ADVERTISEMENT

ಗೋಹತ್ಯೆ ತಡೆಗೆ ಪಿಎಸ್‌ಐಗಳಿಗೆ ತರಬೇತಿ: ಪ್ರಭು ಚವ್ಹಾಣ್

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 20:45 IST
Last Updated 14 ಸೆಪ್ಟೆಂಬರ್ 2022, 20:45 IST
ಪ್ರಭು ಚವ್ಹಾಣ್
ಪ್ರಭು ಚವ್ಹಾಣ್   

ಬೆಂಗಳೂರು: ‘ಪ್ರಾಣಿಗಳ ಮೇಲೆ ನಡೆಯುವ ಕ್ರೌರ್ಯ ತಡೆಯಲು ಮತ್ತು ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ –2020 ಅನುಷ್ಠಾನಕ್ಕೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಲು ಚಿಂತನೆ ನಡೆದಿದೆ’ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ್ ತಿಳಿಸಿದರು.

ಹೆಬ್ಬಾಳದಲ್ಲಿರುವ ಪಶುಪಾಲನಾ ಭವನದಲ್ಲಿ ಈಚೆಗೆ ನಡೆದ ‘ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ’ ಸಭೆಯ ಬಳಿಕ ಮಾತನಾಡಿದ ಅವರು, ‘ಗೋಹತ್ಯೆ ನಿಷೇಧ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸುವ ವೇಳೆಯಲ್ಲಿ ನಿಯಮಗಳನ್ನು ಅನ್ವಯಿಸುವ ಕುರಿತಂತೆ ಪ್ರತಿ ಜಿಲ್ಲೆಯಲ್ಲಿ ಪೊಲೀಸ್‌ ಅಧಿಕಾರಿಗಳಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಆ ಮೂಲಕ, ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ಅನಧಿಕೃತ ಗೋ ವಧೆ, ಗೋ ಮಾಂಸ ಸಾಗಣೆ ಮತ್ತು ಶೇಖರಣೆ ತಡೆಯಲು ಕೆಲವು ಕಡೆಗಳಲ್ಲಿ ಪೊಲೀಸ್ ಇಲಾಖೆ ಸಹಕಾರ ನೀಡುತ್ತಿದ್ದರೆ, ಕೆಲವು ಕಡೆಗಳಲ್ಲಿ ದೂರು ನೀಡಿದರೂ ಎಫ್‌ಐಆರ್‌ ದಾಖಲಿಸುತ್ತಿಲ್ಲ ಎಂಬ ದೂರುಗಳಿವೆ. ಕಾಯ್ದೆಯಲ್ಲಿರುವ ನಿಯಮಗಳು ಕಟ್ಟುನಿಟ್ಟಾಗಿ ಜಾರಿ ಆಗದೇ ಇರುವುದರಿಂದ ಅಕ್ರಮ ಜಾನುವಾರು ಸಾಗಣೆದಾರರು ಮತ್ತು ಅಕ್ರಮ ಕಸಾಯಿಖಾನೆಗಳ ಮಾಲೀಕರು ಶಿಕ್ಷೆಯಿಂದ
ಪಾರಾಗುತ್ತಿದ್ದಾರೆ. ಈ ಬಗ್ಗೆ ಗೃಹ ಸಚಿವರ ಜೊತೆ ಸಭೆ ನಡೆಸುತ್ತೇನೆ’ ಎಂದೂ ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.