ADVERTISEMENT

ಯೂನಿಟ್‌ಗೆ 33 ಪೈಸೆ ಹೆಚ್ಚಳ

ವಿದ್ಯುತ್ ದರ: ನಿಗದಿತ ಶುಲ್ಕದಲ್ಲೂ ಏರಿಕೆ; ಏ. 1ರಿಂದಲೇ ಅನ್ವಯ

​ಪ್ರಜಾವಾಣಿ ವಾರ್ತೆ
Published 30 ಮೇ 2019, 20:32 IST
Last Updated 30 ಮೇ 2019, 20:32 IST

ಬೆಂಗಳೂರು: ಏಪ್ರಿಲ್‌ 1ರಿಂದಲೇ ಪೂರ್ವಾನ್ವಯವಾಗುವಂತೆ ಪ್ರತಿ ಯೂನಿಟ್‌ ವಿದ್ಯುತ್‌ ದರ ಸರಾಸರಿ 33 ಪೈಸೆ ಹೆಚ್ಚಳವಾಗಲಿದೆ.

ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ದರ ಹೆಚ್ಚಳದ ಬಿಸಿ ನಾಗರಿಕರಿಗೆ, ಉದ್ಯಮಗಳಿಗೆ ತಟ್ಟಲಿದೆ. ಬರದಿಂದ ತತ್ತರಿಸಿರುವ ರಾಜ್ಯದ ಜನರಿಗೆ ಮತ್ತೊಂದು ಬರೆ ಎಳೆದಂತಾಗಲಿದೆ.

ಉತ್ಪಾದನಾ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಳವಾಗಿದ್ದು, ದರ ಏರಿಕೆಗೆ ಅನುಮತಿ ನೀಡಬೇಕು ಎಂದು ರಾಜ್ಯದ ಐದು ಎಸ್ಕಾಂಗಳು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಮನವಿ ಮಾಡಿದ್ದವು. ಎಸ್ಕಾಂಗಳು ಕೋರಿದ್ದ ಮಟ್ಟದಲ್ಲಿ ದರ ಏರಿಕೆಗೆ ಒಪ್ಪಿಗೆ ಸೂಚಿಸಿಲ್ಲ.

ADVERTISEMENT

ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಕೆಇಆರ್‌ಸಿ ಅಧ್ಯಕ್ಷ ಶಂಭು ದಯಾಳ್ ಮೀನಾ ಅವರು, ಎಲ್ಲಾ ಎಸ್ಕಾಂಗಳು ಯೂನಿಟ್‌ಗೆ ಸರಾಸರಿ ₹1.20 (ಶೇ 17.37) ಏರಿಕೆ ಮಾಡುವಂತೆ ಬೇಡಿಕೆ ಸಲ್ಲಿಸಿದ್ದವು. ಆದರೆ ಎಲ್ಲವನ್ನೂ ಪರಿಶೀಲಿಸಿ ದರ ಪರಿಷ್ಕರಣೆ ಮಾಡಲಾಗಿದೆ’ ತಿಳಿಸಿದರು.

‘ರಾಜ್ಯದ ಎಲ್ಲ ಎಲ್.ಟಿ ಕೈಗಾರಿಕೆಗಳಿಗೆ ಪ್ರತಿ ಯೂನಿಟ್‌ಗೆ 15ರಿಂದ 20 ಪೈಸೆ, ಎಚ್.ಟಿ ಕೈಗಾರಿಕೆಗಳಿಗೆ ಯೂನಿಟ್‌ಗೆ 20 ಪೈಸೆ ಹೆಚ್ಚಳ ಮಾಡಲು ಅನುಮತಿ ನೀಡಲಾಗಿದೆ’ ಎಂದು ಅವರು ಹೇಳಿದರು.

ಬೆಸ್ಕಾಂ ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಏಕ ರೂಪದ ದರ ಪರಿಷ್ಕರಣೆ ಮಾಡಲಾಗಿದೆ.

ವಿವಿಧ ಹಂತಗಳಲ್ಲಿ ಪ್ರತಿ ಯೂನಿಟ್‌ಗೆ 15ರಿಂದ 30 ಪೈಸೆಗಳು ಏರಿಕೆ ಆಗಲಿದೆ. ಆದರೆ ನಿಗದಿತ ಶುಲ್ಕ ಸೇರಿದಂತೆ ವಿದ್ಯುತ್ ದರದಿಂದ ಒಟ್ಟಾರೆ ವಸೂಲಾಗುವ ಮೊತ್ತದಲ್ಲಿ ಎಲ್ಲ ಎಸ್ಕಾಂ ಗ್ರಾಹಕರಿಗೆ ಯೂನಿಟ್‌ಗೆ ಸರಾಸರಿ 33 ಪೈಸೆ ಹೆಚ್ಚಳವಾಗಲಿದೆ. ಒಟ್ಟಾರೆ ಶೇ 4.80ರಷ್ಟು ದರ ಏರಿಕೆ ಮಾಡಿದಂತೆ ಆಗಲಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಯೂನಿಟ್‌ಗೆ 25 ಪೈಸೆ ಏರಿಕೆ ಮಾಡಲಾಗಿದೆ.

ಹಾಲಿ ಇರುವ ವಿದ್ಯುತ್ ದರಗಳ ವ್ಯವಸ್ಥೆಯಲ್ಲಿ ಗ್ರಾಹಕರಿಂದ ವಸೂಲಿಯಾಗುವ ನಿಗದಿತ ಶುಲ್ಕವು (ಫಿಕ್ಸ್‌ಡ್ ಚಾರ್ಜಸ್) ನಿಗದಿತ ವೆಚ್ಚಕ್ಕೆ (ಫಿಕ್ಸ್‌ಡ್ ಕಾಸ್ಟ್) ಸಮನಾಗಿರುವುದಿಲ್ಲ. ಅದರಲ್ಲಿ ಒಂದು ಭಾಗವನ್ನು ಮಾತ್ರ ನಿಗದಿತ ಶುಲ್ಕವೆಂದು ವಸೂಲಿ ಮಾಡುತ್ತಿದ್ದು, ಶೇ 24.70ರಷ್ಟು ಮಾತ್ರ ಸಂಗ್ರಹ ಆಗುತ್ತಿದೆ. ನಿಗದಿತ ಖರ್ಚಿನ ಬಾಕಿ ಮೊತ್ತವನ್ನು ವಿದ್ಯುತ್ ಶುಲ್ಕದ ಮೂಲಕ ವಸೂಲು ಮಾಡಲಾಗುತ್ತಿದೆ. ಹಾಗಾಗಿ ನಿಗದಿತ ಶುಲ್ಕವನ್ನು ವರ್ಷದಿಂದ ವರ್ಷಕ್ಕೆ ಕ್ರಮೇಣ ಹೆಚ್ಚಳ ಮಾಡಲು ಆಯೋಗ ನಿರ್ಧರಿಸಿದೆ.

ನಿಗದಿತ ಶುಲ್ಕವನ್ನು (ನೀರಾವರಿ ಪಂಪ್‌ಸೆಟ್‌ ಹೊರತುಪಡಿಸಿ) ಪ್ರತಿ ಕಿಲೊ ವಾಟ್/ ಎಚ್‌ಪಿಗೆ ₹5ರಿಂದ ₹10ರ ವರೆಗೆ ಹೆಚ್ಚಿಸಲು ಆಯೋಗವು ಒಪ್ಪಿಗೆ ಸೂಚಿಸಿದೆ.ಇದರಿಂದಾಗಿ ವಿದ್ಯುತ್ ದರ ಏರಿಕೆಯ ಜತೆಗೆ ನಿಗದಿತ ಶುಲ್ಕ ಪಾವತಿಯೂ ದುಬಾರಿಯಾಗಲಿದೆ.

ಮುಖ್ಯಾಂಶಗಳು
* ವಿದ್ಯುತ್ ದರ ಏರಿಕೆ ಏ. 1ರಿಂದಲೇ ಜಾರಿ
* ಬೆಸ್ಕಾಂ ವ್ಯಾಪ್ತಿಯಲ್ಲಿ ಯೂನಿಟ್‌ಗೆ 25 ಪೈಸೆ ಏರಿಕೆ
* ಎಚ್.ಟಿ ಗ್ರಾಹಕರಿಗೆ ಈಗ ನೀಡುತ್ತಿರುವ ವಿಶೇಷ ಪ್ರೋತ್ಸಾಹ ಯೋಜನೆ ಮುಂದುವರಿಕೆ
* ರೈಲ್ವೆ ವಿದ್ಯುತ್ ಮಾರ್ಗದ ಬಳಕೆಗೆ ಪ್ರತಿ ಯೂನಿಟ್‌ಗೆ ₹6.20 ನಿಗದಿ
* ವಿದ್ಯುತ್ ವಾಹನಗಳ ಚಾರ್ಜಿಂಗ್ ಸ್ಟೇಷನ್‌ಗಳಿಗೆ ಪ್ರತಿ ಯೂನಿಟ್‌ಗೆ ₹5 ರಿಯಾಯಿತಿ

ಎಂಜಿನಿಯರ್‌ಗೆ ಲಕ್ಷ ದಂಡ
ವಿದ್ಯುತ್ ಸರಬರಾಜು ಕಂಪನಿಗಳು ಪ್ರತಿ ವಿಭಾಗದಲ್ಲಿ ಗ್ರಾಹಕರ ಸಭೆಗಳನ್ನು ಮೂರು ತಿಂಗಳಿಗೆ ಒಮ್ಮೆ ಸೂಪರಿಂಟೆಂಡಿಂಗ್ ಅಥವಾ ಕಾರ್ಯನಿರ್ವಾಹಕ ಎಂಜಿನಿಯರ್ ಅಧ್ಯಕ್ಷತೆಯಲ್ಲಿ ನಡೆಸಬೇಕು. ಸಭೆ ನಡೆಸಿ ಗ್ರಾಹಕರ ಕುಂದುಕೊರತೆ ಆಲಿಸದಿದ್ದರೆ ಪ್ರತಿ ವಿಭಾಗಕ್ಕೆ ₹1 ಲಕ್ಷ ದಂಡವನ್ನು ಆಯೋಗ ವಿಧಿಸಲಿದೆ. ಈ ದಂಡವನ್ನು ಸಂಬಂಧಿಸಿದ ಅಧಿಕಾರಿಯೇ ಪಾವತಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.