ADVERTISEMENT

ಪಿಎಂ ಆವಾಸ್‌ ಅನುದಾನಕ್ಕೂ ಕತ್ತರಿ: ನೆರೆ ರಾಜ್ಯಗಳಿಗೆ ನೆರವು ಗಣನೀಯ ಏರಿಕೆ

ಮಂಜುನಾಥ್ ಹೆಬ್ಬಾರ್‌
Published 19 ಜುಲೈ 2022, 4:45 IST
Last Updated 19 ಜುಲೈ 2022, 4:45 IST
   

ನವದೆಹಲಿ: ‘ಎಲ್ಲರಿಗೂ ವಸತಿ’ ಒದಗಿಸುವ ಉದ್ದೇಶದಿಂದ ಆರಂಭವಾದ ‘ಪ್ರಧಾನಮಂತ್ರಿ ಆವಾಸ್‌ ಯೋಜನೆ–ನಗರ (ಪಿಎಂಎಯು–ಯು)’ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಕರ್ನಾಟಕ ಸರ್ಕಾರಕ್ಕೆ ಬಿಡುಗಡೆಯಾಗುತ್ತಿರುವ ಅನುದಾನ ಗಣನೀಯವಾಗಿ ಕಡಿಮೆಯಾಗಿದೆ. ಆದರೆ, ನೆರೆಯ ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಿಗೆ ಅನುದಾನ ಹರಿವಿನ ಪ್ರಮಾಣ ಹೆಚ್ಚಾಗಿದೆ.

ದೇಶದಲ್ಲಿರುವ ವಸತಿ ರಹಿತರು, ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮಂಜೂರಾದ ಮನೆಗಳು ಹಾಗೂ ಬಿಡುಗಡೆಯಾದ ಅನುದಾನದ ಬಗ್ಗೆ ಕೇಂದ್ರ ವಸತಿ ಖಾತೆಯ ರಾಜ್ಯ ಸಚಿವ ಕೌಶಲ್‌ ಕಿಶೋರ್ ಅವರು ರಾಜ್ಯಸಭೆಗೆ ಸೋಮವಾರ ಲಿಖಿತ ಉತ್ತರ ನೀಡಿದ್ದಾರೆ. ಈ ಉತ್ತರದ ಪ್ರಕಾರ ‌‌‌ರಾಜ್ಯಕ್ಕೆ ಅನುದಾನ ಇಳಿಕೆಯಾಗಿ ಅಕ್ಕಪಕ್ಕದ ರಾಜ್ಯಗಳಿಗೆ ಭರಪೂರ ಅನುದಾನ ಹಂಚಿಕೆಯಾಗಿರುವುದು ಗೊತ್ತಾಗಿದೆ.

ಕರ್ನಾಟಕಕ್ಕೆ 2017–18ರಲ್ಲಿ 2.22 ಲಕ್ಷ ಮನೆಗಳು ಮಂಜೂರಾಗಿ ₹1,681 ಕೋಟಿ ಅನುದಾನ ಬಿಡುಗಡೆಯಾಗಿತ್ತು. 2021–22ರಲ್ಲಿ67,950 ಮನೆಗಳನ್ನು ಮಂಜೂರು ಮಾಡಿ ₹529 ಕೋಟಿ ಮಾತ್ರ ಬಿಡುಗಡೆಗೊಳಿಸಲಾಗಿದೆ.

ADVERTISEMENT

ತಮಿಳುನಾಡಿಗೆ 2017–18ನೇ ಸಾಲಿನಲ್ಲಿ 1.15 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿತ್ತು ಹಾಗೂ ₹1,194 ಕೋಟಿ ಬಿಡುಗಡೆಗೊಳಿಸಲಾಗಿತ್ತು. 2021–22ರಲ್ಲಿ97,656 ಮನೆಗಳನ್ನು ಮಂಜೂರು ಮಾಡಲಾಗಿದೆ. ಆದರೆ, ಬಿಡುಗಡೆ ಮಾಡಿರುವ ಅನುದಾನದ ಮೊತ್ತ ₹1,569 ಕೋಟಿಗೆ ಏರಿದೆ.

ಆಂಧ್ರ ಪ್ರದೇಶಕ್ಕೆ 2017–18ರಲ್ಲಿ2.42 ಲಕ್ಷ ಮನೆಗಳನ್ನು ಮಂಜೂರು ಮಾಡಿ ₹2,160 ಕೋಟಿ ಬಿಡುಗಡೆ ಮಾಡಲಾಗಿತ್ತು. 2021–22ರಲ್ಲಿ ಮಂಜೂರಾದ ಮನೆಗಳ ಸಂಖ್ಯೆ4.47 ಲಕ್ಷಕ್ಕೆ ಏರಿದೆ. ₹2,475 ಕೋಟಿ ಸಹಾಯಾನುದಾನ ಬಿಡುಗಡೆ ಆಗಿದೆ. ಮಹಾರಾಷ್ಟ್ರಕ್ಕೆ ಮಂಜೂರಾದ ಮನೆಗಳು ಹಾಗೂ ಬಿಡುಗಡೆಯಾದ ಅನುದಾನದ ಪ್ರಮಾಣವೂ ಗಣನೀಯವಾಗಿ ಏರಿಕೆ ಆಗಿದೆ ಎಂಬ ಅಂಶವು ಸಚಿವರ ಉತ್ತರದಲ್ಲಿದೆ.

‘ಈ ಯೋಜನೆಯ ಫಲಾನುಭವಿಗಳ ಆಯ್ಕೆಗಾಗಿ ರಾಜ್ಯಗಳು ಬೇಡಿಕೆ ಸಮೀಕ್ಷೆ ನಡೆಸಿ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿವೆ. ಅದರ ಆಧಾರದಲ್ಲಿ ಮನೆ ಮಂಜೂರು ಮಾಡಿ ಅನುದಾನ ಬಿಡುಗಡೆ ಮಾಡಲಾಗಿದೆ’ ಎಂದೂ ಉತ್ತರದಲ್ಲಿಹೇಳಲಾಗಿದೆ.

‘ಕರ್ನಾಟಕದಲ್ಲಿ ಇನ್ನೂ ಸಹ 30 ಲಕ್ಷಕ್ಕೂ ಅಧಿಕ ವಸತಿ ರಹಿತರು ಇದ್ದಾರೆ. ನಗರ, ಪಟ್ಟಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಸತಿ ರಹಿತರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಫಲಾನುಭವಿಗಳ ಪಟ್ಟಿ ತಯಾರಿಸುವಾಗ ರಾಜ್ಯ ಸರ್ಕಾರದಿಂದಲೂ ಲೋಪ ಆಗಿದೆ. ವೈಜ್ಞಾನಿಕವಾಗಿ ಪಟ್ಟಿ ತಯಾರಿಸಿ ಕೇಂದ್ರಕ್ಕೆ ಸಲ್ಲಿಸಿದ್ದರೆ ಹೆಚ್ಚುವರಿ ಅನುದಾನ ಸಿಗುವ ಸಾಧ್ಯತೆ ಇತ್ತು. ಪಕ್ಕದ ರಾಜ್ಯಗಳು ಈ ಕೆಲಸ ಮಾಡಿವೆ. ಹೀಗಾಗಿ, ಹೆಚ್ಚುವರಿ ಅನುದಾನ ಪಡೆದಿವೆ’ ಎಂದು ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.