ಬೆಂಗಳೂರು: ಬಿರುಬೇಸಿಗೆಯ ಧಗೆ ಹೆಚ್ಚುತ್ತಿರುವಂತೆಯೇ ಆಗಾಗ್ಗೆ ಕೈಕೊಡುವ ವಿದ್ಯುತ್, ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ನಿತ್ಯದ ಜನ ಜೀವನವನ್ನು ಹೈರಾಣಾಗಿಸಿದೆ. ಸರ್ಕಾರ ಅಧಿಕೃತವಾಗಿ ಲೋಡ್ ಶೆಡ್ಡಿಂಗ್ ಪ್ರಕಟಿಸಿಲ್ಲ. ಆದರೆ, ದುರಸ್ತಿ ನೆಪದಲ್ಲಿ ನಿತ್ಯ ಜಾರಿಯಲ್ಲಿದೆ.
ಜಿಲ್ಲಾವಾರು ಮಾಹಿತಿ ಪ್ರಕಾರ, ಹಗಲಿನ ಹೊತ್ತಿನ ಜೊತೆಗೆ ರಾತ್ರಿಯ ಹೊತ್ತೂ, 4–5 ಗಂಟೆ ಅನಿಯಮಿತ ವಿದ್ಯುತ್ ಕಡಿತ ಆಗುತ್ತಿದೆ. ಸಮಸ್ಯೆಯನ್ನು ಇನ್ನಷ್ಟು ಸಂಕೀರ್ಣವಾಗಿಸಿದೆ. ಗೃಹ,ವಾಣಿಜ್ಯ ಸಂಪರ್ಕಗಳ ಸ್ಥಿತಿ ಇದಾದರೆ, ಕೃಷಿಗೆ ನೀರು ಹಾಯಿಸಲೂ ಸಮಸ್ಯೆ ಹೆಚ್ಚಿದೆ.
ಜಿಲ್ಲೆಯಾದ್ಯಂತ ದುರಸ್ತಿ,ಕಾಮಗಾರಿ ಹೆಸರಿಲ್ಲಿ ಪದೇ ಪದೆ ವಿದ್ಯುತ್ ಕಡಿತ ಆಗುತ್ತಿದೆ. ಅಧಿಕಾರಿಗಳು ದುರಸ್ತಿ ನೆಪ ಒಡ್ಡುತ್ತಿದ್ದಾರೆ ಎಂಬ ದೂರು ವ್ಯಾಪಕವಾಗಿದೆ.
‘ಪದೇ ಪದೇ ವಿದ್ಯುತ್ ಕಡಿತ ಆಗುತ್ತಿದೆ. ಬೇಸಿಗೆ ಧಗೆ ಹೆಚ್ಚಿದೆ. ಕುಡಿಯುವ ನೀರು ಹಾಗೂ ಕೃಷಿಗೆ ಗುಣಮಟ್ಟದ ವಿದ್ಯುತ್ ನೀಡಬೇಕು. ಪರೀಕ್ಷೆಗಳಿರುವ ಕಾರಣ ರಾತ್ರಿ ವೇಳೆ ವಿದ್ಯುತ್ ಕಡಿತ ಮಾಡಬಾರದು’ ಎಂದು ರೈತ ಸಂಘದ ಮುಖಂಡರು ಆಗ್ರಹಪಡಿಸಿದ್ದಾರೆ.
ಜಿಲ್ಲೆಯ ಕೆಲವೆಡೆ ಕೃಷಿಗೆ 5 ಗಂಟೆಯಷ್ಟೇ ವಿದ್ಯುತ್ ಸಿಗುತ್ತಿದೆ. ಜಗಳೂರು ತಾಲ್ಲೂಕಿನಲ್ಲಿ ವೋಲ್ಟೆಜ್ ಸಮಸ್ಯೆ ಇದೆ. ಬೆಳೆ ಒಣಗುತ್ತಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ರಾತ್ರಿ 6 ಗಂಟೆಯಿಂದ ಬೆಳಿಗ್ಗೆ 9 ಗಂಟೆವರೆಗೆ ತ್ರಿ–ಫೇಸ್ ವಿದ್ಯುತ್ ಸರಬರಾಜು ವೇಳೆ ತೋಟದ ಮನೆಗಳಿಗೆ ವಿದ್ಯುತ್ ಸ್ಥಗಿತಗೊಳ್ಳುತ್ತಿದೆ. ಮೆಸ್ಕಾಂ ವ್ಯಾಪ್ತಿಯ ಶಿವಮೊಗ್ಗ ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ ಸದ್ಯ ಬಾಧಿಸುತ್ತಿಲ್ಲ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ವ್ಯಾಪ್ತಿಯ ಮೈಸೂರು ಭಾಗದ ಜಿಲ್ಲೆಗಳಲ್ಲಿ ಆಗಾಗ್ಗೆ ವಿದ್ಯುತ್ ಕೈಕೊಡುತ್ತಿದ್ದು, ಅಧಿಕಾರಿಗಳಿಂದ ದುರಸ್ತಿ, ತುರ್ತು ಕಾಮಗಾರಿಯ ಸಿದ್ಧ ಉತ್ತರ ಸಿಗುತ್ತಿದೆ.
ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಅಧಿಕೃತ ಲೋಡ್ ಶೆಡ್ಡಿಂಗ್ ಇಲ್ಲದಿದ್ದರೂ, ‘ದುರಸ್ತಿಗಾಗಿ’ ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯವರೆಗೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಎಂಬ ದೂರುಗಳು ಸಾಮಾನ್ಯವಾಗಿ ಕೇಳಿಬರುತ್ತಿವೆ.
‘ವಿದ್ಯುತ್ ಪೂರೈಕೆಯಲ್ಲಿ ಅಭಾವ ಆಗಿಲ್ಲ. ತ್ರೈಮಾಸಿಕ ನಿರ್ವಹಣೆ, ದೂರು ಬಂದಲ್ಲಿ ದುರಸ್ತಿ ನಡೆಯುತ್ತಿದೆ. ಹೀಗಾಗಿ ವ್ಯತ್ಯಯ ಆಗಿರಬಹುದು’ ಎಂದು ಸೆಸ್ಕ್ ನಿಗಮದ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲರಾಜು ತಿಳಿಸಿದರು.
ಹುಬ್ಬಳ್ಳಿ: ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ನಿರಂತರವಾಗಿ ವಿದ್ಯುತ್ ಕಡಿತ ಆಗುತ್ತಿದೆ. ಪಟ್ಟಣ, ಗ್ರಾಮೀಣ ಭಾಗದಲ್ಲಿ ಪ್ರತಿದಿನ ವಿದ್ಯುತ್ ಕಡಿತವಿದೆ. ಟ್ರಿಪ್ ಸಮಸ್ಯೆಯಿಂದ ಪಂಪ್‌ಸೆಟ್‌ಗಳು ಹಾಳಾಗುತ್ತಿವೆ. ಬೆಳೆಗಳು ಒಣಗಿ ಹೋಗುತ್ತಿವೆ ಎಂಬ ದೂರುಗಳಿವೆ.
ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ವ್ಯಾಪ್ತಿಯಲ್ಲಿ ಇದೇ ಸ್ಥಿತಿಯಿದೆ. ‘ತಾಂತ್ರಿಕ ಕಾರಣಗಳಿಗಾಗಿ, ರಿಪೇರಿ ದುರಸ್ತಿಗಾಗಿ ಮಾತ್ರ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ’ ಎನ್ನುವುದು ಅಧಿಕಾರಿಗಳ ಸಿದ್ಧ ಉತ್ತರ.
‘ಉತ್ತರ ಕನ್ನಡ ಜಿಲ್ಲೆಯಲ್ಲಿ ವಿದ್ಯುತ್ ಕಡಿತಕ್ಕೆ ಅಧಿಕಾರಿಗಳು ಜಂಗಲ್ ಕಟಿಂಗ್ ನೆಪ ಹೇಳಿದರೆ, ಹಾವೇರಿ ಜಿಲ್ಲೆಯಲ್ಲಿ ತಾಂತ್ರಿಕ ನಿರ್ವಹಣೆ ಕಾಮಗಾರಿ ಹಾಗೂ ಹಳೇ ಕಂಬ–ತಂತಿಗಳ ಬದಲಾವಣೆ ಕೆಲಸ ನಡೆಯುತ್ತಿದೆ ಎಂಬ ಸಬೂಬು ಹೇಳುತ್ತಾರೆ.
ಕಲಬುರಗಿ: ಜೆಸ್ಕಾಂ ವ್ಯಾಪ್ತಿಯಲ್ಲಿ ಬಹುತೇಕ ಸಮಸ್ಯೆಯಿಲ್ಲ. ಈ ವ್ಯಾಪ್ತಿಯ ಕೆಲ ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ಅಲ್ಪಾವಧಿಗೆ ವಿದ್ಯುತ್ ಸ್ಥಗಿತಗೊಳಿಸಲಾಗುತ್ತಿದೆ. ಜೊತೆಗೆ ಕೃಷಿ ಪಂಪ್‌ಸೆಟ್‌ಗಳಿಗೆ ವೋಲ್ಟೇಜ್ ಸಮಸ್ಯೆ ಕಾಡುತ್ತಿದೆ ಎಂಬ ಆರೋಪಗಳಿವೆ.
ವಿದ್ಯುತ್ ಕಡಿತ ಕುರಿತು ಪೂರ್ವಭಾವಿಯಾಗಿ ಮಾಹಿತಿ ನೀಡುತ್ತಿಲ್ಲ. ಏಕಾಏಕಿ ಕಡಿತ ಮಾಡುತ್ತಾರೆ. ಕೇಳಿದರೆ ದುರಸ್ತಿ ಎನ್ನುತ್ತಾರೆ ಎಂಬುದು ನಾಗರಿಕರ ದೂರು.
ಯಾದಗಿರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅನಿಯಮಿತ ವಿದ್ಯುತ್ ಕಡಿತ ಆಗುತ್ತಿದೆ. ಕಲಬುರಗಿ, ಬೀದರ್, ಕೊಪ್ಪಳ ಜಿಲ್ಲೆಗಳಲ್ಲಿ ಪ್ರಸ್ತುತ ಸಮಸ್ಯೆಯಿಲ್ಲ.
ಮಂಗಳೂರು: ಮೆಸ್ಕಾಂ ವ್ಯಾಪ್ತಿಯ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ವೋಲ್ಟೇಜ್ ಸಮಸ್ಯೆಯೂ ಇದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ವಿದ್ಯುತ್ ಕಡಿತ ಕಡಿಮೆ ಇದೆ.
ಮೆಸ್ಕಾಂ ವ್ಯಾಪ್ತಿಯಲ್ಲಿ ಕೈಗಾರಿಕೆಗೆ ಹಾಗೂ ಗೃಹಬಳಕೆ ವಿದ್ಯುತ್ ಪೂರೈಕೆಯಲ್ಲಿ ಅನಿಯಮಿತ ಲೋಡ್‌ಶೆಡ್ಡಿಂಗ್ ಇಲ್ಲ.
‘ಕೆಲವೆಡೆ ಕಡೆ ಉಪಕರಣಗಳು ಕೆಟ್ಟಿದ್ದರಿಂದ ಪೂರೈಕೆ ವ್ಯತ್ಯಯವಾಗಿತ್ತು. ಅದನ್ನು ಹೊರತುಪಡಿಸಿ ಯಾವುದೇ ಸಮಸ್ಯೆ ಇಲ್ಲ’ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದರು.
‘ಕೃಷಿ ಪಂಪ್‌ಸೆಟ್‌ಗೆ ಒಮ್ಮೊಮ್ಮೆ 5 ಗಂಟೆಯೂ ವಿದ್ಯುತ್ ಸಿಗುವುದಿಲ್ಲ. ಇದರಿಂದ ಕೃಷಿ ಚಟುವಟಿಕೆಗೆ ತೊಂದರೆ ಉಂಟಾಗುತ್ತಿದೆಹುಚ್ಚವನಹಳ್ಳಿ ಮಂಜುನಾಥ್ ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ ದಾವಣಗೆರೆ
ಸಿಂಗಲ್ ಫೇಸ್ ವಿದ್ಯುತ್ ಪೂರೈಸುವಾಗ ರಾತ್ರಿ ವೇಳೆಯಲ್ಲಿ ಪಂಪ್‌ಸೆಟ್ ಚಾಲನೆ ಮಾಡಿದಲ್ಲಿ ಫೀಡರ್ ಟ್ರಿಪ್ ಆಗಲಿದೆ.ಇದರಿಂದ ವಿದ್ಯುತ್ ವ್ಯತ್ಯಯ ನಿಗಮ ಹೊಣೆ ಅಲ್ಲ.ಕೃಷ್ಣಪ್ಪ ಸೂಪರಿಂಟೆಂಡೆಂಟ್ ಎಂಜಿನಿಯರ್ ಸೆಸ್ಕ್ಹಾಸನ ವೃತ್ತ
4672 ವಿದ್ಯುತ್ ಪರಿವರ್ತಕನಿರ್ವಹಣೆ ನಡೆದಿದೆ. ಕೊಡಗಿನಲ್ಲಿ ವಿತರಣ ಜಾಲ ಬಲಪಡಿಸುತ್ತಿದ್ದೇವೆ. ಮೈಸೂರಿನಲ್ಲಿ ಭೂಗತ ಕೇಬಲ್‌ಗಳನ್ನು ಅಳವಡಿಸುತ್ತಿದ್ದೇವೆ. ವ್ಯತ್ಯಯ ಆಗಿರಬಹುದು ಕೆ.ಎಂ. ಮುನಿಗೋಪಾಲರಾಜು ಪ್ರಭಾರ ವ್ಯವಸ್ಥಾಪಕ ಸೆಸ್ಕ್
ಜಿಲ್ಲೆಯಲ್ಲಿ ವಿದ್ಯುತ್ ಕೊರತೆ ಇಲ್ಲ ತಾಂತ್ರಿಕ ಕಾರಣ ದುರಸ್ತಿಗೆ ಮಾತ್ರ ವಿದ್ಯುತ್ ಕಡಿತ ಮಾಡುತ್ತಿದ್ದೇವೆ. ಕೃಷಿಗೆ 7ತಾಸು ವಿದ್ಯುತ್ ಕೊಡುತ್ತಿದ್ದೇವೆ.ರಾಜೇಶ್ ಕಲ್ಯಾಣಶೆಟ್ಟಿ ಇಇ ಗದಗ ವಿಭಾಗ ಹೆಸ್ಕಾಂ
ಜೆಸ್ಕಾಂ ವ್ಯಾಪ್ತಿಯಲ್ಲಿ ಪ್ರಸ್ತುತ ಸರಾಸರಿ 34 ದಶಲಕ್ಷ ಯೂನಿಟ್ ವಿದ್ಯುತ್‌ಗೆ ಬೇಡಿಕೆ ಇದೆ. ಇದು ಹಂಚಿಕೆ ಆಗಿರುವುದಕ್ಕಿಂತ ಕಡಿಮೆ. ಆದರೆ ತಾಂತ್ರಿಕ ತೊಂದರೆ ಸರಿಪಡಿಸಲು ವಿದ್ಯುತ್ ಕಡಿತ ಮಾಡಲಾಗುತ್ತಿದೆ.ಜೆಸ್ಕಾಂ ಅಧಿಕಾರಿಗಳು ಕಾರ್ಪೋರೇಟ್ ಕಚೇರಿ ಕಲಬುರಗಿ.
ಕೋಲಾರ: ಸಂಜೆ 6ರಿಂದ ರಾತ್ರಿ 10ಗಂಟೆ ಅವಧಿಯಲ್ಲಿ ಪದೇ ಪದೇ ಕೈಕೊಡುವ ವಿದ್ಯುತ್
ದಾವಣಗೆರೆ: ಕೃಷಿಗೆ 7 ಗಂಟೆ ವಿದ್ಯುತ್ ಭರವಸೆ ನೀಡಲಾಗಿತ್ತು. ಆದರೆ, ಐದು ಗಂಟೆ ಕೊಡಲಾಗುತ್ತಿದೆ. ಅಲ್ಲೂ ವೋಲ್ಟೇಜ್, ಟ್ರಿಪ್ ಸಮಸ್ಯೆ ಕಾಡುತ್ತಿದೆ
ಮೈಸೂರು ಭಾಗದ ಜಿಲ್ಲೆಗಳಲ್ಲಿ ಬೆಳಿಗ್ಗೆ 10 ರಿಂದ 5ರವರೆಗೆ ಆಗಾಗ್ಗೆ ಕೈಕೊಡುವ ವಿದ್ಯುತ್. ಹಳ್ಳಿ ಕಡೆ ರಾತ್ರಿ ವೇಳೆ ಸಿಂಗಲ್ ಫೇಸ್ ವಿದ್ಯುತ್
ಬೆಳಗಾವಿ: ಬೆಳಿಗ್ಗೆ 9 ರಿಂದ ಸಂಜೆ 6ರವರೆಗೆ ವಿವಿಧ ಫೀಡರ್‌ಗಳಲ್ಲಿ ವಿದ್ಯುತ್ ಸ್ಥಗಿತ. ಮಳೆಗಾಲದ ಸಮಸ್ಯೆ ಸರಿಪಡಿಸಲು ಕಡಿತ ಎಂಬ ಸ್ಪಷ್ಟನೆ
ಉತ್ತರ ಕನ್ನಡ: ಲೋಡ್ ಶೆಡ್ಡಿಂಗ್ ಇಲ್ಲ. ಆದರೆ ಜಂಗಲ್ ಕಟಿಂಗ್, ದುರಸ್ತಿಗಾಗಿ ಬುಧವಾರ, ಗುರುವಾರ 7–8 ತಾಸು ವಿದ್ಯುತ್ ಪೂರೈಕೆ ಸ್ಥಗಿತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.