ADVERTISEMENT

ಕುತ್ತು ತಂದ ಗಾಂಧರ್ವ ವಿವಾಹ: ಕಾನ್‌ಸ್ಟೆಬಲ್‌ಗೆ ಸಿಗದ ನಿರೀಕ್ಷಣಾ ಜಾಮೀನು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 16:19 IST
Last Updated 14 ನವೆಂಬರ್ 2025, 16:19 IST
<div class="paragraphs"><p>ನ್ಯಾಯಾಲಯ ತೀರ್ಪು</p></div>

ನ್ಯಾಯಾಲಯ ತೀರ್ಪು

   

ಬೆಂಗಳೂರು: ತಮ್ಮ ಠಾಣೆಯಲ್ಲೇ ಸೇವೆ ಸಲ್ಲಿಸುತ್ತಿದ್ದ ಸಹೋದ್ಯೋಗಿ ಮಹಿಳಾ ಪೊಲೀಸ್‌ ಕಾನ್‌ಸ್ಟೆಬಲ್‌ ಜೊತೆ ಗಾಂಧರ್ವ ಪದ್ಧತಿಯಲ್ಲಿ ವಿವಾಹ ಮಾಡಿಕೊಂಡು ಅದನ್ನು ಬಹಿರಂಗಗೊಳಿಸದೆ ಮತ್ತೊಬ್ಬ ಹುಡುಗಿಯ ಜೊತೆ ನಿಶ್ಚಿತಾರ್ಥ ಪೂರೈಸಿ ಮದುವೆಗೆ ತಯಾರಾಗಿದ್ದ ಪೊಲೀಸ್‌ ಕಾನ್‌ಸ್ಟೆಬಲ್‌ಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್‌ ನಿರಾಕರಿಸಿದೆ.

ಕುಣಿಗಲ್‌ ತಾಲ್ಲೂಕಿನ ಅಮೃತೂರು ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಭಗವಂತರಾಯ ಬಸಂತರಾಯ ಬಿರಾದಾರ (34) ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ರಾಚಯ್ಯ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ADVERTISEMENT

‘ಪರಿಶಿಷ್ಟ ಜಾತಿಗೆ ಸೇರಿದ ಸಂತ್ರಸ್ತೆಗೆ (28) ಭಗವಂತರಾಯ ಕೋಣೆಯೊಂದರಲ್ಲಿ ಸಾಯಿಬಾಬ ಫೋಟೊ ಮುಂದೆ ಗುಪ್ತವಾಗಿ ತಾಳಿ ಕಟ್ಟಿ ಪತಿಯಂತೆಯೇ ಒಟ್ಟಿಗೇ ಆಕೆಯೊಂದಿಗೆ ವಾಸ ಮಾಡಿದ್ದಾರೆ. ಮನಬಂದಾಗಲೆಲ್ಲಾ ಸಂಭೋಗ ನಡೆಸಿದ್ದಾರೆ. ಆಕೆ ತಾಳಿ ಕಟ್ಟಿಕೊಳ್ಳದಂತೆ ನಿರ್ಬಂಧಿಸಿದ್ದಾರೆ. ಸಾರ್ವಜನಿಕವಾಗಿ ಪತ್ನಿ ಎಂದು ಘೋಷಿಸದೆ ಮತ್ತೊಂದು ಹುಡುಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಮದುವೆಗೆ ಸಿದ್ಧವಾಗಿ ವಂಚನೆ ಎಸಗಿರುವುದು ಕಂಡುಬಂದಿದೆ’ ಎಂಬ ಅಭಿಪ್ರಾಯದೊಂದಿಗೆ ನ್ಯಾಯಪೀಠ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.

ಪ್ರಕರಣ: ಭಗವಂತರಾಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ–2023ರ ಕಲಂ 318(2), 352, 115 (2), 351(2), 54, 74 ಮತ್ತು 3(5) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ–1989ರ ಕಲಂ 3(1), (ಆರ್‌)(ಎಸ್‌), 3(1),(ಡಬ್ಲ್ಯು)(i) ಮತ್ತು 3(2)(ವಿಎ) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ತಮ್ಮ ವಿರುದ್ಧದ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ಭಗವಂತರಾಯ ತುಮಕೂರು ಜಿಲ್ಲಾ ಸೆಷನ್ಸ್‌ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದನ್ನು ತಿರಸ್ಕರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.