ADVERTISEMENT

ಪ್ರಧಾನಿ ಪ್ರಮಾಣವಚನ: ವೆಚ್ಚದ ವಿವರ ಒದಗಿಸಲು ಆದೇಶ

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 19:30 IST
Last Updated 16 ಜನವರಿ 2022, 19:30 IST

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭ ವೆಚ್ಚದ ವಿವರವನ್ನು ಕೋರಿ ವಕೀಲ ಟಿ. ನರಸಿಂಹಮೂರ್ತಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಯನ್ನು ಮೂರು ಪ್ರತ್ಯೇಕ ಇಲಾಖೆಗಳಿಗೆ ವರ್ಗಾಯಿಸಿದ್ದ ರಾಷ್ಟ್ರಪತಿಯವರ ಸಚಿವಾಲಯದ ನಿರ್ಧಾರವನ್ನು ಅನೂರ್ಜಿತಗೊಳಿಸಿರುವ ಕೇಂದ್ರ ಮಾಹಿತಿ ಆಯೋಗ, ಅರ್ಜಿದಾರರಿಗೆ ಸಮಗ್ರ ಮಾಹಿತಿ ಒದಗಿಸುವಂತೆ ಆದೇಶಿಸಿದೆ.

2019ರ ಮೇ 30ರಂದು ಮೋದಿಯವರು ಎರಡನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆ ಸಮಾರಂಭಕ್ಕೆ ಲಘು ಉಪಾಹಾರದ ವ್ಯವಸ್ಥೆ, ವಿದ್ಯುತ್‌ ದೀಪಾಲಂಕಾರ, ಧ್ವನಿವರ್ಧಕದ ವ್ಯವಸ್ಥೆ, ಹೂವಿನ ಅಲಂಕಾರ, ವಿದೇಶಿ ಅತಿಥಿಗಳೂ ಸೇರಿದಂತೆ ಆಹ್ವಾನಿತರ ವಿಮಾನ ಪ್ರಯಾಣ ಟಿಕೆಟ್‌ಗೆ ಮಾಡಿದ ವೆಚ್ಚ, ಆಹ್ವಾನ ಪತ್ರಿಕೆ ಮುದ್ರಣದ ವೆಚ್ಚದ ವಿವರ ಒದಗಿಸುವಂತೆ ನರಸಿಂಹಮೂರ್ತಿ 2019ರ ಮೇ 31ರಂದು ಅರ್ಜಿ ಸಲ್ಲಿಸಿದ್ದರು.

2019ರ ಜೂನ್‌ 4 ಮತ್ತು ಜುಲೈ 5ರಂದು ಅರ್ಜಿದಾರರಿಗೆ ಕೆಲವು ಮಾಹಿತಿ ಒದಗಿಸಿದ್ದ ರಾಷ್ಟ್ರಪತಿಯವರ ಸಚಿವಾಲಯ, ಉಳಿದ ಮಾಹಿತಿ ಒದಗಿಸುವಂತೆ ಅರ್ಜಿಯನ್ನು ಮೂರು ಪ್ರತ್ಯೇಕ ಇಲಾಖೆಗಳಿಗೆ ವರ್ಗಾಯಿಸಿತ್ತು. ಆ ಇಲಾಖೆಗಳು ಸರಿಯಾದ ಮಾಹಿತಿ ಒದಗಿಸಿಲ್ಲ ಎಂದು ಅರ್ಜಿದಾರರು ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ರಾಷ್ಟ್ರಪತಿ ಸಚಿವಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿಯ ನಿರ್ಧಾರ ಸರಿಯಾಗಿದೆ ಎಂದು ತೀರ್ಮಾನಿಸಿದ್ದ ಪ್ರಥಮ ಮೇಲ್ಮನವಿ ಪ್ರಾಧಿಕಾರ, ಮೇಲ್ಮನವಿಯನ್ನು ತಿರಸ್ಕರಿಸಿತ್ತು.

ADVERTISEMENT

2019ರ ಸೆಪ್ಟೆಂಬರ್‌ 15ರಂದು ನರಸಿಂಹಮೂರ್ತಿ ಕೇಂದ್ರ ಮಾಹಿತಿ ಆಯೋಗಕ್ಕೆ ಎರಡನೇ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿ 2021ರ ಡಿಸೆಂಬರ್‌ 24ರಂದು ಆದೇಶ ಪ್ರಕಟಿಸಿರುವ ಆಯೋಗ, ಪ್ರಥಮ ಮೇಲ್ಮನವಿ ಪ್ರಾಧಿಕಾರದ ತೀರ್ಮಾನವನ್ನು ಅನೂರ್ಜಿತಗೊಳಿಸಿದೆ. ಅರ್ಜಿದಾರರಿಗೆ ಸಮಗ್ರ ಮಾಹಿತಿ ಒದಗಿಸುವಂತೆ ರಾಷ್ಟ್ರಪತಿಯವರ ಸಚಿವಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.