಸಂಕಷ್ಟ ಎಂದು ಹೇಳಲಾಗುತ್ತಿದೆ. ಪರಿಹಾರ ಕೊಡಲು ಮುಖ್ಯಮಂತ್ರಿಯವರು ಒಪ್ಪಿದ್ದಾರೆ. ಅಧಿಕಾರಿಗಳು ನೀಡುತ್ತಿಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್, ಈ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.