ADVERTISEMENT

ದಾಖಲೆ ವಶ ಅಧಿಕಾರ ಪೊಲೀಸರಿಗಿಲ್ಲ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2022, 22:00 IST
Last Updated 22 ಡಿಸೆಂಬರ್ 2022, 22:00 IST
   

ಬೆಂಗಳೂರು: ‘ಸರ್ಕಾರದಿಂದ ಪರವಾನಗಿ ಪಡೆಯದೆ ಸಾಲಗಾರರಿಂದ ಅಧಿಕ ಬಡ್ಡಿ ವಸೂಲಿ ಮಾಡುವವರ ಮೇಲೆ ದಾಳಿ ನಡೆಸಿ ದಾಖಲೆವಶಪಡಿಸಿಕೊಳ್ಳುವ ಅಧಿಕಾರ ಪೊಲೀಸರಿಗೆ ಇಲ್ಲ’ ಎಂದು ಹೈಕೋರ್ಟ್ ಹೇಳಿದೆ.

‘ನಮ್ಮ ವಿರುದ್ಧ ಗೋಕಾಕ್ ಠಾಣಾ ಪೊಲೀಸರು ದಾಖಲಿಸಿರುವ ದೋಷಾರೋಪ ಪಟ್ಟಿ ಮತ್ತು ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದುಪಡಿಸಬೇಕು’ ಎಂದು ಕೋರಿ ಗೋಕಾಕ್‌ನ ಬಸವರಾಜು ಮತ್ತು ಜಾಕಿರ್ ಹುಸೇನ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

‘ಈ ಪ್ರಕರಣದಲ್ಲಿ ಪೊಲೀಸರು ಕಾನೂನು ಪ್ರಕ್ರಿಯೆ ಪಾಲಿಸದೆ ಎಫ್‌ಐಆರ್ ಮತ್ತು ದೋಷಾರೋಪ ಪಟ್ಟಿ ದಾಖಲಿಸಿದ್ದಾರೆ’ ಎಂದಿರುವ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದುಪಡಿಸಿದೆ. ಮಿತಿಮೀರಿದ ಬಡ್ಡಿ ವಿಧಿಸುವಿಕೆ ನಿಷೇಧ ಕಾಯ್ದೆ-2004ರ ಕಲಂ 3 ಮತ್ತು 4ರ ಅಡಿಯಲ್ಲಿ ಅಧಿಕ ಬಡ್ಡಿ ವಸೂಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವ ಮುನ್ನ ತನಿಖೆ ನಡೆಸುವುದು ಕಾನೂನುಬಾಹಿರ. ಕರ್ನಾಟಕ ಲೇವಾದೇವಿದಾರರ ಕಾಯ್ದೆಯ ಕಲಂ 15ರ ಪ್ರಕಾರ ರಿಜಿಸ್ಟ್ರಾರ್, ಸಹಾಯಕ ರಿಜಿಸ್ಟ್ರಾರ್ ಅಥವಾ ಸಕ್ಷಮ ಪ್ರಾಧಿಕಾರದ ಅಧಿಕಾರಿ ಅವರಂತಹ ನಿರ್ದಿಷ್ಟ ಅಧಿಕಾರಿ ಮಾತ್ರ ಅಧಿಕ ಬಡ್ಡಿ ವಸೂಲಿ ಮಾಡುವವರ ಮೇಲೆ ದಾಳಿ ನಡೆಸಿ ಶೋಧಿಸಿ ಜಪ್ತಿ ಮಾಡುವ ಅಧಿಕಾರ ಹೊಂದಿದ್ದಾರೆ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ‘ನೊಂದ ಸಾಲಗಾರರು ಸಂಬಂಧಪಟ್ಟ ನ್ಯಾಯಾಲಯದಲ್ಲಿ ಪರಿಹಾರ ಕಂಡುಕೊಳ್ಳಬಹುದು’ ಎಂದು ಆದೇಶಿಸಲಾಗಿದೆ.

ADVERTISEMENT

ಪ್ರಕರಣವೇನು?: ‘ಪರವಾನಗಿ ಪಡೆಯದೆ ಸಾರ್ವಜನಿಕರ ವಾಹನಗಳನ್ನು ಅಡ ಇರಿಸಿಕೊಂಡು ತಿಂಗಳಿಗೆ ಶೇ 10ರಷ್ಟು ಬಡ್ಡಿಗೆ ಸಾಲ ನೀಡುತ್ತಿದ್ದಾರೆ’ ಎಂಬ ಆರೋಪದಡಿ ಬಸವರಾಜು ಮತ್ತು ಜಾಕಿರ್ ಹುಸೇನ್ ವಿರುದ್ಧ ಬೆಳಗಾವಿಯ ಗೋಕಾಕ್ ಟೌನ್ ಠಾಣಾ ಪೊಲೀಸರು ದಾಳಿ ನಡೆಸಿ ದಾಖಲೆ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.