ADVERTISEMENT

ತಂತ್ರಗಾರಿಕೆಯ ‘ಶಕ್ತಿ ಕೇಂದ್ರ’ವಾದ ಯಕ್ಸಂಬಾ

ಪ್ರಮುಖ ಇಬ್ಬರು ಅಭ್ಯರ್ಥಿಗಳು, ಶಾಸಕರಿಬ್ಬರ ಊರಿದು

ಎಂ.ಮಹೇಶ
Published 10 ಏಪ್ರಿಲ್ 2019, 19:47 IST
Last Updated 10 ಏಪ್ರಿಲ್ 2019, 19:47 IST
ಯಕ್ಸಂಬಾ ಗ್ರಾಮದ ನೋಟ
ಯಕ್ಸಂಬಾ ಗ್ರಾಮದ ನೋಟ   

ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಚಿಕ್ಕೋಡಿ ತಾಲ್ಲೂಕಿನ ‘ಯಕ್ಸಂಬಾ’ ಗ್ರಾಮ ತಂತ್ರಗಾರಿಕೆಯ ಪ್ರಮುಖ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿದೆ.

ಕ್ಷೇತ್ರದಲ್ಲಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾದ ಹಾಲಿ ಸಂಸದ ಪ್ರಕಾಶ ಹುಕ್ಕೇರಿ ಮತ್ತು ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಇಬ್ಬರೂ ಇದೇ ಗ್ರಾಮದವರು ಮತ್ತು ಅಲ್ಲಿಯೇ ವಾಸಿಸುತ್ತಿದ್ದಾರೆ. ಊರೊಳಗೆ ಹುಕ್ಕೇರಿ ಮನೆ ಇದ್ದರೆ, ಹೊರವಲಯದಲ್ಲಿ ಜೊಲ್ಲೆ ಫಾರ್ಮ್‌ಹೌಸ್‌ ಇದೆ. ಹೀಗಾಗಿ, ಈ ಬಾರಿಯ ಚುನಾವಣೆಯಲ್ಲಿನ ಎಲ್ಲ ಕಾರ್ಯತಂತ್ರಗಳಿಗೂ ಈ ಪುಟ್ಟ ಗ್ರಾಮ ವೇದಿಕೆಯಾಗುತ್ತಿದೆ.

ಪ್ರಕಾಶ ಹುಕ್ಕೇರಿ

ಇಬ್ಬರು ಹುರಿಯಾಳುಗಳಿದ್ದರೂ ಗ್ರಾಮದಲ್ಲಿ ಬ್ಯಾನರ್, ಬಂಟಿಂಗ್‌ಗಳು, ಕಟೌಟ್‌ಗಳ ಅಬ್ಬರ ಸದ್ಯಕ್ಕೆ ಕಾಣಿಸುತ್ತಿಲ್ಲ. ಆದರೆ, ಇಬ್ಬರ ಮನೆಗಳ ಬಳಿಯೂ ಬೆಳಿಗ್ಗೆ ಹಾಗೂ ಸಂಜೆಯಿಂದ ರಾತ್ರಿವರೆಗೂ ಮುಖಂಡರು, ಕಾರ್ಯಕರ್ತರು ಮತ್ತು ಬೆಂಬಲಿಗರ ಜಾತ್ರೆಯೇ ನೆರೆಯುತ್ತಿದೆ. ಪ್ರಚಾರಕ್ಕೆ ಸಂಬಂಧಿಸಿದಂತೆ ಹಲವು ಕಾರ್ಯಯೋಜನೆಗಳು ಇಲ್ಲಿಯೇ ಸಿದ್ಧಗೊಳ್ಳುತ್ತಿವೆ.

ADVERTISEMENT

ಎರಡು ದಶಕಗಳಿಂದಲೂ:ಪ್ರಸ್ತುತ ಒಬ್ಬ ಸಂಸದ, ಇಬ್ಬರು ಶಾಸಕರನ್ನು ಈ ಗ್ರಾಮ ಹೊಂದಿದೆ. ಪ್ರಕಾಶ ಹುಕ್ಕೇರಿ ಪುತ್ರ ಗಣೇಶ ಹುಕ್ಕೇರಿ ಚಿಕ್ಕೋಡಿ–ಸದಲಗಾ ಹಾಗೂ ಅಣ್ಣಾಸಾಹೇಬ ಜೊಲ್ಲೆ ಪತ್ನಿ ಶಶಿಕಲಾ ಜೊಲ್ಲೆ ನಿಪ್ಪಾಣಿ ಮತಕ್ಷೇತ್ರದ ಪ್ರತಿನಿಧಿಗಳು. ಇವರಿಬ್ಬರೂ ಸತತ ಎರಡು ಬಾರಿಗೆ ವಿಧಾನಸಭೆ ಪ್ರವೇಶಿಸಿ ಗಮನಸೆಳೆದಿದ್ದಾರೆ. ಈ ಎಲ್ಲ ರಾಜಕೀಯ ಮುಖಂಡರಿಂದಾಗಿ ಎರಡು ದಶಕಗಳಿಂದಲೂ ಯಕ್ಸಂಬಾ ರಾಜಕೀಯ ಶಕ್ತಿ ಕೇಂದ್ರವಾಗಿ ರಾಜ್ಯದಾದ್ಯಂತ ಗಮನಸೆಳೆದಿದೆ.

ತಂದೆಯ ಪುನರಾಯ್ಕೆಗಾಗಿ ಗಣೇಶ ಹುಕ್ಕೇರಿ ಮತ್ತು ಪತಿಯನ್ನು ಗೆಲ್ಲಿಸಿಕೊಳ್ಳುವುದಕ್ಕಾಗಿ ಪತಿ ಶಶಿಕಲಾ ಜೊಲ್ಲೆ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ.

ಗಣೇಶ ಹುಕ್ಕೇರಿ​

ಸದಲಗಾ ವಿಧಾನಸಭೆ ಕ್ಷೇತ್ರದಿಂದ ಯಕ್ಸಂಬಾದವರೇ ಆದ ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ 1994, 1999 ಮತ್ತು 2004ರಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್‌ ಸಾಧನೆ ಮಾಡಿದ್ದರು. 2004ರಲ್ಲಿ ಸದಲಗಾ ಕ್ಷೇತ್ರದ ಚುನಾವಣೆಯಲ್ಲಿ ಅವರಿಗೆ ಯಕ್ಸಂಬಾದವರೇ ಆದ ಅಣ್ಣಾಸಾಹೇಬ ಜೊಲ್ಲೆ (ಬಿಜೆಪಿ) ತೀವ್ರ ಪೈಪೋಟಿ ನೀಡಿದ್ದರು. ಕ್ಷೇತ್ರ ಪುನರ್ವಿಂಗಡಣೆ ನಂತರ ಚಿಕ್ಕೋಡಿ–ಸದಲಗಾ ವಿಧಾನಸಭೆ ಕ್ಷೇತ್ರದಲ್ಲೂ ಹುಕ್ಕೇರಿ (2008 ಮತ್ತು 2013) ಗೆದ್ದು ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿಯೇ ಉಳಿಸಿಕೊಂಡಿದ್ದರು.

ಲೋಕಸಭೆಗೆ ತಂದೆ, ವಿಧಾನಸಭೆಗೆ ಪುತ್ರ:ಬದಲಾದ ರಾಜಕೀಯ ಸನ್ನಿವೇಶದಲ್ಲಿ, 2014ರಲ್ಲಿ ಚಿಕ್ಕೋಡಿ ಮತಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ ಪ್ರಕಾಶ ಹುಕ್ಕೇರಿ ಆಯ್ಕೆಯಾದರು. ತೆರವಾದ ಚಿಕ್ಕೋಡಿ–ಸದಲಗಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಪ್ರಕಾಶ ಪುತ್ರ ಗಣೇಶ ಹುಕ್ಕೇರಿ ಗೆದ್ದು ಮೊದಲ ಬಾರಿಗೆ ಶಾಸಕರಾದರು. ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದರು. ಇದರೊಂದಿಗೆ, ತಂದೆ ಸಂಸದ– ಪುತ್ರ ಶಾಸಕರಾಗುವ ಮೂಲಕ ಯಕ್ಸಂಬಾದ ರಾಜಕೀಯ ಇತಿಹಾಸದಲ್ಲಿ ವಿಶೇಷ ಮೈಲುಗಲ್ಲು ಸ್ಥಾಪಿಸಿದ್ದಾರೆ. ಗಣೇಶ ಹಾಲಿ ವಿಧಾನಸಭೆ ಮುಖ್ಯಸಚೇತಕರೂ ಆಗಿದ್ದಾರೆ.

ಅಣ್ಣಾಸಾಹೇಬ ಜೊಲ್ಲೆ​

ಶಶಿಕಲಾ ನೆರೆಯ ನಿಪ್ಪಾಣಿ ವಿಧಾನಸಭೆ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. 2008ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಕಾಕಾಸಾಹೇಬ ಪಾಟೀಲ ವಿರುದ್ಧ ಸೋತಿದ್ದರು. 2013ರಲ್ಲಿ ಗೆದ್ದು ಜಿಲ್ಲೆಯ ಏಕೈಕ ಶಾಸಕಿ ಎನಿಸಿದ್ದರು. 2018ರಲ್ಲಿ ಸತತ 2 ಬಾರಿಗೆ ಗೆದ್ದಿದ್ದಾರೆ.‌

ಈಗಿನ ಲೋಕಸಭಾ ಚುನಾವಣೆಯಲ್ಲೂ ಹುಕ್ಕೇರಿ–ಜೊಲ್ಲೆ ಕುಟುಂಬದ ನಡುವೆಯೇ ಸೆಣಸಾಟ ನಡೆಯುತ್ತಿದೆ. ಸಾಂಪ್ರದಾಯಿಕ ಎದುರಾಳಿಗಳು ಮತ್ತೊಮ್ಮೆ ತೊಡೆ ತಟ್ಟಿದ್ದಾರೆ. ಪ್ರಜಾತಂತ್ರದ ಹಬ್ಬದಲ್ಲಿ ಯಾರಿಗೆ ಜಯಮಾಲೆ ಬೀಳುತ್ತದೆ ಎನ್ನವ ಕುತೂಹಲ ಆ ಭಾಗದ ಜನರಲ್ಲಿದೆ. ರಾಜಕೀಯ ವಲಯದ ಚಿತ್ತ ಕೂಡ ಯಕ್ಸಂಬಾದತ್ತಲೇ ನೆಟ್ಟಿದೆ. ಇಬ್ಬರಲ್ಲಿ ಯಾರೇ ಗೆದ್ದರೂ ಯಕ್ಸಂಬಾಕ್ಕೇ ಹೆಸರು!

ಶಶಿಕಲಾ ಜೊಲ್ಲೆ​

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.