ಹೈಕೋರ್ಟ್ ಹಾಗೂ ನ್ಯಾಯಮೂರ್ತಿ ಎಂ.ನಾಗಪ್ರಸನ್ನ (ಒಳಚಿತ್ರ)
ಬೆಂಗಳೂರು: ‘ಪೋಕ್ಸೊ ಕಾಯ್ದೆಗೆ ಬಾಲಕ–ಬಾಲಕಿ ಎಂಬ ಲಿಂಗಬೇಧವಿಲ್ಲ. ಹೂವಿನಂತೆ ಅರಳಬೇಕಾದ ವಯೋಮಾನದಲ್ಲಿ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ತಡೆಯಲು ರೂಪಿಸಿರುವ ಕಠಿಣ ಶಾಸನವಾಗಿದೆ’ ಎಂದು ಪೋಕ್ಸೊ ಕಾಯ್ದೆಯ ಕಾನೂನು ಬದ್ಧತೆಯನ್ನು ವಿಶಿಷ್ಟವಾಗಿ ವಿಶದಪಡಿಸಿರುವ ಹೈಕೋರ್ಟ್, ದೇಶದಲ್ಲೇ ಮೊದಲು ಎನ್ನಬಹುದಾದ ಪ್ರಕರಣವೊಂದರಲ್ಲಿ ಮಧ್ಯವಯಸ್ಸಿನ ಮಹಿಳೆಯ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ರದ್ದುಪಡಿಸಲು ನಿರಾಕರಿಸಿದೆ.
‘ನನ್ನ ವಿರುದ್ಧ ಬೆಂಗಳೂರು ನಗರದ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿ ಆರೋಪಿತ ಮಹಿಳೆ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಪ್ರಕಟಿಸಿದ್ದು, ‘ಪೋಕ್ಸೊ ಕಾಯ್ದೆ ಮಗುವಿನ ಅಂಗರಚನಾ ಶಾಸ್ತ್ರದ ಬಗ್ಗೆ ಪಾಠ ಮಾಡುವ ಕೈಪಿಡಿಯಲ್ಲ’ ಎಂದು ಘೋಷಿಸಿದೆ.
ಮಹಿಳೆಯ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಿರುವ ನ್ಯಾಯಪೀಠ, ‘ಲೈಂಗಿಕ ಚಟುವಟಿಕೆಗಳಲ್ಲಿ, ಅದರಲ್ಲೂ ಸಂಭೋಗ ಕ್ರಿಯೆಯಲ್ಲಿ ಪುರುಷನೇ ಯಾವಾಗಲೂ ಸಕ್ರಿಯ ಮತ್ತು ಮಹಿಳೆ ಪುರುಷನ ಮನೋಭಿಲಾಷೆಗಳನ್ನೆಲ್ಲಾ ನಿಷ್ಕ್ರಿಯವಾಗಿ ಸ್ವೀಕರಿಸುವ ಪ್ರತಿಜೀವ ಎಂಬುದು ಓಬೀರಾಯನ ಪರಿಕಲ್ಪನೆ. ಈಗ ಕಾಲ ಬದಲಾಗಿದೆ. ಇಂತಹ ದೃಷ್ಟಿಕೋನ ಈಗ ಮಾಸಿದ ವ್ಯಾಖ್ಯಾನಗಳ ಕಂತೆ’ ಎಂದು ಅಭಿಪ್ರಾಯಪಟ್ಟಿದೆ.
‘ಅತಾರ್ಕಿಕ ತಹಳಹದಿಯಲ್ಲಿ ಅಪರಿಮಿತ ಬೌದ್ಧಿಕ ಕಸರತ್ತು ನಡೆಸಿ ನಿರ್ಬಂಧಿತ ವ್ಯಾಖ್ಯಾನಗಳ ಮೂಲಕ ಆರೋಪಿ ನಿರಪರಾಧಿ ಎಂದು ಸಾಬೀತುಪಡಿಸುವ ವ್ಯರ್ಥಪ್ರಯತ್ನ ಸಲ್ಲದು. ಕಾನೂನು ಪುರುಷ ಮತ್ತು ಮಹಿಳೆಯನ್ನು ಏಕೋಭಾವದೊಂದಿಗೆ, ನ್ಯಾಯದ ತಕ್ಕಡಿಯಲ್ಲಿ ಸಮಾನವಾಗಿ ತೂಗುತ್ತದೆ. ಈ ಪ್ರಕರಣದಲ್ಲಿ ಫಿರ್ಯಾದುದಾರರು ದೂರು ದಾಖಲಿಸಲು ತಡ ಮಾಡಿದ್ದಾರೆ ಎಂಬುದು ನಂಬಿಕೆಗೆ ಮಾರುದೂರದ ಅಂಶ. ಹಾಗಾಗಿ, ವಿಚಾರಣೆ ರದ್ದುಗೊಳಿಸಲು ಸಾಧ್ಯವಿಲ್ಲ. 18 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಪೋಕ್ಸೊ ಕಾಯ್ದೆ ಅಡಿ ಸೂಕ್ತ ರಕ್ಷಣೆ ದೊರೆಯಬೇಕು’ ಎಂದು ಸಾರಿದೆ.
ಅಮಾಯಕ ಜೀವಗಳ ಮೇಲೆ ಕಾಮಾಂಧರು ಎಸಗುವ ಪೈಶಾಚಿಕ ಕೃತ್ಯಗಳನ್ನು ನಿರ್ದಾಕ್ಷಿಣ್ಯವಾಗಿ ತಡೆಗಟ್ಟಲಿಕ್ಕಾಗಿಯೇ ನಮ್ಮ ಶಾಸಕಾಂಗ ಪೋಕ್ಸೊದಂತಹ ಮಹತ್ತರ ಕಾಯ್ದೆಯನ್ನು ವಿನ್ಯಾಸಗೊಳಿಸಿದೆ ಎಂಬುದನ್ನು ಯಾರೂ ಮರೆಯಬಾರದು.– ಎಂ.ನಾಗಪ್ರಸನ್ನ, ನ್ಯಾಯಮೂರ್ತಿ
ಬಾಲಕರ ಮೇಲಿನ ಲೈಂಗಿಕ ದೌರ್ಜನ್ಯ ಶೇ 54.4 ರಷ್ಟು
ಬಾಲಕಿಯರ ಮೇಲಿನ ದೌರ್ಜನ್ಯ ಶೇ 45.6 ರಷ್ಟು
ನುಗ್ಗೇಕಾಯಿ ನೆಪದಲ್ಲಿ ತಣಿದ ತೃಷಾಗ್ನಿ
ಪ್ರಕರಣವೇನು?: ಆಕೆಗೆ 53ರ ಪ್ರಾಯ. ಗಂಡ ಮತ್ತು ಮಗಳು ಅಮೆರಿಕದಲ್ಲಿ ವಾಸ. ವಯಸ್ಸು ಇಳಿಜಾರಿನಲ್ಲಿದ್ದರೂ ಮೈಮೂಲೆಗಳಲ್ಲಿ ಪುಟಿಯುತ್ತಿದ್ದ ಕಾಮ ವಾಂಛೆಗಳನ್ನು ಹತ್ತಿಕ್ಕುವಲ್ಲಿ ಸೋತ ಹತಭಾಗ್ಯೆ. ಬೆಂಗಳೂರಿನ ಪ್ರತಿಷ್ಠಿತ ಗೇಟೆಡ್ ಕಮ್ಯುನಿಟಿಯ ವಿಲ್ಲಾವೊಂದರಲ್ಲಿ ಏಕಾಂತದ ವಾಸ. ಮನದ ಬೇಸರ ಕಳೆಯಲು ಬಣ್ಣಗಳ ಆಟದಲ್ಲಿ ಚಿತ್ರ ಬಿಡಿಸುವ ಹುಚ್ಚು. ಮನೆಯ ಖಾಲಿ ಜಾಗದಲ್ಲಿ ಪುಟ್ಟದಾದ ಕೈತೋಟ. ಉಲ್ಲಸಿತ ಕೃಷಿ ಚಟುವಟಿಕೆ. ತರಕಾರಿ ಬೆಳೆದು ವಿಲ್ಲಾಗಳಲ್ಲಿನ ನಿವಾಸಿಗಳಿಗೆ ಮಾರಾಟ ಮಾಡುವ ಅಭ್ಯಾಸ.
ಮತ್ತೊಂದು ವಿಲ್ಲಾದ ನಿವಾಸಿಯಾಗಿದ್ದ ಆ ಹುಡುಗನಿಗೆ ಆಗ ಕೇವಲ 13 ವರ್ಷ. ವಿಲ್ಲಾದ ಎಲ್ಲ ನಿವಾಸಿಗಳ ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ಈಕೆ ಈ 13 ಪೋರನ ಜೊತೆ ಸಾಧಿಸಿದ ಪ್ರಣಯ ಸಖ್ಯ ಈಗ ಆಕೆಯನ್ನು ಕಟಕಟೆಗೆ ತಂದು ನಿಲ್ಲಿಸಿದೆ. ಮನೆಯಂಗಳದಲ್ಲಿ ಬೆಳೆದಿರುವ ನುಗ್ಗೇಕಾಯಿ ಕೊಡುತ್ತೇನೆ ಬಾ ಎಂದು ಬಾಲಕನನ್ನು ಪದೇ ಪದೇ ತನ್ನ ಮನೆಗೆ ಕರೆಯಿಸಿಕೊಂಡು ಅವನನ್ನು ಸಲ್ಲಾಪಕ್ಕೆ ತೊಡಗಿಸಿ, ಕಾಂಡೋಮ್ ತೊಡಿಸಿ, ಬಲವಂತದಿಂದ ಸಂಭೋಗ ಮಾಡಿಸಿಕೊಂಡ ಆರೋಪದ ಹೊರೆ ಹೊತ್ತಿದ್ದಾಳೆ.
ಕೆಲಸದ ನಿಮಿತ್ತ ಹುಡುಗನ ಪೋಷಕರು ದುಬೈಗೆ ತೆರಳಿದರಾದರೂ ಮುಂದಿನ ನಾಲ್ಕು ವರ್ಷಗಳಲ್ಲಿ ಹುಡುಗ ಸದಾ ಸುಂದು ಬಡಿದವನಂತೆ ಇರುತ್ತಿದ್ದ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಪೋಷಕರು ಮನೋವೈದ್ಯರ ಬಳಿ ಕರೆದೊಯ್ದಾಗ ಬಾಲಕ ತನ್ನ ಕೌಮಾರ್ಯ ಕಮರಿದ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. 53ರ ನೆರೆಮನೆಯ ಹೆಣ್ಣು ತನ್ನನ್ನು ಬೆದರಿಸಿ ಬಲೆಗೆ ಬೀಳಿಸಿಕೊಂಡಿದ್ದಾಳೆ ಎಂಬುದನ್ನು ಅರುಹಿ ಅಳಾರಾಗಿದ್ದಾನೆ. ಪರಿಣಾಮ ಪೋಷಕರು ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹೈಕೋರ್ಟ್ ಈಗ ಮಹಿಳೆ ವಿಚಾರಣೆ ಎದುರಿಸಲಿ ಎಂದು ತೀರ್ಪಿತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.