ADVERTISEMENT

ಪ್ರಜಾವಾಣಿ ಯುವ ಸಾಧಕರು 2020: ಬನ್ನಿ ಸಾಧಿಸೋಣ, ಸಾಧಕರಾಗೋಣ

ರವೀಂದ್ರ ಭಟ್ಟ
Published 1 ಜನವರಿ 2020, 2:10 IST
Last Updated 1 ಜನವರಿ 2020, 2:10 IST
ಪ್ರಜಾವಾಣಿ ಯುವ ಸಾಧಕರು
ಪ್ರಜಾವಾಣಿ ಯುವ ಸಾಧಕರು    

ಹೊಸ ವರ್ಷದ ಆರಂಭಕ್ಕೆ ಮುನ್ನುಡಿ ಹೇಗಿರಬೇಕು ಎಂದು ಯೋಚಿಸಿದಾಗ ಹೊಳೆದ ಪದಗಳು ‘ಇನ್ನಷ್ಟು ಸಾಧಿಸೋಣ...’. ಈ ಎರಡು ಪದಗಳಲ್ಲಿಯೇ ‘ಏನಾದರೂ ಸಾಧಿಸಬೇಕು’ ಎಂಬ ಪಾಸಿಟಿವ್ ಎನರ್ಜಿ ಇದೆ. ಈಗ ನಾವು ಯಾವ ಸ್ಥಿತಿ ಮುಟ್ಟಿದ್ದೇವೆಯೋ ಅದೂ ಒಂದು ಸಾಧನೆಯೇ ಎಂಬ ಸಾಂತ್ವನವನ್ನು ‘ಇನ್ನಷ್ಟು’ ಎಂಬ ಪದ ನೀಡಿದರೆ, ‘ಸಾಧಿಸೋಣ’ ಎಂಬ ಪದವು ಸಾಧಿಸಬಲ್ಲೆವು ಎಂಬ ಆತ್ವವಿಶ್ವಾಸವನ್ನು ಧ್ವನಿಸುತ್ತದೆ.

‘ಇನ್ನಷ್ಟು ಸಾಧಿಸೋಣ’ ಎಂಬ ಪದಗಳಲ್ಲಿ ‘ಈವರೆಗೆ ಸಾಧಿಸಿದ್ದು ಸಾಲದು’ ಎಂಬ ಅತೃಪ್ತಿಯ ಧ್ವನಿಯೂ ಇದ್ದಂತೆ ಇದೆ ಅಲ್ಲವೇ? ಇಂಥ ಪಾಸಿಟಿವ್ ಅತೃಪ್ತಿಗಳು ಆಗಾಗ ನಮ್ಮನ್ನು ಕಾಡುತ್ತಿರಬೇಕು. ಆಗಲೇ ಬದುಕು ಜಡವಾಗದೆ ಹೊಸ ಚೈತನ್ಯದ ಹುಡುಕಾಟಕ್ಕೆ ಮುಂದಾದೀತು.

‘ಸಾಧನೆ ಎಂದರೇನು? ಸಾಧಕರು ಯಾರು?’ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಎಲ್ಲೆಲ್ಲೋ ಹೋಗಬೇಕಿಲ್ಲ. ಸಾಧಕರು ನಮ್ಮ ಮನೆಯಲ್ಲೇ, ನಮ್ಮ ಊರಿನಲ್ಲೇ ಇರುತ್ತಾರೆ. ಸಾಧನೆಗೆ ಕೇವಲ ಅಂಕಿಸಂಖ್ಯೆಗಳು ಅಥವಾ ಪ್ರಸಿದ್ಧಿಯಷ್ಟೇ ಮಾನದಂಡವೂ ಅಲ್ಲ. ಸಾಧಕರನ್ನು ಗುರುತಿಸಲು, ಸಾಧನೆಯನ್ನು ಮನಗಾಣಲು ತುಸು ಸೂಕ್ಷ್ಮ ಮನಸ್ಸು ಬೇಕಷ್ಟೇ?

ADVERTISEMENT

ನಮ್ಮಲ್ಲಿ ಹಲವರಿಗೆ ಹೊಸ ವರ್ಷದ ನಿರ್ಣಯ ಬರೆದುಕೊಳ್ಳುವ ರೂಢಿಯಿದೆ. ಈ ರೂಢಿಯೂ ನಾವು ಬದಲಾಗುತ್ತೇವೆ, ಬದಲಾಗಬೇಕು ಎಂಬ ಅದಮ್ಯ ಆಸೆಯೊಂದಿಗೇ ಆರಂಭವಾಗುತ್ತದೆ. ಈ ವರ್ಷದ ಜನವರಿ 1ನೇ ತಾರೀಖು ನಮ್ಮೆಲ್ಲರಲ್ಲಿಯೂ ಇನ್ನಷ್ಟು ಸಾಧಿಸಬೇಕು, ಮತ್ತಷ್ಟು ಬೆಳೆಯಬೇಕು ಎನ್ನುವ ತಹತಹ ಹುಟ್ಟುಹಾಕಲಿ. ಅದು ನಮ್ಮ ಹೊಸ ವರ್ಷದ ನಿರ್ಣಯಗಳ ಭಾಗವೂ ಆಗಿರಲಿ.

ಸಾಧಕರ ವಿವರಗಳಿಗೆ

‘ಇನ್ನಷ್ಟು ಸಾಧಿಸೋಣ’ ಎನ್ನುವ ಕನಸಿಗೆ ಮಾದರಿಗಳನ್ನು ಹುಡುಕುವಾಗ ನಮ್ಮ ಸುತ್ತಮುತ್ತಲು ಇರುವ ಹಲವರ ವಿಶಿಷ್ಟ ಬದುಕು ಗಮನ ಸೆಳೆಯಿತು. ಚಿಕ್ಕವಯಸ್ಸಿನಲ್ಲಿ ಗಮನಾರ್ಹ ಸಾಧನೆ ಮಾಡಿದವರ ಜೀವನವೇ ನಮ್ಮೆಲ್ಲರಿಗೂ ಇನ್ನಷ್ಟು, ಮತ್ತಷ್ಟು, ಮಗದಷ್ಟು ಸಾಧಿಸಲು ಪ್ರೇರಣೆ ಒದಗಿಸುವ ಜೀವಚೈತನ್ಯವೂ ಆಗಬಲ್ಲದು.

ಬದಲಾವಣೆ ಮತ್ತು ಹೊಸತನಗಳನ್ನು ಸದಾ ತೆರೆದ ಮನದಿಂದ ಸ್ವಾಗತಿಸುವ ’ಪ್ರಜಾವಾಣಿ‘ಯು 21ನೇ ಶತಮಾನದ 2ನೇ ದಶಕದ ಕೊನೆಯ ವರ್ಷದ ಮೊದಲ ದಿನ ನಮ್ಮ ನಡುವಿನ 140 ಸಾಧಕರನ್ನು ನಿಮಗೆ ಪರಿಚಯಿಸುತ್ತಿದೆ. ಇವರೆಲ್ಲರೂ ನಮ್ಮೂರು, ನಮ್ಮ ಜಿಲ್ಲೆ, ನಮ್ಮ ರಾಜ್ಯದವರೇ ಆಗಿದ್ದಾರೆ. ನಮ್ಮೆಲ್ಲರ ಮನದಲ್ಲಿ ಬೆಚ್ಚಗಿರುವ ‘ಸಾಧಿಸಬೇಕು’ ಎನ್ನುವ ಆಕಾಂಕ್ಷೆಗೆ ಈ ಸಾಧಕರ ಬದುಕು ಪ್ರೇರಣೆಯಾಗಲಿ ಎಂದು ಆಶಿಸುತ್ತೇನೆ.

ಎಲ್ಲಾ ಸಾಧಕರ ವಿವರಗಳನ್ನುhttps://20in20.prajavani.net ಲಿಂಕ್‌ ಬಳಸಿ ಓದಿ.

– ರವೀಂದ್ರ ಭಟ್ಟ

ಕಾರ್ಯನಿರ್ವಾಹಕ ಸಂಪಾದಕ, ಪ್ರಜಾವಾಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.