ADVERTISEMENT

ದರೋಡೆ ಮಾಡಿದ್ದ ನಗದು, ಚಿನ್ನ, ಬೆಳ್ಳಿ ವಶ

ಮುಂಬೈನಲ್ಲಿ ಕೃತ್ಯ ಎಸಗಿ ಬಂದಿದ್ದ ಐವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 9:44 IST
Last Updated 2 ಏಪ್ರಿಲ್ 2019, 9:44 IST
ದರೋಡೆ ಮಾಡಿ ಅಪಾರ ಪ್ರಮಾಣದ ನಗದು, ಚಿನ್ನ, ಬೆಳ್ಳಿ ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಯಲ್ಲಾಪುರ ತಾಲ್ಲೂಕಿನ ಕಿರವತ್ತಿ ಬಳಿಯ ಚೆಕ್‌ಪೋಸ್ಟ್ನಲ್ಲಿ ಪೊಲೀಸರು, ಅಧಿಕಾರಿಗಳು ಸೋಮವಾರ ಬಂಧಿಸಿದರು
ದರೋಡೆ ಮಾಡಿ ಅಪಾರ ಪ್ರಮಾಣದ ನಗದು, ಚಿನ್ನ, ಬೆಳ್ಳಿ ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಯಲ್ಲಾಪುರ ತಾಲ್ಲೂಕಿನ ಕಿರವತ್ತಿ ಬಳಿಯ ಚೆಕ್‌ಪೋಸ್ಟ್ನಲ್ಲಿ ಪೊಲೀಸರು, ಅಧಿಕಾರಿಗಳು ಸೋಮವಾರ ಬಂಧಿಸಿದರು   

ಯಲ್ಲಾಪುರ (ಉತ್ತರ ಕನ್ನಡ): ದರೋಡೆ ಮಾಡಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ದೇಶ ವಿದೇಶಗಳ ನಗದನ್ನು ತಾಲ್ಲೂಕಿನ ಕಿರವತ್ತಿಯ ಚುನಾವಣಾ ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ಸೋಮವಾರ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಐವರನ್ನು ಬಂಧಿಸಲಾಗಿದೆ.

ಅವರ ಬಳಿ ಭಾರತವೂ ಸೇರಿದಂತೆ ಸಿಂಗಪುರ, ಇಂಗ್ಲೆಂಡ್, ನೇಪಾಳದ ಒಟ್ಟು ₹ 2.68 ಲಕ್ಷ ಮೌಲ್ಯದ ನಗದು ಸಿಕ್ಕಿದೆ. 2.243 ಕೆ.ಜಿ ಬಂಗಾರ,ಮೂರುಕೆ.ಜಿ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಲ್ಲದರಒಟ್ಟು ಮೊತ್ತಸುಮಾರು₹ 75 ಲಕ್ಷ ಎಂದು ಅಂದಾಜಿಸಲಾಗಿದೆ.

ನೇಪಾಳದ, ಪ್ರಸ್ತುತ ಮುಂಬೈನಲ್ಲಿ ವಾಸವಾಗಿರುವ ಸೀತಾರಾಮ ಭೀಮ ಬಹದ್ದೂರ್ ಸಾವುದ್ (31), ಏಕಮಿಥಮಾನ್ ಬಹದ್ದೂರ್ ಷಾ (18), ದುಮ್ಮರ್ ದಿಲ್ ಬಹದ್ದೂರ್ ಸಾವುದ್ (20), ಹುಬ್ಬಳ್ಳಿಯ ನವನಗರ ನಿವಾಸಿಗಳಾದ ಬಾಲಸಿಂಗ್ ಬೀರು ಬಹದ್ದೂರ್ ಷಾ ಹಾಗೂ ರಾಮ್ ನರಸಿಂಗ್ ಗೋರ್ಖ್ (17) ಬಂಧಿತ ಆರೋಪಿಗಳು.

ADVERTISEMENT

ಮುಂಬೈನಲ್ಲಿ ದರೋಡೆ: ಐವರೂ ಅಂಕೋಲಾದಿಂದ ಹುಬ್ಬಳ್ಳಿಗೆ ಕೆಎಸ್ಆರ್‌ಟಿಸಿ ಬಸ್‍ನಲ್ಲಿ ತೆರಳುತ್ತಿದ್ದರು. ಕಿರವತ್ತಿಯ ಚುನಾವಣಾ ಚೆಕ್‌ಪೋಸ್ಟ್‌ನಲ್ಲಿ ಬಸ್ತಡೆದ ಅಧಿಕಾರಿಗಳುತಪಾಸಣೆ ನಡೆಸಿದರು. ಆಗಪ್ರಕರಣ ಬೆಳಕಿಗೆ ಬಂತು.ಐವರನ್ನು ವಶಕ್ಕೆ ‍ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ, ಮುಂಬೈನ ಜುಹುವಿನಲ್ಲಿಉದ್ಯಮಿಯೊಬ್ಬರ ಮನೆಯಲ್ಲಿ ದರೋಡೆಮಾಡಿದ್ದಾಗಿ ಬಾಯಿಬಿಟ್ಟರು. ಆರೋಪಿಗಳು ಮುಂಬೈನಿಂದ ಅಂಕೋಲಾಕ್ಕೆ ಬಸ್‌ನಲ್ಲೇ ಬಂದಿದ್ದರು.

ಸಹಾಯಕ ಚುನಾವಣಾಧಿಕಾರಿ ರುದ್ರೇಶಪ್ಪ, ಡಿವೈಎಸ್‌ಪಿ ಭಾಸ್ಕರ್ ಒಕ್ಕಲಿಗ, ತಹಶೀಲ್ದಾರ್ ಶಂಕರ್ ಜಿ.ಎಸ್, ಸಿಪಿಐ ಡಾ.ಮಂಜುನಾಥ ನಾಯಕ, ಪಿಎಸ್‌ಐ ಸುಂದರ ಮರೋಳಿ, ಪ್ರೊಬೆಷನರಿ ಪಿಎಸ್‌ಐ ವಿಜಯಲಕ್ಷ್ಮೀ.ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.