ADVERTISEMENT

ಚಾಮರಾಜನಗರ: ಸಿಪಿಐ‌, ಎಸ್‌ಐ, ಹೆಡ್‌ಕಾನ್‌ಸ್ಟೆಬಲ್‌ ಅಮಾನತು

ಅಪಘಾತ ಪ್ರಕರಣ ತಿರುಚಿದ ಆರೋಪ, ಆಂತರಿಕ ತನಿಖೆಯಲ್ಲಿ ಸಾಬೀತು

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 16:03 IST
Last Updated 11 ಜೂನ್ 2020, 16:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಮೂರು ವಾರಗಳ ಹಿಂದೆ ನಡೆದಿದ್ದ ಅಪಘಾತ ಪ್ರಕರಣವೊಂದನ್ನು ತಿರುಚಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಗ್ರಾಮಾಂತರ ಸರ್ಕಲ್‌ ಇನ್‌ಸ್ಪೆಕ್ಟರ್‌ ಮಂಜು, ರಾಮಸಮುದ್ರ (ಚಾಮರಾಜನಗರ ಪೂರ್ವ) ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಸುನಿಲ್‌ ಹಾಗೂ ಅದೇ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ನಾಗ ನಾಯಕ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್‌ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈ ಅಧಿಕಾರಿಗಳು ಕರ್ತವ್ಯಲೋಪ ಎಸಗಿರುವುದು ಆಂತರಿಕ ತನಿಖೆಯಲ್ಲಿ ದೃಢಪಟ್ಟಿದೆ. ಈ ಬಗ್ಗೆ ಐಜಿಪಿಯವರಿಗೆ ವರದಿ ನೀಡಿದ್ದೆ. ಅದರ ಆಧಾರದಲ್ಲಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಪ್ರಕರಣ ಏನು?: ಮೇ 15ರ ಮಧ್ಯರಾತ್ರಿ ತಾಲ್ಲೂಕಿನ ಮಾದಾಪುರದ ಬಳಿ ಟಿಪ್ಪರ್‌ ಒಂದಕ್ಕೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದು ಟಿಪ್ಪರ್‌ ಕ್ಲೀನರ್‌ ಮೃತಪಟ್ಟಿದ್ದಾನೆ ಎಂಬ ಪ್ರಕರಣ ಸಂಚಾರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿತ್ತು.

ತಿ.ನರಸೀಪುರದಿಂದ ಚಾಮರಾಜನಗರಕ್ಕೆ ಬರುತ್ತಿದ್ದ ಟಿಪ್ಪರ್‌, ಮಾದಾಪುರ– ಮಸಣಾಪುರದ ನಡುವೆ ಕೆಟ್ಟು ನಿಂತಿತು. ಕ್ಲೀನರ್ ಆಗಿದ್ದ ದೊಡ್ಡಮೋಳೆ ಗ್ರಾಮದ ನವೀನ್‌ ಅವರು ಮೊಬೈಲ್‌ನಲ್ಲಿ ಮಾತನಾಡುತ್ತ ಟಿಪ್ಪರ್‌ನ ಹಿಂಬದಿಯಲ್ಲಿ ನಿಂತಿದ್ದರು. ಈ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಬಂದ ಭತ್ತದ ಮೂಟೆಗಳನ್ನು ತುಂಬಿದ್ದ ಲಾರಿ ನವೀನ್‌ಗೆ ಡಿಕ್ಕಿ ಹೊಡೆಯಿತು. ತೀವ್ರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು ಸಂಚಾರ ಠಾಣೆಯ ಪೊಲೀಸರು ಹೇಳಿದ್ದರು.

ಅಕ್ರಮ ಮರಳು ಸಾಗಾಟ?: ಪ್ರಕರಣ ನಡೆದ ಒಂದೆರಡು ದಿನಗಳ ನಂತರ ಈ ಬಗ್ಗೆ ಹಲವು ವದಂತಿಗಳು ಹರಿದಾಡಲು ಆರಂಭಿಸಿದ್ದವು.

ಟಿಪ್ಪರ್‌ನಲ್ಲಿ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿತ್ತು. ಈ ವಿಚಾರವನ್ನು ತಿಳಿದ ಇನ್‌ಸ್ಪೆಕ್ಟರ್‌ ಮಂಜು ಅವರು ಮಾದಾಪುರದ ಬಳಿ ಟಿಪ್ಪರ್‌ ಅಡ್ಡ ಹಾಕಿದಾಗ ಚಾಲಕನಾಗಿದ್ದ ನವೀನ್‌ ತಪ್ಪಿಸಿಕೊಳ್ಳುವುದಕ್ಕೆ ಯತ್ನಿಸುವಾಗ ಲಾರಿ ಡಿಕ್ಕಿ ಹೊಡೆದು ಮೃತಪ‍ಟ್ಟಿದ್ದ. ನಂತರ ಅಕ್ರಮ ಮರಳು ಸಾಗಾಟದ ಪ್ರಕರಣ ಮುಚ್ಚಿ ಹಾಕುವುದಕ್ಕಾಗಿ ಟಿಪ್ಪರ್‌ನಲ್ಲಿದ್ದ ಮರಳನ್ನು ಚೆಲ್ಲಿ, ಎಂ.ಸ್ಯಾಂಡ್‌ ತುಂಬಿಸಿ ಟಿಪ್ಪರ್‌ ಅನ್ನು ಮತ್ತೆ ಅದೇ ಸ್ಥಳದಲ್ಲಿ ತಂದಿಡಲಾಗಿತ್ತು. ನಂತರ ಟಿಪ್ಪರ್‌ ಕೆಟ್ಟು ನಿಂತಿತ್ತು, ಚಾಲಕನನ್ನು ಕ್ಲೀನರ್‌ ಎಂದು ಕಥೆ ಕಟ್ಟಲಾಗಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು.

ಎಸ್‌ಪಿ, ಐಜಿಪಿಗೆ ದೂರು: ಈ ಬಗ್ಗೆ ಮಾಹಿತಿ ಇದ್ದ ಕೆಲವರು ಎಸ್‌ಪಿ ಹಾಗೂ ದಕ್ಷಿಣ ವಲಯ ಐಜಿಪಿಯವರಿಗೆ ದೂರು ನೀಡಿದ್ದರು ಎಂದು ಗೊತ್ತಾಗಿದೆ. ಇದರ ಆಧಾರದಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್‌ ಅವರ ನೇತೃತ್ವದಲ್ಲಿ ಆಂತರಿಕ ತನಿಖೆ ನಡೆಸಲಾಗಿತ್ತು. ತನಿಖೆಯ ಸಂದರ್ಭದಲ್ಲಿ ಆರೋಪಗಳೆಲ್ಲ ಸಾಬೀತಾಗಿವೆ. ಇದರ ಆಧಾರದಲ್ಲಿ ಎಸ್‌ಪಿ ಆನಂದಕುಮಾರ್‌ ಅವರು ಮೂವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದರು.

‘ಪ್ರಕರಣದ ಬಗ್ಗೆ ನಮಗೆ ಸ್ಥಳೀಯರು ಹಾಗೂ ಸಾರ್ವಜನಿಕರು ದೂರು ನೀಡಿದ್ದರು. ಪರಿಶೀಲನೆಗಾಗಿ ಆಂತರಿಕ ತನಿಖೆ ನಡೆಸಲಾಗಿತ್ತು. ಅದರಲ್ಲಿ ಪ್ರಕರಣ ತಿರುಚಿರುವುದು ಸಾಬೀತಾಗಿದೆ’ ಎಂದು ಆನಂದಕುಮಾರ್‌ ಹೇಳಿದ್ದಾರೆ.

ಶಿಕ್ಷೆ ಖಚಿತ: ಎಸ್ಪಿ

ನಮ್ಮ ಅಧಿಕಾರಿ ಅಥವಾ ಸಿಬ್ಬಂದಿಯೇ ಆಗಿರಲಿ; ತಪ್ಪು ಮಾಡಿದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಶಿಕ್ಷೆ ಖಚಿತ
ಎಚ್‌.ಡಿ.ಆನಂದಕುಮಾರ್‌, ಎಸ್‌ಪಿ, ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.