ADVERTISEMENT

ವಿನಯ್‌ ಕುಲಕರ್ಣಿ ಬಂಧನಕ್ಕೆ ರಾಜಕೀಯ ಬಣ್ಣ ಸರಿಯಲ್ಲ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 11:06 IST
Last Updated 5 ನವೆಂಬರ್ 2020, 11:06 IST
ವಿನಯ್‌ ಕುಲಕರ್ಣಿ
ವಿನಯ್‌ ಕುಲಕರ್ಣಿ   

ಬೆಂಗಳೂರು: ‘ಕಾಂಗ್ರೆಸ್‌ ಮುಖಂಡ ಮತ್ತು ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದಿರುವುದಕ್ಕೆ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ’ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.

ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ‘ವಿನಯ್‌ ಕುಲಕರ್ಣಿ ಅವರ ಮೇಲೆ ಆರೋಪವಿತ್ತು. ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಅವರ ವಿರುದ್ಧ ಹುಬ್ಬಳ್ಳಿ- ಧಾರವಾಡದಲ್ಲಿ ಸಾಕಷ್ಟು ಹೋರಾಟಗಳು ನಡೆದಿದ್ದವು. ಆ ಹೋರಾಟಗಳಿಗೆ ಮಣಿದು ಕಾಂಗ್ರೆಸ್‌ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಇದರಲ್ಲಿ ಬಿಜೆಪಿ ಸರ್ಕಾರದ ಪಾತ್ರವೇನಿದೆ’ ಎಂದು ಪ್ರಶ್ನಿಸಿದರು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ಯಾರ ಮೇಲೆಯಾದರೂ ಆದಾಯ ತೆರಿಗೆ, ಇ.ಡಿ ಅಥವಾ ಸಿಬಿಐ ದಾಳಿ ನಡೆದರೆ ಇಲ್ಲವೇ ಯಾರನ್ನಾದರೂ ಬಂಧಿಸಿದರೆ ಅದೆಲ್ಲಕ್ಕೂ ರಾಜಕೀಯ ದ್ವೇಷ ಎಂದು ಬಣ್ಣ ಕಟ್ಟಿ ಬಿಜೆಪಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ’ ಎಂದರು.

ADVERTISEMENT

ಎರಡೂ ಕಡೆ ಬಿಜೆಪಿ ಗೆಲ್ಲಲಿದೆ: ‘ಉಪ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲುತ್ತದೆ. ಆರ್‌.ಆರ್‌. ನಗರ ಮತ್ತು ಶಿರಾದಲ್ಲಿ ಈ ಬಾರಿ ಕಮಲವೇ ಅರಳಲಿದೆ’ ಎಂದು ಅವರು ಹೇಳಿದರು.

‘ಸರ್ಕಾರ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ಮತದಾರರು ತೀರ್ಪು ನೀಡುವ ವಿಶ್ವಾಸವಿದೆ. ಆ ತೀರ್ಪು ಏನೆಂಬುದು ಇದೇ 10ರಂದು ಗೊತ್ತಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.