ADVERTISEMENT

ಪಿಎಂ ಕೇರ್ಸ್‌ ನಿಧಿಯಲ್ಲಿ ರಾಜ್ಯಕ್ಕೆ 1,200 ವೆಂಟಿಲೇಟರ್‌

ಬಿಇಎಲ್‌ನಿಂದ 30 ಸಾವಿರ ಉತ್ಪಾದನೆ * ಸ್ಕ್ಯಾನ್‌ರೇಯಿಂದ ವಿನ್ಯಾಸ, ತಂತ್ರಜ್ಞಾನ, ತರಬೇತಿ

ರಾಜೇಶ್ ರೈ ಚಟ್ಲ
Published 25 ಜೂನ್ 2020, 2:51 IST
Last Updated 25 ಜೂನ್ 2020, 2:51 IST
ವೆಂಟಿಲೇಟರ್ (ಸಾಂದರ್ಭಿಕ ಚಿತ್ರ)
ವೆಂಟಿಲೇಟರ್ (ಸಾಂದರ್ಭಿಕ ಚಿತ್ರ)   
""

ಬೆಂಗಳೂರು: ‘ಪ್ರಧಾನ ಮಂತ್ರಿ ಕೇರ್ಸ್‌ ನಿಧಿ’ಯಲ್ಲಿ ಮೈಸೂರಿನ ಸ್ಕ್ಯಾನ್‌ರೇಟೆಕ್ನಾಲಜಿ ಕಂಪನಿ ಪರವಾನಗಿಯಲ್ಲಿ ಸರ್ಕಾರಿ ಸ್ವಾಮ್ಯದ ಬಿಇಎಲ್‌ (ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್) 30 ಸಾವಿರ ವೆಂಟಿಲೇಟರ್ ತಯಾರಿಸುತ್ತಿದ್ದು, ಇದರಲ್ಲಿ ಕರ್ನಾಟಕಕ್ಕೆ1,200 ವೆಂಟಿಲೇಟರ್‌ಗಳು ಲಭ್ಯವಾಗಲಿವೆ.

ವಿವಿಧ ರಾಜ್ಯಗಳಿಗೆ ವೆಂಟಿಲೇಟರ್‌ ಪೂರೈಸಲು ಪಿ.ಎಂ ಕೇರ್ಸ್‌ ನಿಧಿಯಲ್ಲಿ ₹ 2,000 ಕೋಟಿ ಮೀಸಲಿರಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಬಳಸುವ ಸುಧಾರಿತ ‘ಸಿವಿ200’ ಮಾದರಿಯ ವೆಂಟಿಲೇಟರ್‌ಗಳನ್ನು ಎಂಟು ವಾರಗಳ ಒಳಗೆ (ಆಗಸ್ಟ್ ಅಂತ್ಯ) ತಯಾರಿಸಿ ರಾಜ್ಯಗಳಿಗೆ ಬಿಇಎಲ್‌ ಪೂರೈಸಲಿದೆ.

ಈ ವೆಂಟಿಲೇಟರ್‌ಗಳ ತಯಾರಿಕೆಗೆ ವಿನ್ಯಾಸ ಮತ್ತು ತಂತ್ರಜ್ಞಾನವನ್ನು ಸ್ಕ್ಯಾನ್‌ರೇ ಕಂಪನಿ ನೀಡಿದೆ. ವಿದೇಶಗಳಿಂದ ಆಮದು ಮಾಡಲಾಗುವ ಕೆಲವು ಸೂಕ್ಷ್ಮ ಪರಿಕರಗಳು ಹಾಗೂ ಸ್ಥಳೀಯವಾಗಿ ಲಭ್ಯವಿರುವ ಘಟಕಗಳನ್ನು ಬಳಸಿ ರೂಪಿಸುವ ನಿಟ್ಟಿನಲ್ಲಿ ಡಿಆರ್‌ಡಿಓ ವಿಜ್ಞಾನಿಗಳು ಬಿಇಎಲ್‌ಗೆ ನೆರವು ನೀಡುತ್ತಿದ್ದಾರೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಸ್ಕ್ಯಾನರೇ ಕಂಪನಿಯ ಆಡಳಿತ ನಿರ್ದೇಶಕ ವಿಶ್ವಪ್ರಸಾದ್‌ ಆಳ್ವ, ‘ನಮ್ಮ ಟೆಕ್ನಾಲಜಿ ಮತ್ತು ಎಂಜಿನಿಯರ್‌ಗಳಿಂದ ತರಬೇತಿ ಪಡೆದು ವೆಂಟಿಲೇಟರ್‌ಗಳನ್ನು ಬಿಇಎಲ್‌ ತಯಾರಿಸುತ್ತಿದೆ. ನಿಯಂತ್ರಣ ಮತ್ತು ಗುಣಮಟ್ಟ ಪರಿಶೀಲನೆ ನಮ್ಮದೇ ಹೊಣೆ. ಪಿಎಂ ಕೇರ್ಸ್ ನಿಧಿಯಲ್ಲಿ ಸರ್ಕಾರದಿಂದ (ಬಿಇಎಲ್‌ ರಕ್ಷಣಾ ಸಚಿವಾಲಯದ ಅಡಿಯಲ್ಲಿದೆ) ಸರ್ಕಾರಕ್ಕೆ (ರಾಜ್ಯಗಳಿಗೆ) ವೆಂಟಿಲೇಟರ್‌ ಸರಬರಾಜು ಆಗಲಿದೆ. ಈಗಾಗಲೇ 10 ಸಾವಿರ ವೆಂಟಿಲೇಟರ್‌ ತಯಾರಾಗಿದೆ’ ಎಂದು ಮಾಹಿತಿ ನೀಡಿದರು.

‌‘ಭ್ರಷ್ಟಾಚಾರಕ್ಕೆ ಎಡೆ ಇಲ್ಲದಂತೆ ವೆಂಟಿಲೇಟರ್‌ಗಳನ್ನು ಪೂರೈಕೆ ಮಾಡಲಾಗುತ್ತಿದೆ. ಖಾಸಗಿ ಏಜೆನ್ಸಿಗಳು ಮತ್ತು ಮಧ್ಯವರ್ತಿಗಳಿಗೆ ಪ್ರವೇಶವೇ ಇಲ್ಲ. ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ‘ಸರ್ಕಾರದಿಂದ ಸರ್ಕಾರಕ್ಕೆ’ ಪರಿಕಲ್ಪನೆಯಲ್ಲಿ ಯೋಜನೆ ಅನುಷ್ಠಾನವಾಗುತ್ತಿದೆ’ ಎಂದರು.

‘ಕರ್ನಾಟಕ ಸರ್ಕಾರ ಮಾರ್ಚ್‌ ತಿಂಗಳ ಕೊನೆಯಲ್ಲಿ 1,000 ವೆಂಟಿಲೇಟರ್‌ ಪೂರೈಸುವ ಸಂಬಂಧ ನಮ್ಮ ಜೊತೆ ಮಾತುಕತೆ ನಡೆಸಿತ್ತು. ಆದರೆ, ನಮ್ಮಿಂದ 130 ವೆಂಟಿಲೇಟರ್‌ಗಳನ್ನು ಮಾತ್ರ ಖರೀದಿಸಿದೆ. ಉಳಿದಂತೆ, ಚೀನಾ ಸೇರಿದಂತೆ ಇತರ ಕಡೆಗಳಿಂದಲೂ ಖರೀದಿಸಿರುವ ಮಾಹಿತಿ ಇದೆ’ ಎಂದರು.

*



ಬಿಇಎಲ್‌ನಲ್ಲಿ ವೆಂಟಿಲೇಟರ್‌ ತಯಾರಿಸುವ ವಿಷಯದಲ್ಲಿ ಪ್ರಧಾನಿ ಕಾರ್ಯಾಲಯದಿಂದಲೇ ನಿಗಾ ವಹಿಸುವ ಮೂಲಕ ಪಾರದರ್ಶಕತೆಗೆ ಒತ್ತು ನೀಡಲಾಗಿದೆ.
-ವಿಶ್ವಪ್ರಸಾದ್‌ ಆಳ್ವ, ಆಡಳಿತ ನಿರ್ದೇಶಕ, ಸ್ಕ್ಯಾನ್‌ರೇ ಕಂಪನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.