ಬೆಂಗಳೂರು: ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಕಾಯ್ದೆ ಅಡಿಯ ದೂರನ್ನು ‘ತನಿಖೆಗೆ ಪರಿಗಣಿಸಬಹುದಾದ ಅಪರಾಧ’ ಎಂದು ನಿರ್ಧರಿಸಿರುವ ಬೆಂಗಳೂರಿನ ವಿಶೇಷ ನ್ಯಾಯಾಲಯ, ಯಡಿಯೂರಪ್ಪ ಅವರಿಗೆ ಸಮನ್ಸ್ ಜಾರಿಗೊಳಿಸಲು ಆದೇಶಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ವಿಶೇಷ ನ್ಯಾಯಾಲಯ ಸಂಜ್ಞೇಯ ಅಪರಾಧ ಎಂದು ಪರಿಗಣಿಸಿದ್ದನ್ನು ಹೈಕೋರ್ಟ್ ಬದಿಗೆ ಸರಿಸಿತ್ತು. ದೂರನ್ನು ಹೊಸದಾಗಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲು ಆದೇಶಿಸಿತ್ತು. ಈ ನಿರ್ದೇಶನದ ಅನುಸಾರ ದೂರಿನ ವಿಚಾರಣೆ ನಡೆಸಿದ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ (ಮೊದಲನೇ ತ್ವರಿತ ವಿಚಾರಣೆಯ ಪೋಕ್ಸೊ ಪ್ರಕರಣಗಳ ವಿಶೇಷ ನ್ಯಾಯಾಲಯ) ನ್ಯಾಯಾಧೀಶ ಎನ್.ಎಂ.ರಮೇಶ್ ಅವರು ಹೊಸದಾಗಿ ಸಂಜ್ಞೇಯ ಅಪರಾಧದಡಿ ದೂರನ್ನು ಪರಿಗಣಿಸಿದ್ದಾರೆ.
ಪ್ರಾಸಿಕ್ಯೂಷನ್ ಪರ ವಕೀಲರಾದ ಅಶೋಕ್ ಎನ್.ನಾಯಕ್ ಅವರ ಮನವಿಯನ್ನು ಮಾನ್ಯ ಮಾಡಿರುವ ನ್ಯಾಯಾಧೀಶರು, ಯಡಿಯೂರಪ್ಪ ಸೇರಿದಂತೆ ಇತರ ನಾಲ್ವರು ಆರೋಪಿಗಳ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಪೋಕ್ಸೊ ಕಾಯ್ದೆಯ ಕಲಂ 8, ಭಾರತೀಯ ದಂಡ ಸಂಹಿತೆ–1860ರ ಕಲಂ 354(ಎ), 204, 214 ಜೊತೆಗೆ 34ರ ಅಡಿ ವಿಶೇಷ ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶಿಸಿದ್ದಾರೆ. ಆರೋಪಿಗಳು ಮಾರ್ಚ್ 15ರಂದು ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಲಾಗಿದೆ.
‘ನನ್ನ ಮಗಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಹಾಯ ಮಾಡಬೇಕು’ ಎಂದು ಬೇಡಿ ಬಂದಿದ್ದ ಸಂತ್ರಸ್ತ ಬಾಲಕಿಯ ತಾಯಿ (ಈಗ ಬದುಕಿಲ್ಲ) ನೀಡಿದ್ದ ದೂರಿನ ಅನುಸಾರ ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಆರ್‌ಎಂವಿ ಎರಡನೇ ಹಂತದಲ್ಲಿನ ಡಾಲರ್ಸ್ ಕಾಲೊನಿಯಲ್ಲಿರುವ ಯಡಿಯೂರಪ್ಪ ಅವರ ‘ಧವಳಗಿರಿ’ ನಿವಾಸದಲ್ಲಿ 2024ರ ಫೆಬ್ರುವರಿ 2ರಂದು ಬೆಳಗ್ಗೆ 11ರಿಂದ 11.30ರ ನಡುವೆ ‘ಬಾಲಕಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ’ ಎಂಬುದು ಆರೋಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.