ADVERTISEMENT

‘ರಾಜಕೀಯ ವಂಶಪಾರಂಪರ್ಯ ವ್ಯಾಪಾರವಲ್ಲ’: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 16:03 IST
Last Updated 1 ಜನವರಿ 2023, 16:03 IST
ಡಾ.ಸಿ.ಎನ್‌.ಅಶ್ವತ್ಥನಾರಾಯಣ
ಡಾ.ಸಿ.ಎನ್‌.ಅಶ್ವತ್ಥನಾರಾಯಣ   

ಬೆಂಗಳೂರು: ‘ರಾಜಕೀಯ ವಂಶಪಾರಂಪರ್ಯವಾಗಿ ನಡೆಸುವ ವ್ಯಾಪಾರವಲ್ಲ. ಅಪ್ಪ, ಮಗ, ಮೊಮ್ಮಗ, ಮರಿಮಗ ಅಧಿಕಾರಕ್ಕಾಗಿ ಟವೆಲ್‌ ಹಾಕುವುದು ನಿಲ್ಲಬೇಕು’ ಎಂದು ಜೆಡಿಎಸ್‌ ನಾಯಕರ ವಿರುದ್ಧ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು, ‘ಅಪ್ಪನ ನಂತರ ಮಗ, ನಂತರ ಮೊಮ್ಮಗ ಹೀಗೆ ಟವೆಲ್‌ ಹಾಕುತ್ತಾರೆ. ಅನುಕಂಪ ಸೃಷ್ಟಿಸಿ ಗೆದ್ದೂ ಬರುತ್ತಾರೆ. ಆದರೆ, ಜನಸೇವೆ ಮಾಡುವುದಿಲ್ಲ. ಉದ್ಯೋಗ ಬೇಕು ಎಂದು ರಾಜಕೀಯಕ್ಕೆ ಬರಬೇಕಾ? ಅವಕಾಶ ಸಿಕ್ಕಾಗ ಜನಸೇವೆ ಮಾಡುವ ಜವಾಬ್ದಾರಿ ನಿರ್ವಹಿಸಬೇಕಾ’ ಎಂದು ಪ್ರಶ್ನಿಸಿದರು.

‘ರಾಮನಗರ ಕ್ಷೇತ್ರವನ್ನು ಹೇಗಿದೆ ಎಂಬುದನ್ನು ನೋಡಬೇಕು. ಚನ್ನಪಟ್ಟಣ ಕ್ಷೇತ್ರದ ಕತೆಯೂ ಹಾಗೆಯೇ ಇದೆ. ಮುಖ್ಯಮಂತ್ರಿಯೊಬ್ಬರು ಪ್ರತಿನಿಧಿಸುವ ಕ್ಷೇತ್ರವೇ ಎಂದು ಅಚ್ಚರಿಯಾಗುತ್ತದೆ. ನಾವೇನು ಓಬೀರಾಯನ ಕಾಲದಲ್ಲಿ ಇದ್ದೇವಾ? ಎಂಥೆಂಥವರಿಗೆ ಅಧಿಕಾರ ಕೊಟ್ಟಿದ್ದೇವಲ್ಲಾ’ ಎಂದರು.

ADVERTISEMENT

‘ರಾಜ್ಯದ ಎಲ್ಲ ಭಾಗಗಳಲ್ಲೂ ಬಿಜೆಪಿ ಬಲಿಷ್ಠವಾಗಿ ಬೆಳೆಯಬೇಕು ಮತ್ತು ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕು ಎಂಬುದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಗುರಿ. ಆ ಕಾರಣಕ್ಕಾಗಿಯೇ ಬಿಜೆಪಿಯ ಎದುರಾಳಿ ಯಾರು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. 2008 ಹಾಗೂ 2018ರ ಚುನಾವಣೆಯಂತೆ ಅತಂತ್ರ ಫಲಿತಾಂಶ ಬರುವುದನ್ನು ತಪ್ಪಿಸುವುದು ಇದರ ಉದ್ದೇಶ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.