ADVERTISEMENT

ಪೊಲೀಸ್ ಇಲಾಖೆ ಕಚೇರಿ ಸಿಬ್ಬಂದಿಗೆ ವರ್ಗಾವಣೆ ಕಡ್ಡಾಯ

ಮೂರು ವರ್ಷ ಒಂದೇ ಘಟಕದಲ್ಲಿ ಕೆಲಸ ಮಾಡಿದವರ ವರ್ಗಾವಣೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಸೂಚನೆ

ಎಂ.ನವೀನ್ ಕುಮಾರ್
Published 17 ಸೆಪ್ಟೆಂಬರ್ 2018, 19:23 IST
Last Updated 17 ಸೆಪ್ಟೆಂಬರ್ 2018, 19:23 IST
ಪೊಲೀಸ್ ಇಲಾಖೆ ಕಚೇರಿ ಸಿಬ್ಬಂದಿ –ಸಾಂದರ್ಭಿಕ ಚಿತ್ರ
ಪೊಲೀಸ್ ಇಲಾಖೆ ಕಚೇರಿ ಸಿಬ್ಬಂದಿ –ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ಒಂದೇ ಘಟಕದಲ್ಲಿ ಹಲವಾರು ವರ್ಷಗಳಿಂದ ಠಿಕಾಣಿ ಹೂಡಿರುವ ಪೊಲೀಸ್ ಇಲಾಖೆಯ ಲಿಪಿಕ ಸಿಬ್ಬಂದಿಯನ್ನು (ಕಚೇರಿ ಸಿಬ್ಬಂದಿ) ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ. ಮೂರು ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡಿರುವವರು ಇದೀಗ ವರ್ಗಾವಣೆಗೆ ತಯಾರಾಗಬೇಕಿದೆ.

ಒಂದೇ ಘಟಕದಲ್ಲಿ ಕೆಲಸ ಮಾಡಿದರೆ, ಉಳಿದ ವಿಭಾಗಗಳ ಕಾರ್ಯವೈಖರಿ ಬಗ್ಗೆ ಅವರಿಗೆ ಮಾಹಿತಿ ಇರುವುದಿಲ್ಲ ಎಂಬ ಕಾರಣ ನೀಡಲಾಗಿದೆ. ಆದರೆ, ಕೆಲ ಸಿಬ್ಬಂದಿ ಪೊಲೀಸ್ ಅಧಿಕಾರಿಗಳನ್ನು ನಿಯಂತ್ರಿಸುವ ಮಟ್ಟಕ್ಕೆ ಬೆಳೆದಿರುವುದು ಹಾಗೂ ಅದು ಭ್ರಷ್ಟಾಚಾರಕ್ಕೂ ಕಾರಣವಾಗುತ್ತಿರುವುದರಿಂದ ಸುಧಾರಣೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತವೆ ಇಲಾಖೆ ಮೂಲಗಳು.

ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್. ರಾಜು ಅವರು, ರಾಜ್ಯದ ಎಲ್ಲ ಘಟಕಾಧಿಕಾರಿಗಳಿಗೆ (ಎಸ್ಪಿ, ಕಮಿಷನರ್) ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ.

ADVERTISEMENT

ಶಾಖಾಧೀಕ್ಷಕರು (ಸೂಪರಿಂಟೆಂಡೆಂಟ್), ಪ್ರಥಮ ದರ್ಜೆ, ದ್ವಿತೀಯ ದರ್ಜೆ ಸಹಾಯಕರು ಇಲಾಖೆಯ ಒಂದೇ ಘಟಕದಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ. ಹೀಗೆ ಮಾಡುವುದರಿಂದ ಅನುಭವ ವ್ಯಾಪ್ತಿ ವಿಸ್ತರಣೆಯಾಗದು. ಇದರಿಂದ ಕಚೇರಿಯ ಕಾರ್ಯ ನಿರ್ವಹಣೆಗೆ ಅಡಚಣೆಯಾಗಲಿದೆ. ಆದ್ದರಿಂದ ವರ್ಗಾವಣೆಗೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಪ್ರತಿ ವರ್ಷ ವರದಿ ಸಲ್ಲಿಸಬೇಕು ಎಂದು ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

‘ಲಿಪಿಕ ಸಿಬ್ಬಂದಿಗೆ ರಾಜ್ಯ ವ್ಯಾಪ್ತಿ ಇದ್ದರೂ, ಅವರನ್ನು ಆಗಾಗ್ಗೆ ವರ್ಗಾವಣೆ ಮಾಡುವ ಪದ್ಧತಿ ಇಲ್ಲ. ಒಂದು ಕಚೇರಿಗೆ ಕೆಲಸಕ್ಕೆ ಸೇರುವ ಸಿಬ್ಬಂದಿ ಅಲ್ಲಿಯೇ ನಿವೃತ್ತಿ ಹೊಂದುವುದು ಸಾಮಾನ್ಯವಾಗಿದೆ. ಒಂದು– ಎರಡು ವರ್ಷಕ್ಕೊಮ್ಮೆ ಐಪಿಎಸ್ ಅಧಿಕಾರಿಗಳು ವರ್ಗಾವಣೆಯಾಗುತ್ತಾರೆ. ಆದ್ದರಿಂದ ಇಲಾಖೆಯ ಆಡಳಿತ ವಿಷಯಗಳನ್ನು ಕಡಿಮೆ ಅವಧಿಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳುವುದು ಅವರಿಗೆ ಕಷ್ಟಸಾಧ್ಯವಾಗುತ್ತದೆ. ಪರಿಣಾಮ, ಅವರು ಸಿಬ್ಬಂದಿ ಮೇಲೆಯೇ ಅವಲಂಬಿತರಾಗುತ್ತಾರೆ. ಸಿಬ್ಬಂದಿ ಇದರ ಲಾಭ ಪಡೆಯುತ್ತಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿಯೇ ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿರುವವರು ಇದ್ದಾರೆ. ಗೋಪ್ಯ ಶಾಖೆ (ಕಾನ್‌ಫಿಡೆನ್ಷಿಯಲ್), ಎಸ್ಟಾಬ್ಲಿಷ್‌ಮೆಂಟ್ ವಿಭಾಗದಲ್ಲಿನ ಬಹುತೇಕ ಸಿಬ್ಬಂದಿ ಹಲವಾರು ವರ್ಷಗಳಿಂದ ಬದಲಾಗಿಲ್ಲ. ವರ್ಗಾವಣೆ ಪ್ರಕ್ರಿಯೆ ಅಲ್ಲಿಂದಲೇ ಆರಂಭವಾದರೆ ಒಳಿತು’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.