ADVERTISEMENT

ಭಕ್ತರ ಮನೆ ಬಾಗಿಲಿಗೆ ಶಬರಿಮಲೆ ಪ್ರಸಾದ ತಲುಪಿಸಲಿದೆ ಅಂಚೆ ಇಲಾಖೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2020, 16:03 IST
Last Updated 10 ಡಿಸೆಂಬರ್ 2020, 16:03 IST
   

ಬೆಂಗಳೂರು: ಶಬರಿಮಲೆಯ ಅಯ್ಯಪ್ಪಸ್ವಾಮಿ ಪ್ರಸಾದವನ್ನು ಭಕ್ತರ ಮನೆ ಬಾಗಿಲಿಗೆ (ಹೋಂ ಡೆಲಿವರಿ ಸ್ಕೀಂ) ತಲುಪಿಸಲು ಅಂಚೆ ಇಲಾಖೆ ಮುಂದಾಗಿದೆ.

ಫೆಬ್ರವರಿ ಎರಡನೇ ವಾರದವರೆಗೂ ಶಬರಿಮಲೆಯಲ್ಲಿ ದೇವರ ದರ್ಶನಕ್ಕೆ ಅವಕಾಶವಿರಲಿದೆ. ಆದರೆ, ಈ ಬಾರಿ ಕೋವಿಡ್ ಕಾರಣ ಸೀಮಿತ ಭಕ್ತರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಕೋವಿಡ್ ಮಾರ್ಗಸೂಚಿಗಳನ್ನು ಅಲ್ಲಿ ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಹೀಗಾಗಿ ಭಕ್ತರಿಗೆ ಪ್ರಸಾದ ತಲುಪಿಸಲು ಅಂಚೆ ಇಲಾಖೆಯು ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ನೋಡಿಕೊಳ್ಳುತ್ತಿರುವ ದೇವಸ್ವಂ ಮಂಡಳಿಯ ಜತೆಗೆ ಒಪ್ಪಂದ ಮಾಡಿಕೊಂಡಿದೆ.

ಪ್ರಸಾದದ ಕಿಟ್‌ವೊಂದಕ್ಕೆ ₹ 450 ನಿಗದಿಪಡಿಸಲಾಗಿದೆ. ‘ಸ್ವಾಮಿ ಪ್ರಸಾದಂ’ ಹೆಸರಿನ ಈ ಕಿಟ್‌ನಲ್ಲಿ ಒಂದು ಪ್ಯಾಕೆಟ್‌ ‘ಅರವಣ’ ಪಾಯಸ, ತುಪ್ಪ, ಅರಿಶಿನ–ಕುಂಕುಮ, ವಿಭೂತಿ ಹಾಗೂ ಅರ್ಚನೆಯ ಪ್ರಸಾದ ಇರಲಿದೆ.ಅಯ್ಯಪ್ಪ ಸ್ವಾಮಿಯ ಸನ್ನಿಧಿಯಲ್ಲಿ ಸಿದ್ಧವಾದ ಪ್ರಸಾದವನ್ನು ಸ್ಪೀಡ್‌ ಪೋಸ್ಟ್‌ ಮೂಲಕ ಗರಿಷ್ಠ ಹತ್ತು ದಿನಗಳ ಒಳಗೆ ಭಕ್ತರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಪ್ರಸಾದವನ್ನು ಬುಕ್‌ ಮಾಡಲು ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್‌ ಮಾಸ್ಟರ್ ಜನರಲ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.