
ಭದ್ರಾ ಮೇಲ್ದಂಡೆ ಕಾಲುವೆ ಕಾಮಗಾರಿ (ಸಂಗ್ರಹ ಚಿತ್ರ)
ನವದೆಹಲಿ: ಕೇಂದ್ರ ಸರ್ಕಾರವು 2016ರಲ್ಲಿ ಜಾರಿಗೊಳಿಸಿರುವ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಅವಧಿಯು ಈ ವರ್ಷದ ಮಾರ್ಚ್‌ನಲ್ಲಿ ಮುಗಿಯಲಿದೆ. ಈ ಯೋಜನೆಯನ್ನು ಮುಂದುವರಿಸಲು ಕೇಂದ್ರ ಸರ್ಕಾರ ಮನಸ್ಸು ಮಾಡಿದರಷ್ಟೇ ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಅನುದಾನವು ಕರ್ನಾಟಕಕ್ಕೆ ಲಭ್ಯವಾಗಲಿದೆ.
ಈ ಯೋಜನೆಗೆ ₹5,300 ಕೋಟಿ ಅನುದಾನ ನೀಡುವುದಾಗಿ ಕೇಂದ್ರ ಸರ್ಕಾರವು 2023ರ ಬಜೆಟ್‌ನಲ್ಲಿ ಪ್ರಕಟಿಸಿತ್ತು. ‘ಯೋಜನೆಯನ್ನು ಪ್ರಸ್ತುತ ಕೇಂದ್ರ ಸರ್ಕಾರದ ಯಾವುದೇ ಯೋಜನೆಯಡಿ ಸೇರಿಸಿಲ್ಲ. ಹೀಗಾಗಿ, ಯೋಜನೆಗೆ ಅನುದಾನ ಮಂಜೂರು ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಕೇಂದ್ರ ಜಲಶಕ್ತಿ ಸಚಿವರು ಈ ಹಿಂದೆ ಸ್ಪಷ್ಟಪಡಿಸಿದ್ದರು.
ಪ್ರಸ್ತಾವನೆ ಸಲ್ಲಿಸಿದರೆ ಕೃಷಿ ಸಿಂಚಾಯಿ ಯೋಜನೆಯಡಿ ಅನುದಾನ ನೀಡುವ ಬಗ್ಗೆ ಪರಿಶೀಲಿಸುವುದಾಗಿ ಸಚಿವರು ಭರವಸೆ ನೀಡಿದ್ದರು. ಯೋಜನೆಯನ್ನು ಕೃಷಿ ಸಿಂಚಾಯಿ ಯೋಜನೆಯಡಿ ಸೇರ್ಪಡೆಗೊಳಿಸಲು ಕರ್ನಾಟಕ ಸರ್ಕಾರವು 2024ರ ಆಗಸ್ಟ್‌ನಲ್ಲಿ ಪ್ರಸ್ತಾವ ಸಲ್ಲಿಸಿತ್ತು. ಆ ಬಳಿಕ, ಅನುದಾನ ಬಿಡುಗಡೆಗೆ ಒತ್ತಾಯಿಸಿ ರಾಜ್ಯ ಸರ್ಕಾರವು ಜಲ ಶಕ್ತಿ ಸಚಿವಾಲಯಕ್ಕೆ 21 ಪತ್ರಗಳನ್ನು ಬರೆದಿದೆ. ಸಚಿವಾಲಯ ಕೇಳಿರುವ ಎಲ್ಲ ಸ್ಪಷ್ಟೀಕರಣಗಳಿಗೆ ಉತ್ತರ ನೀಡಿದೆ. ರಾಜ್ಯದ ಸ್ಪಷ್ಟೀಕರಣಗಳನ್ನು ಕೇಂದ್ರ ಜಲ ಆಯೋಗ ಈಗ ಪರಿಶೀಲನೆ ನಡೆಸುತ್ತಿದೆ. ಜಲ ಆಯೋಗ ಶಿಫಾರಸು ಮಾಡಿದ ಬಳಿಕವಷ್ಟೇ ಜಲ ಶಕ್ತಿ ಸಚಿವಾಲಯ ಅನುದಾನ ಬಿಡುಗಡೆಗೆ ಕ್ರಮ ವಹಿಸುತ್ತದೆ. ಇದೊಂದು ಸುದೀರ್ಘ ಪ್ರಕ್ರಿಯೆ.
ಲೋಕಸಭೆಯಲ್ಲಿ ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್ ಕೇಳಿರುವ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ, ‘ಕೃಷಿ ಸಿಂಚಾಯಿ ಯೋಜನೆಯು 2025–26ರ ವರೆಗೆ ಮಾತ್ರ ಇದೆ‘ ಎಂದು ಸ್ಪಷ್ಟಪಡಿಸಿದ್ದಾರೆ.
‘ಈ ಯೋಜನೆಯ ತಾಂತ್ರಿಕ– ಆರ್ಥಿಕ ಮೌಲ್ಯಮಾಪನಕ್ಕಾಗಿ ರಾಜ್ಯ ಸರ್ಕಾರದೊಂದಿಗೆ ಹಲವು ಸಭೆಗಳನ್ನು ನಡೆಸಲಾಗಿದೆ. ಸಚಿವಾಲಯದ ಸಲಹಾ ಸಮಿತಿಯು 2020ರ ಡಿಸೆಂಬರ್, ಸಚಿವಾಲಯದ ಹೂಡಿಕೆ ಅನುಮೋದನೆ ಸಮಿತಿಯು 2021ರ ಮಾರ್ಚ್ ಹಾಗೂ ಸಾರ್ವಜನಿಕ ಹೂಡಿಕೆ ಮಂಡಳಿಯು 2022ರ ಅಕ್ಟೋಬರ್‌ನಲ್ಲಿ ಸಭೆ ನಡೆಸಿದೆ.
ಅದಾದ ನಂತರ, ಕೃಷಿ ಸಿಂಚಾಯಿ ಯೋಜನೆಯಡಿ ಹಣಕಾಸಿನ ನೆರವು ನೀಡಲು ಸಚಿವಾಲಯ ಪ್ರಸ್ತಾವನೆ ಸ್ವೀಕರಿಸಿತು. ಆದರೆ, ಈ ಸಚಿವಾಲಯದ ಚಾಲ್ತಿಯಲ್ಲಿರುವ ಯೋಜನೆಗಳ ಅಡಿಯಲ್ಲಿ ಭಾಗಶಃ ಹಣಕಾಸಿನ ನೆರವಿಗಾಗಿ ಯೋಜನೆಯನ್ನು ಸೇರಿಸಲು ಯೋಜನೆಯ ಪರಿಷ್ಕೃತ ಹಣಕಾಸಿನ ವಿವರಗಳನ್ನು ಒದಗಿಸಬೇಕು. ಇದರಲ್ಲಿ ಈವರೆಗೆ ಮಾಡಿರುವ ವೆಚ್ಚ, ಬಾಕಿ ವೆಚ್ಚ ಹಾಗೂ ಬಾಕಿ ವೆಚ್ಚದ ಆಧಾರದಲ್ಲಿ ಕೇಂದ್ರದ ಅರ್ಹ ಪರಿಷ್ಕೃತ ಸಹಾಯ ಮತ್ತಿತರ ಅಂಶಗಳನ್ನು ಒಳಗೊಂಡಿರಬೇಕು. ಆ ಬಳಿಕವೇ ಅನುದಾನ ಬಿಡುಗಡೆಗೆ ಅನುಮೋದನೆ ನೀಡಲಾಗುತ್ತದೆ’ ಎಂದು ಜಲಶಕ್ತಿ ಸಚಿವಾಲಯ ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.